ಶಿರಹಟ್ಟಿ: ಭಾರತದಲ್ಲಿ ಕೃಷಿ ಪ್ರಾಧಾನ್ಯತೆ ಇರುವುದರಿಂದ ಜಾನಪದವು ಹುಟ್ಟಿನಿಂದ ಸಾಯುವವರೆಗೂ ಜೀವನದಲ್ಲಿ ಹಾಸುಹೊಕ್ಕಾಗಿದೆ. ಜನಪದದಲ್ಲಿ ನವರಸಗಳು ತುಂಬಿವೆ. ಜನಪದ ಒಳ್ಳೆಯ ಸಂಸ್ಕಾರವನ್ನು ನೀಡುತ್ತದೆ ಎಂದು ಸಾಹಿತಿ ಶಿವಯೋಗಿ ವಿಭೂತಿ ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಕಡಕೋಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾನಪದ ಸಾಹಿತ್ಯ ಇಂದಿಗೂ ತನ್ನ ಛಾಪನ್ನು ಕಳೆದುಕೊಂಡಿಲ್ಲ. ಹೀಗಾಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎಂದರು.ಮೌಖಿಕ ಪರಂಪರೆಯಿಂದ ಹರಿದುಬಂದ ಜನಪದ ಸಾಹಿತ್ಯವು ಗ್ರಾಮೀಣ ಜನರ ಭಾವನೆಗಳು, ಸಂಪ್ರದಾಯಗಳು, ನಂಬಿಕೆಗಳು ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮವಾಗಿದೆ. ತ್ರಿಪದಿಗಳು, ಗಾದೆಗಳು, ಗರತಿಯ ಹಾಡುಗಳು, ಭಜನೆಗಳು ಕುಣಿತಗಳು ಮುಂತಾದ ಪ್ರಕಾರಗಳಲ್ಲಿ ಜನಪದ ಸಾಹಿತ್ಯ ವ್ಯಕ್ತವಾಗಿದೆ. ಜನಪದ ಸಾಹಿತ್ಯವು ಕೇವಲ ಮನರಂಜನೆ ಮಾತ್ರವಲ್ಲ, ಜೀವನದ ದರ್ಶನ, ನೈತಿಕ ಬೋಧನೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಯ ಪ್ರಮುಖ ಸಾಧನವಾಗಿದೆ ಎಂದರು.ತಾಲೂಕು ಪಂಚಾಯಿತಿ ಮಾಜಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಶ್ಚಾತ್ಯ ಶೈಲಿಯ ಆಧುನಿಕ ಜೀವನದಲ್ಲಿ ದೇಸಿ ನೆಲದ ಸಂಸ್ಕೃತಿಯು ತನ್ನ ಹಿಂದಿನ ವೈಭವವನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡಿದೆ ಎಂದೆನಿಸಿದರೂ ತನ್ನ ಮೂಲ ನೆಲೆಯಾದ ಹಳ್ಳಿಗಳಲ್ಲಿ ಇನ್ನೂ ತನ್ನ ನೆಲೆಯನ್ನು ಭದ್ರವಾಗಿ ಉಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಬಿ.ಎಂ. ಯರಕದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ನಿಕಟಪೂರ್ವ ಅಧ್ಯಕ್ಷ ಎಸ್.ಬಿ. ಹೊಸೂರ, ಕಾರ್ಯದರ್ಶಿ ಸತೀಶ ದೇಶಪಾಂಡೆ, ಉಪನ್ಯಾಸಕ ಮಲ್ಲಪ್ಪ ಹರ್ತಿ, ಪ್ರಾಚಾರ್ಯರಾದ ಕನಕಮ್ಮ, ಮುಖ್ಯೋಪಾಧ್ಯರಾದ ಎನ್.ಬಿ. ಮುಲ್ಕಿ ಗೌಡರ್, ಎಸ್‌ಡಿಎಂಸಿ ಉಪಾಧ್ಯಕ್ಷ ರವಿ ಗೌಡ್ರು, ಈರನಗೌಡ ಪಾಟೀಲ, ಜ್ಯೋತಿ ಕೊಂಚಿಗೇರಿ, ಮಾಂತೇಶ್ ಮೆಳ್ಳಿಗಟ್ಟಿ, ಉಪನ್ಯಾಸಕ ಶರಣು ಕಲ್ಗುಡಿ ಇತರರು ಇದ್ದರು.