ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿಯೊಬ್ಬರಲ್ಲಿಯೂ ಕನ್ನಡ ಸಾಹಿತ್ಯ ಪ್ರಜ್ಞೆ ಬೆಳಸುವುದು ಸಮ್ಮೇಳನದ ಉದ್ದೇಶವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾ ಸಂಚಾಲಕಿ ಡಾ. ಮೀರಾಶಿವಲಿಂಗಯ್ಯ ತಿಳಿಸಿದರು.ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಲ್ಲುಕಟ್ಟಡದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರಚಾರ ಸಮಿತಿಯಿಂದ ಇಡೀ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಏಕ ಕಾಲದಲ್ಲಿ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಮತ್ತು ವಿಶೇಷವಾಗಿ ಮಂಡ್ಯ ಜಿಲ್ಲಾ ಸಾಹಿತ್ಯ ಇತಿಹಾಸ ವೈಶಿಷ್ಟ್ಯಗಳ ಕುರಿತ ಹಮ್ಮಿಕೊಳ್ಳಲಾಗಿರುವ ರಸಪ್ರಶ್ನೆ ಸ್ಪರ್ಧಾ ಪರೀಕ್ಷೆಗೆ ಪ್ರಶ್ನೆಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಜಿಲ್ಲಾದ್ಯಂತ ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧಾ ಪರೀಕ್ಷೆ ಏಕಕಾಲದಲ್ಲಿ ನಡೆಯುತ್ತಿದೆ. ಇದರಲ್ಲಿ ಜಿಲ್ಲೆಯಲ್ಲಿ ಸುಮಾರು 157 ಪದವಿ ಪೂರ್ವ ಕಾಲೇಜಿಗಳಿದ್ದು, ಅದರಲ್ಲಿ ಸುಮಾರು 28,000 ಮಕ್ಕಳು ಈ ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.ಕಾಲೇಜು, ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ ಆಯ್ಕೆಗೊಂಡ ವಿಜೇತ ಮಕ್ಕಳಿಗೆ ಸಾಹಿತ್ಯ ಸಮ್ಮೇಳನ ಪ್ರಧಾನ ವೇದಿಕೆಯಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದರು.
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸುವ ಉದ್ದೇಶವೆಂದರೆ ಕನ್ನಡ ಪ್ರಜ್ಞೆ, ಕನ್ನಡ ಪ್ರೇಮ ಬರಲಿ ಎಂದು ಹಾಗೂ ಕನ್ನಡ ಅಭಿಮಾನದ ಭಾವ ಮೂಡಲಿ ಎಂಬುದಾಗಿದೆ ಎಂದರು.ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಮಾತನಾಡಿ, ಸಾಹಿತ್ಯ ಸಮ್ಮೇಳನವು ಜಿಲ್ಲೆಯಲ್ಲಿ ನಡೆಯುತ್ತಿರುವುದು ಬಹಳ ಸಂತೋಷದ ವಿಷಯ. ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ನಶಿಸಿ ಹೋಗಲಿಕ್ಕೆ ಬಿಡದೆ ಕನ್ನಡವನ್ನು ಅಗಾಧವಾಗಿ ಬೆಳೆಸಿ ಉಳಿಸಿಕೊಳ್ಳಬೇಕು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಕಲ್ಲುಕಟ್ಟಡದ ಪ್ರಾಂಶುಪಾಲ ತಮ್ಮೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಅತ್ಯಂತ ವೈಭವದಿಂದ ಸಮ್ಮೇಳನ ನಡೆಯುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಕೂಡ ಪೋಷಕರೊಂದಿಗೆ ಸಮ್ಮೇಳನದಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ ಡಾ ಹುಸ್ಕೂರು ಕೃಷ್ಣೆಗೌಡ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿಯನ್ನು ಮೆರೆಯಲಾಗುತ್ತದೆ. ಸಮ್ಮೇಳನದಲ್ಲಿ ಕನ್ನಡ ಕವಿಗಳು, ವಿಶೇಷ ಲೇಖನಗಳು, ವಿಚಾರ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಲಾಭವನ್ನು ಪಡೆದುಕೊಳ್ಳಲು ಎಲ್ಲರೂ ಸಮ್ಮೇಳನದಲ್ಲಿ ಭಾಗವಹಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಪ್ರಶ್ನೆ ಪತ್ರಿಕೆ ತಯಾರಕರುಗಳಾದ ಮಹೇಶ್, ಶಿವರಾಮು, ಕಸಾಪ ಕೋಶಾಧ್ಯಕ್ಷರು ಅಪ್ಪಾಜಪ್ಪ, ತಾಲೂಕು ಅಧ್ಯಕ್ಷ ಚಂದ್ರಲಿಂಗು, ರಂಗಸ್ವಾಮಿ, ಪ್ರಚಾರ ಸಮಿತಿ ಸದಸ್ಯ ಕಬ್ಬನಹಳ್ಳಿ ಶಂಭು, ಈವೆಂಟ್ಸ್ ಅಧ್ಯಕ್ಷ ಸಬ್ಬನಹಳ್ಳಿ ಶಶಿಧರ್, ಧನಂಜಯ ದಾಸರಗುಪ್ಪೆ, ಹೊಳಲು ಶ್ರೀಧರ್, ಎಂ ಮಂಚಶೆಟ್ಟಿ, ಉಪನ್ಯಾಸಕ ಹುಚ್ಚೇಗೌಡ, ಚಿಕ್ಕತಿಮ್ಮಯ್ಯ, ಕಿರಣ ಅವರು ಉಪಸ್ಥಿತರಿದ್ದರು.