ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕನ್ನಡ ಭಾಷೆ ತನ್ನದೇ ಆದ ಸಂಸ್ಕೃತಿ, ಹಿರಿಮೆ-ಗರಿಮೆ ಹೊಂದಿದ ಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಒಂದು ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿಯ ಸಂಸ್ಥಾಪಕ ಅಧ್ಯಕ್ಷ ಓಂಕಾರ ಪ್ರಿಯ ಬಾಗೇಪಲ್ಲಿ ಹೇಳಿದರು.ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಪದ ಸಂಪತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಗಳ ಬಳಕೆ ಬಗ್ಗೆ ಜಾಗತಿಕ ಮಟ್ಟದಲ್ಲಿ ವಿಷಯವನ್ನು ಸಂಗ್ರಹಣೆ ಮಾಡಲಾಗಿದೆ. ಅದರಲ್ಲಿ ನಮ್ಮ ಭಾಷೆಯೂ ಕೂಡ ಅಗ್ರಸ್ಥಾನ ದಲ್ಲಿದೆ ಎಂದರು.ಕನ್ನಡದ ಪದಸಂಪತ್ತಿನ ಬಳಕೆ, ಬರವಣಿಗೆ ಹಾಗೂ ಉಚ್ಛಾರಣೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅದರಲ್ಲೂ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅಗತ್ಯತೆ ಹೆಚ್ದಾಗಿದೆ. ಕನ್ನಡ ಭಾಷೆ ಹೆಚ್ಚು ಪದಗಳ ಸಂಪತ್ತನ್ನು ಹೊಂದಿದ ಜಗತ್ತಿನ ಶ್ರೀಮಂತ ಭಾಷೆ ಎಂದರು. ಎಲ್ಲಾ ಧರ್ಮಗಳ ಸಾರವನ್ನು ಒಳಗೊಂಡಿರುವ ಈ ಭಾಷೆಯ ಉಚ್ಚಾರಣೆಗಳಲ್ಲಿ ವಿದ್ಯಾವಂತರಿಂದಲೇ ತಪ್ಪುಗಳಾಗುತ್ತವೆ. ಶಿಕ್ಷಣ ಇಲಾಖೆ ಇದರ ಕಡೆ ಗಮನಹರಿಸಿ ಕನ್ನಡ ಭಾಷೆಯ ಶ್ರೇಷ್ಠತೆಯನ್ನು ಕಾಪಾಡಬೇಕಿದೆ ಎಂದರು.ಸತ್ಯ ಸಂಸ್ಕೃತಿಯನ್ನು ಒಳಗೊಂಡಿರುವ ಕನ್ನಡ ಭಾಷೆ ೨ ಸಾವಿರ ವರ್ಷಗಳಿಗೂ ಹೆಚ್ಚಿನ ಭವ್ಯವಾದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಈ ಭಾಷೆಯನ್ನು ಮರೆಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಕನ್ನಡದ ವರ್ಣಮಾಲೆಗೆ ಮೂರು ಸಾವಿರ ಧಾತುಗಳಿದ್ದರೆ, ಇಂಗ್ಲೀಷ್ ೨೬ ವರ್ಣಮಾಲೆಗೆ ಕೇವಲ ೩೬ ಧಾತುಗಳಿವೆ, ಸಾವು ಅನ್ನುವ ಪದಕ್ಕೆ ಇಂಗ್ಲೀಷಿನಲ್ಲಿ ಡೆತ್ ಎನ್ನುವ ಒಂದೇ ಪದವಿದ್ದರೆ ಕನ್ನಡದಲ್ಲಿ ೭೦೦ಕ್ಕೂ ಹೆಚ್ಚು ಅನ್ವರ್ಥ ನಾಮ ಇವೆ ಎಂದರು.
ಇಂಗ್ಲೀಷ್ ಭಾಷೆಯ ವ್ಯಾಮೋಹ ಹೆಚ್ಚಾಗಿರುತ್ತಿರುವುದು ಸರಿಯಲ್ಲ. ಇದರ ಹುಚ್ಚು ಬಿಡಬೇಕು, ಕನ್ನಡ ಪದ ಸಂಪತ್ತಿನೆಡೆಗೆ ಆಕರ್ಷಿತವಾದರೆ ಅದರ ಒಳ ಅರಿವು ತಿಳಿದರೆ ಕನ್ನಡ ಪದ ಸಂಪತ್ತಿನ ಘನತೆ ತಿಳಿಯುತ್ತದೆ. ಈ ನಿಟ್ಟಿನಲ್ಲಿ ನಮ್ಮ ಕನ್ನಡ ಸಂಸ್ಕೃತಿ ಸೇವಾ ಭಾರತಿಯ ಸಂಸ್ಥೆ ವತಿಯಿಂದ ರಾಜ್ಯಾದ್ಯಂತ ಕಮ್ಮಟಗಳು, ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಇದು ೨೩೩೫ನೇ ಉಪನ್ಯಾಸ ಕಾರ್ಯಕ್ರಮ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಮಾತನಾಡಿ, ಕನ್ನಡ ಅತ್ಯಂತ ಪ್ರಾಚೀನ ಮತ್ತು ಶ್ರೀಮಂತ ಭಾಷೆ, ಹಲ್ಮಿಡಿ ಶಾಸನ ಕನ್ನಡದ ಮಹತ್ವವನ್ನು ಸಾರಿದೆ. ಕನ್ನಡ ಪದಗಳ ಬಳಕೆ ಪ್ರಾಚೀನ ಕಾಲದಲ್ಲೇ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಇದೆ ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯನ್ನು ಅನ್ಯ ಭಾಷೆಯ ಪದಗಳೊಂದಿಗೆ ಮಾತನಾಡಿ ಕನ್ನಡವನ್ನು ಕಡೆಗಣಿಸುತ್ತಿರುವು ಸರಿಯಲ್ಲ, ಅದೇ ಪಕ್ಕದ ಕೇರಳ, ತಮಿಳುನಾಡಿನ ಜನರು ತಮ್ಮ ಭಾಷೆಯ ಸ್ವಂತಿಕೆಯನ್ನು ಬಿಡುವುದಿಲ್ಲ ಎಂದರು. ಕನ್ನಡ ಪ್ರಾದೇಶಿಕ ಮತ್ತು ಜನಪದ ಹಾಡು ಭಾಷೆಯನ್ನು ಒಳಗೊಂಡ ಸಂಗ್ರಹವಾಗಿರುವುದರ ಜೊತೆ ಶಿಷ್ಟ ಸಂಸ್ಕೃತಿಯನ್ನು ಒಳಗೊಂಡಿದೆ. ೧೨ನೇ ಶತಮಾನದಲ್ಲಿ ಶರಣರು ಕೊಟ್ಟಂತಹ ವಚನ ಸಾಹಿತ್ಯ ಕನ್ನಡ ಭಾಷೆಯ ಶ್ರೇಷ್ಠ ಪರಂಪರೆಯನ್ನು ಸಾರಿದೆ ಎಂಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ.ಸಿ. ಬಸವಣ್ಣ ಮಾತನಾಡಿ, ಶಬ್ದಗಳು ಇಟ್ಟಿಗೆಯಂತೆ ಭಾಷೆಯ ಮಹಲ್‌ನ್ನು ಸುಂದರಗೊಳಿಸುತ್ತವೆ. ಕನ್ನಡ ಪದ ಸಂಪತ್ತನ್ನು ಹೊಂದಿದ ಶ್ರೇಷ್ಠ ಭಾಷೆಯಾಗಿದೆ ಎಂದರು. ಸಕ್ರೀಯ ಪದ ಸಂಪತ್ತನ್ನು ಹೊಂದಿರುವ ಕನ್ನಡ ಭಾಷೆ, ಪದ ಬಳಕಗೆ ಭಾಷಾ ಕೌಶಲ್ಯ ಮುಖ್ಯ, ಭಾಷಾ ಬೆಳವಣಿಗೆಗೆ ಪೋಷಕರು ಮತ್ತು ಕುಟುಂಬದವರ ಸಹಕಾರ ಅತಿ ಮುಖ್ಯ ಎಂದರು
ಜೆಎಸ್‌ಎಸ್ ಶಿಕ್ಞಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್. ಎಂ.ಸ್ವಾಮಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾದ್ಯಾಪಕಿ ಸಿ.ರೂಪಾಶ್ರೀ ಸ್ವಾಗತಿಸಿ, ನಿರೂಪಿಸಿದರು.