ಭಾಷೆ ಬೆಳೆಯಲು ಕನ್ನಡ ಮಾಧ್ಯಮ ಶಾಲೆಗಳ ಸಬಲೀಕರಣ ಅಗತ್ಯ: ಅರವಿಂದ ಚೊಕ್ಕಾಡಿ

KannadaprabhaNewsNetwork | Published : Nov 2, 2024 1:43 AM

ಸಾರಾಂಶ

ಪಥಸಂಚಲನ, ಗೌರವ ವಂದನೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನಗೊಂಡಿತು. ಇದಕ್ಕೂ ಮುನ್ನ ಮಾರಿಗುಡಿ ಮೈದಾನದಿಂದ ತಾಲೂಕು ಆಡಳಿತ ಸೌಧದವರೆಗೆ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಭಾಷೆಯೆಂಬುದು ನಮ್ಮ ನಡವಳಿಕೆ, ಆಲೋಚನಾ ಕ್ರಮವನ್ನು ನಿಯಂತ್ರಿಸುತ್ತದೆ. ಹಾಗಾಗಿ ಕನ್ನಡ ಭಾಷೆ ಉಳಿಯಲು ಬಲಿಷ್ಠ ಸಾಂವಿಧಾನಿಕ ವ್ಯವಸ್ಥೆ ಬೇಕಾಗುತ್ತದೆ ಎಂದು ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹಶಿಕ್ಷಕ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಬೆಳ್ತಂಗಡಿ ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಬೆಳ್ತಂಗಡಿ ತಾಲೂಕು ಆಡಳಿತ ಸೌಧದ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.

ಕನ್ನಡವನ್ನು ಬಳಸುವುದಕ್ಕಿಂತ ಹೆಚ್ಚು ಬೆಳೆಸಲು ಕನ್ನಡ ಮಾಧ್ಯಮ ಶಾಲೆಗಳ ಸಬಲೀಕರಣವಾಗಬೇಕು. ಶಾಲೆಗಳಲ್ಲಿರುವ ಕನ್ನಡ ಶಿಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ಪಾಠ ಮಾಡಲು ಬಿಡಬೇಕು. ರಾಜ್ಯೋತ್ಸವದ ಈ ಸಮಯದಲ್ಲಿ ಕನ್ನಡವನ್ನು ಸಹ ಭಾಷೆಗಳ ಮೂಲಕ ಅಸ್ತಿತ್ವಕ್ಕೆ ತರಲು ಆರ್ಥಿಕ ಚೈತನ್ಯ ನೀಡಿದರೆ ಕನ್ನಡ ತನ್ನಿಂದ ತಾನಾಗಿ ಬೆಳೆಯಲು ಸಾಧ್ಯವಿದೆ ಎಂದರು.

ತಾಲೂಕು ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಯದುಪತಿ ಗೌಡ ಮಾತನಾಡಿ, ಕನ್ನಡ ಮಾಧ್ಯಮ ಶಾಲೆ ಮುಚ್ಚುವ ಸಮುದಲ್ಲಿ ಕನ್ನಡವನ್ನು ಆಂಗ್ಲ ಮಾಧ್ಯಮ ಶಾಲೆಯಾಗಿ ಪರಿವರ್ತಿಸಲಾಗುತ್ತಿದೆ. ಹಾಗಾದಾಗ ಕನ್ನಡ ಸಂಸ್ಕೃತಿ ಹೇಗೆ ಉಳಿಯಲು ಸಾಧ್ಯವಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಪೃಥ್ವಿ ಸಾನಿಕಮ್ ಧ್ವಜಾರೋಹಣ ನೆರವೇರಿಸಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಕೆ., ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತುಳಪುಳೆ, ಅಬಕಾರಿ ಉಪನಿರೀಕ್ಷಕ ಸಯ್ಯದ್ ಶಬೀರ್, ಇನ್‌ಸ್ಪೆಕ್ಟರ್ ಸುಬ್ಬಾಪುರ್ ಮಠ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜೋಸೆಫ್ ಪಿ.ಎಸ್.,ತೋಟಗಾರಿಕೆ ಇಲಾಖೆ ಹಿ.ಸ.ನಿ ಚಂದ್ರಶೇಖರ್ ಕೆ.ಎಸ್., ವಲಯ ಅರಣ್ಯಾಧಿಕಾರಿ ತ್ಯಾಗರಾಜ ಟಿ.ಎನ್., ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತಿಮಾ, ಸಹಿತ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ಎಂ., ಡಾ. ಅರ್ಷಿಯಾ ಕಾರ್ಯಕ್ರಮ ನಿರೂಪಿಸಿದರು.

ಪಥಸಂಚಲನ, ಗೌರವ ವಂದನೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನಗೊಂಡಿತು. ಇದಕ್ಕೂ ಮುನ್ನ ಮಾರಿಗುಡಿ ಮೈದಾನದಿಂದ ತಾಲೂಕು ಆಡಳಿತ ಸೌಧದವರೆಗೆ ಮೆರವಣಿಗೆ ನಡೆಯಿತು.

Share this article