ಬಳ್ಳಾರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯನ್ನು ನಿಗದಿತ ಅವಧಿಯೊಳಗೆ ನಡೆಸಬೇಕು ಎಂದು ಪಾಲಿಕೆಯ ಪ್ರತಿಪಕ್ಷದ ನಾಯಕ, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಜಿಲ್ಲಾಧ್ಯಕ್ಷ ಸಿ.ಇಬ್ರಾಹಿಂ ಒತ್ತಾಯಿಸಿದ್ದಾರೆ.ಈ ಕುರಿತು ಕಲಬುರಗಿಯ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿರುವ ಅವರು, ನಾನಾ ಕಾರಣಗಳನ್ನೊಡ್ಡಿ ಮುಂದೂಡಿರುವ ಚುನಾವಣೆಯನ್ನು ನಡೆಸಬೇಕು. ಲೋಕಸಭಾ ಚುನಾವಣೆ ಸಹ ಮುಗಿದಿದ್ದು ಈಗಲಾದರೂ ಚುನಾವಣೆ ನಡೆಸುವ ಕಾಳಜಿಯನ್ನು ಅಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪಾಲಿಕೆಯ 23ನೇ ಅವಧಿಗೆ ಮೇಯರ್, ಉಪ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳ ಚುನಾವಣೆ ನಡೆಸಲು ದಿನಾಂಕ ನಿಗದಿಗೊಳಿಸಿ ಕಳೆದ ಮಾರ್ಚ್ 6ರಂದು ಅಧಿಸೂಚನೆ ಹೊರಡಿಸಿ, ಮಾ.28ರಂದು ಚುನಾವಣೆ ನಡೆಸಲಾಗುವುದು ಎಂದು ಚುನಾವಣೆ ಸಭೆಯ ತಿಳಿವಳಿಕೆ ಪತ್ರವನ್ನು ಎಲ್ಲ ಸದಸ್ಯರಿಗೆ ಕಳಿಸಿಕೊಡಲಾಯಿತು. ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮುಂದೂಡಲಾಯಿತು. ಇದಕ್ಕೂ ಮುನ್ನ 2023ರ ನವೆಂಬರ್ 28ರಂದು ಚುನಾವಣೆ ನಿಗದಿಗೊಳಿಸಿ, ತಾಂತ್ರಿಕ ಕಾರಣವೊಡ್ಡಿ ಚುನಾವಣೆ ಮುಂದೂಡಲಾಯಿತು. ಇದಾದ ಬಳಿಕ 2023ರ ಡಿಸೆಂಬರ್ 19 ರಂದು ಚುನಾವಣೆ ನಿಗದಿಯಾಗಿತ್ತು. ನಗರದಲ್ಲಿ ಎನ್‌ಐಎ ದಾಳಿ ನಡೆದಿದೆ ಎಂಬ ನೆಪದಲ್ಲಿ ಮತ್ತೆ ಚುನಾವಣೆ ಮುಂದೂಡಲಾಯಿತು. ಹೀಗೆ ಪದೇ ಪದೇ ಚುನಾವಣೆಯನ್ನು ಮುಂದೂಡುತ್ತಿರುವುದರಿಂದ ನಗರದ ಜನರ ಮೂಲ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗುತ್ತಿಲ್ಲ. ಮತ್ತೊಂದೆಡೆ ಪೂರ್ವ ಮುಂಗಾರು ಶುರುಗೊಂಡಿದ್ದು ನಗರದಲ್ಲಿ ಒಳಚರಂಡಿ, ಚರಂಡಿ ಕಾಮಗಾರಿಗಳು ಬಾಕಿ ಇರುವುದರಿಂದ ಸಾರ್ವಜನಿಕರು ಮಳೆಗಾಲದಲ್ಲಿ ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದರು.ಪ್ರಮುಖವಾಗಿ ಸಂವಿಧಾನದತ್ತವಾಗಿ ಪಡೆದಿರುವ ಜನಸೇವೆಯ ಅಧಿಕಾರವನ್ನು ಮೊಟಕುಗೊಳಿಸಿದಂತಾಗಿದೆ. ಪ್ರಜಾಪ್ರಭುತ್ವ ಆಶಯವನ್ನು ಜಾರಿಗೊಳಿಸುವುದು ಅಧಿಕಾರಿಗಳ ಜವಾಬ್ದಾರಿಯೂ ಆಗಿದ್ದು, ಪ್ರಾದೇಶಿಕ ಆಯುಕ್ತರು ಆದಷ್ಟು ಬೇಗ ಚುನಾವಣೆ ನಡೆಸುವ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕಾನೂನು ರಿತ್ಯ ಸಂಬಂಧಿಸಿದ ಎಲ್ಲ ಸಕ್ಷಮ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಸಿ.ಇಬ್ರಾಹಿಂ ಎಚ್ಚರಿಸಿದ್ದಾರೆ.