೮ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಉಪನ್ಯಾಸಕ
ಕನ್ನಡ ಭಾಷೆ ಉಳಿದಿರುವುದು ಕೇವಲ ಪ್ರಾಧ್ಯಾಪಕರು, ರಾಜಕಾರಣಿಗಳು ಅಥವಾ ಸಮ್ಮೇಳನಗಳಿಂದಲ್ಲ. ಶ್ರೀಸಾಮಾನ್ಯನು ತನ್ನ ದಿನನಿತ್ಯದ ಬದುಕಿನಲ್ಲಿ ಕನ್ನಡವನ್ನು ಅಳವಡಿಸಿಕೊಂಡು, ಬಳಸುತ್ತಿರುವುದರಿಂದಲೇ ಭಾಷೆ ಇಂದಿಗೂ ಉಳಿದು ಬೆಳೆಯುತ್ತಿದೆ ಎಂದು ಶಿವಮೊಗ್ಗದ ಉಪನ್ಯಾಸಕ ಡಾ. ಅಣ್ಣಪ್ಪ ಎನ್. ಮಳೀಮಠ ಹೇಳಿದರು.
ತಾಲೂಕಿನ ವಾಜಗದ್ದೆಯಲ್ಲಿ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಿದ ೮ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಬ್ರಿಟಿಷರ ಆಳ್ವಿಕೆಯ ಕಾಲದಲ್ಲೂ ಕನ್ನಡಕ್ಕೆ ಉನ್ನತ ಸ್ಥಾನವಿತ್ತು ಮತ್ತು ಆಗಲೇ ಕನ್ನಡ ಶಾಲೆ ಸ್ಥಾಪಿಸಲಾಗಿತ್ತು. ಕನ್ನಡಕ್ಕೆ ಅನ್ಯ ಭಾಷೆಗಳಿಂದ ಯಾವುದೇ ಅಳಿವಿಲ್ಲ. ಎಲ್ಲ ಭಾಷೆಗಳೊಂದಿಗೆ ಬೆರೆತು, ತನ್ನತನವನ್ನು ಗಟ್ಟಿಯಾಗಿ ಉಳಿಸಿಕೊಳ್ಳುವ ಅಂತಃಸತ್ವ ಕನ್ನಡಕ್ಕಿದೆ. ಸಾಹಿತ್ಯ ಸಮ್ಮೇಳನಗಳು ಕೇವಲ ಉತ್ಸವಗಳಾಗಿ ಸೀಮಿತಗೊಳ್ಳಬಾರದು. ಬದಲಿಗೆ, ಆಲೋಚನಾಯುಕ್ತ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಶ್ರೀಮಂತಗೊಳಿಸುವ ವೇದಿಕೆಗಳಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.ನೂತನ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಗೌರವಾಧ್ಯಕ್ಷ ಭೀಮಣ್ಣ ನಾಯ್ಕ, ರಾಜ್ಯದಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂಬುದು ಬರೀ ಊಹಾಪೋಹ. ಸರ್ಕಾರ ಯಾವುದೇ ಕಾರಣಕ್ಕೂ ಕನ್ನಡ ಶಾಲೆ ಮುಚ್ಚುವುದಿಲ್ಲ, ಬದಲಿಗೆ ಅವುಗಳನ್ನು ಉನ್ನತೀಕರಿಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಪೋಷಕರು ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಬೇಕೆಂಬ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕೆ ಕೋಟ್ಯಾಂತರ ರೂ. ವೆಚ್ಚ ಮಾಡಿ ಉತ್ತಮ ಶಿಕ್ಷಣ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಟಾಪ್ ೧೦ ರ್‍ಯಾಂಕ್‌ಗಳಲ್ಲಿ ಸ್ಥಾನ ಪಡೆಯುವ ಮೂಲಕ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಸಾಬೀತುಪಡಿಸಿದ್ದಾರೆ. ಮನೆಯಲ್ಲಿ ಮಕ್ಕಳಿಗೆ ಪೋಷಕರು ಅಮ್ಮ, ಅಪ್ಪ ಎನ್ನುವ ಬದಲು ಮಮ್ಮಿ,ಡ್ಯಾಡಿ ಎಂದು ಕಲಿಸುತ್ತಿದ್ದಾರೆ. ಈ ಸಂಸ್ಕೃತಿಯಿಂದ ಹೊರಬಂದು, ಮಕ್ಕಳು ಇಂಗ್ಲಿಷ್ ಕಲಿತರೂ ಕನ್ನಡವನ್ನು ಮರೆಯದಂತೆ ನೋಡಿಕೊಳ್ಳಬೇಕು. ಹಳ್ಳಿಯಿಂದ ದಿಲ್ಲಿಯವರೆಗೆ ಸಾಧನೆ ಮಾಡಲು ತಾಯ್ನುಡಿ ಕನ್ನಡ ಅತ್ಯಗತ್ಯ ಎಂದರು.
ಹಿರಿಯ ಪತ್ರಕರ್ತ ಮಹಾಬಲ ಸೀತಾಳಭಾವಿ ಮಾತನಾಡಿ, ಮನುಷ್ಯನ ಆಲೋಚನೆ ಮತ್ತು ಕೌಶಲ್ಯ ಅಭಿವೃದ್ಧಿ ಮಾತೃಭಾಷೆಯಲ್ಲಿ ಮಾತ್ರ ಪರಿಣಾಮಕಾರಿಯಾಗಿ ಸಾಧ್ಯ. ಈ ಸತ್ಯವನ್ನು ಅರಿತು ಬೆಂಗಳೂರಿನ ಉನ್ನತ ವರ್ಗದವರು ಈಗ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸುವ ಪ್ರವೃತ್ತಿ ಹೆಚ್ಚಾಗಿದೆ. ಅನ್ನ ನೀಡುವ ಭಾಷೆ ಶಾಶ್ವತವಾಗಿ ಉಳಿಯುತ್ತದೆ ಎಂದರು.ಆಶಯ ನುಡಿಗಳನ್ನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ೨೦ ಮಕ್ಕಳಿಗಿಂತ ಕಡಿಮೆ ಇರುವ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ನಿರ್ಧಾರವನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಮುಂತಾದವರು ಮಾತನಾಡಿದರು.ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ಹನುಮಕ್ಕ ಭೋವಿ ದ್ವಾರ ಹಾಗೂ ಕೆ.ಜಿ. ನಾಗರಾಜ ಪುಸ್ತಕ ಮಳಿಗೆ ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಜಿ.ಜಿ. ಹೆಗಡೆ ಬಾಳಗೋಡ ಸಮ್ಮೇಳನಾಧ್ಯಕ್ಷ ತಮ್ಮಣ್ಣ ಬೀಗಾರರಿಗೆ ಧ್ವಜ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮೊದಲು ಧ್ವಜಾರೋಹಣ ಮತ್ತು ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.