ಮಂಡ್ಯ ಮಂಜುನಾಥ
ತಮಿಳು ಮಕ್ಕಳಿಗೆ ಕನ್ನಡ ಪಾಠವೇ, ಆ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆಯೇ, ಅದೂ ೧ ರಿಂದ ೯ನೇ ತರಗತಿಯವರೆಗೆ ೧೫೦ಕ್ಕೂ ಹೆಚ್ಚು ಮಕ್ಕಳು ನಿತ್ಯ ಹಾಜರಾಗುತ್ತಿದ್ದಾರೆಯೇ, ಹಾಜರಾಗುವ ಎಲ್ಲ ಮಕ್ಕಳಿಗೆ ಪ್ರತಿದಿನ ಹಾಲು-ಮೊಟ್ಟೆಯನ್ನೂ ಕೊಡಲಾಗುತ್ತಿದೆಯೇ ಎಂದು ಅಚ್ಚರಿಯಿಂದ ಕೇಳಿದರೆ ಎಲ್ಲದಕ್ಕೂ ಹೌದು ಎಂಬ ಉತ್ತರ ಸಿಗುತ್ತದೆ.
ಇದನ್ನು ನೋಡುವುದಕ್ಕೆ ಬೇರೆಲ್ಲಿಗೋ ಹೋಗಬೇಕಿಲ್ಲ. ಮಂಡ್ಯದ ತಮಿಳು ಕಾಲೋನಿ, ಆರ್‌ಟಿಓ ಸ್ಲಂಗೆ ಹೋದರೆ ಸಾಕು. ಅಲ್ಲಿ ಇದರ ಸಾಕ್ಷಾತ್ ದರ್ಶನವಾಗುತ್ತದೆ. ಅಂದಹಾಗೆ ಇಂತಹದೊಂದು ಅಪರೂಪದ ಶೈಕ್ಷಣಿಕ ಸೇವೆಯನ್ನು ನೀಡುತ್ತಿರುವವರು ಮಲಬಾರ್ ಗ್ರೂಪ್. ಹಂಗರ್ ಫ್ರೀ ವರ್ಲ್ಡ್ ಹೆಸರಿನಲ್ಲಿ ಮೈಕ್ರೋ ಲರ್ನಿಂಗ್ ಸೆಂಟರ್ ತೆರೆದು ಬಡ ಮಕ್ಕಳಿಗೆ ಉಚಿತವಾದ ಶಿಕ್ಷಣವನ್ನು ಸದ್ದಿಲ್ಲದೇ ನೀಡುತ್ತಿದ್ದಾರೆ.ತಮಿಳು ಕಾಲೋನಿಯಲ್ಲಿ ಎರಡು ಕಡೆ ತಲಾ ೪೦ ರಿಂದ ೪೫ ಮಕ್ಕಳು ಪಾಠ ಕಲಿಯುತ್ತಿದ್ದಾರೆ. ಕಾಳಪ್ಪ ಬಡಾವಣೆ (ಆರ್‌ಟಿಒ ಸ್ಲಂ)ಯಲ್ಲೂ ೫೦ ಮಕ್ಕಳು ಕನ್ನಡ ಪಾಠ ಕಲಿಯುತ್ತಿದ್ದಾರೆ. ಒಂದನೇ ತರಗತಿಯಿಂದ ಒಂಬತ್ತನೇ ತರಗತಿಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರತಿದಿನ ಸಂಜೆ ೫.೩೦ ರಿಂದ ೮.೩೦ರವರೆಗೆ ಪಾಠ ಕಲಿಸಿಕೊಡಲಾಗುತ್ತಿದೆ. ಇದಕ್ಕಾಗಿ ನುರಿತ ಡಯಟ್ ಶಿಕ್ಷಕರನ್ನು ನೇಮಕ ಮಾಡಿಕೊಂಡು ಅವರಿಗೂ ವೇತನವನ್ನು ಮಲಬಾರ್ ಗ್ರೂಪ್‌ನಿಂದಲೇ ನೀಡಲಾಗುತ್ತದೆ.
ಕನ್ನಡ, ವಿಜ್ಞಾನ, ಗಣಿತ ಸೇರಿದಂತೆ ಕನ್ನಡ ಮಾಧ್ಯಮದ ಎಲ್ಲಾ ವಿಷಯಗಳನ್ನೂ ಬೋಧಿಸಲಾಗುತ್ತಿದೆ. ಮಕ್ಕಳು ಕೂಡ ಅಷ್ಟೇ ಆಸಕ್ತಿಯಿಂದ ಇಲ್ಲಿಗೆ ಕಲಿಯಲು ಬರುತ್ತಿದ್ದಾರೆ. ಇಲ್ಲಿಗೆ ಬರುವ ಬಹುತೇಕ ಮಕ್ಕಳು ತಮಿಳರೇ ಆಗಿದ್ದಾರೆ. ಆದರೂ ಕನ್ನಡ ಕಲಿಯುವುದಕ್ಕೆ ಆಸಕ್ತಿ ತೋರಿದ್ದಾರೆ. ತಮಿಳು ಕಾಲೋನಿಯಲ್ಲಿರುವ ತಮಿಳು ಮಾಧ್ಯಮ ಶಾಲೆಯ ಮಕ್ಕಳೂ ಲರ್ನಿಂಗ್ ಸೆಂಟರ್‌ಗೆ ಬಂದು ಕಲಿಯುತ್ತಿರುವುದು ಮತ್ತೊಂದು ವಿಶೇಷವಾಗಿದೆ.
ಲರ್ನಿಂಗ್ ಸೆಂಟರ್‌ಗೆ ಹಾಜರಾಗುವ ಕೊಳಚೆ ನಿವಾಸಿಗಳ ಮಕ್ಕಳೆಲ್ಲರಿಗೂ ನಿತ್ಯ ಪೌಷ್ಠಿಕಾಂಶಯುಕ್ತ ಹಾಲು ಮತ್ತು ಮೊಟ್ಟೆಯನ್ನು ನೀಡಲಾಗುತ್ತಿದೆ. ಕಲಿಕೆಯ ಜೊತೆಗೆ ಪೌಷ್ಠಿಕತೆಯನ್ನೂ ತುಂಬಿಕೊಂಡು ಓದಿನಲ್ಲಿ ತೊಡಗಿಸಲಾಗುತ್ತಿದೆ. ನಿತ್ಯ ಎಲ್ಲಾ ಮಕ್ಕಳು ತರಗತಿಗೆ ಹಾಜರಾಗುತ್ತಿದ್ದಾರೆ. ಪೋಷಕರೂ ಕೂಡ ತಮ್ಮ ಮಕ್ಕಳು ಶಿಕ್ಷಣವನ್ನು ಕಲಿಯಬೇಕೆಂಬ ಹಂಬಲದಿಂದ ತರಗತಿಗೆ ಕಳುಹಿಸುತ್ತಿದ್ದಾರೆ.
ತಮಿಳು ಕಾಲೋನಿ, ಕಾಳಪ್ಪ ಬಡಾವಣೆಯಲ್ಲಿರುವ ಮೂರು ಲರ್ನಿಂಗ್ ಸೆಂಟರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಮಲಬಾರ್ ಗ್ರೂಪ್‌ನವರು ಬೀಡಿ ಕಾರ್ಮಿಕ ಕಾಲೋನಿ, ಹಾಲಹಳ್ಳಿ ಸ್ಲಂನಲ್ಲೂ ಲರ್ನಿಂಗ್ ಸೆಂಟರ್ ತೆರೆಯುವ ಚಿಂತನೆಯಲ್ಲಿದ್ದಾರೆ. ಇಂತಹ ಶೈಕ್ಷಣಿಕ ಸೇವೆ ಮುಂದುವರೆಯಲೆಂಬುದು ಸಾರ್ವಜನಿಕರ ಆಶಯವಾಗಿದೆ.
- ದಿಲೀಪ್‌ಕುಮಾರ್, ವ್ಯವಸ್ಥಾಪಕರು, ಮಲಬಾರ್ ಗೋಲ್ಡ್ , ಮಂಡ್ಯಲರ್ನಿಂಗ್ ಸೆಂಟರ್‌ನಲ್ಲಿ ನಿತ್ಯ ೪೫ ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುತ್ತಾರೆ. ೧ ರಿಂದ ೯ನೇ ತರಗತಿಯವರೆಗೆ ಮಾತ್ರ ಕನ್ನಡ ಮಾಧ್ಯಮದ ಮಕ್ಕಳಿಗೆ ಪಾಠ ಹೇಳಿಕೊಡಲಾಗುವುದು. ಶಾಲೆಯಲ್ಲಿ ಮಾಡಿದ ಪಾಠಗಳನ್ನೇ ಇಲ್ಲಿ ಪುನರಾವರ್ತನೆ ಮಾಡಲಾಗುತ್ತದೆ. ಮಕ್ಕಳೂ ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಮೂರು ಗಂಟೆಗಳ ಕಾಲ ತರಗತಿ ನಡೆಯುತ್ತದೆ.