ಸಂಡೂರು: ಕನ್ನಡ ನಾಡು ಸಂಪದ್ಭರಿತ ನಾಡು. ಇದು ಸರ್ವ ಜನಾಂಗದ ಶಾಂತಿಯ ತೋಟ. ಕಾವೇರಿಯಿಂದ ಗೋದಾವರಿಯವರೆಗೆ ಇದ್ದ ನಾಡು. ನಾಡಿನ ಸಂಸ್ಕೃತಿ ಸಂರಕ್ಷಿಸಿ ಅಭಿವೃದ್ಧಿಗೊಳಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸಿ.ಎಂ. ಶಿಗ್ಗಾವಿ ಅಭಿಪ್ರಾಯಪಟ್ಟರು.
ವಿವಿಧ ಪ್ರಾಂತಗಳು, ಸಂಸ್ಥಾನಗಳಲ್ಲಿ ಹಂಚಿ ಹೋಗಿದ್ದ ಕನ್ನಡ ನಾಡನ್ನು ಏಕೀಕರಣಗೊಳಿಸುವಲ್ಲಿ ಹಲವು ಮಹನೀಯರು, ಸಂಘ ಸಂಸ್ಥೆಗಳು ಶ್ರಮಿಸಿವೆ. ಅಳವಂಡಿ ಶಿವಮೂರ್ತಿಸ್ವಾಮಿ, ಆಲೂರು ವೆಂಕಟರಾಯರು, ಬಿ.ಎಂ. ಶ್ರೀಕಂಠಯ್ಯ, ರಂಜಾನ್ ಸಾಹೇಬ್ ಮುಂತಾದ ಮಹನೀಯರ ಪಾತ್ರ ಮಹತ್ವದ್ದಾಗಿದೆ. ಕನ್ನಡ ಸಾಹಿತ್ಯಕ್ಕೆ ೨೦೦೦ ಸಾವಿರ ವರ್ಷದ ಇತಿಹಾಸವಿದೆ. ಕನ್ನಡ ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ನಮ್ಮ ಜನಪದರು, ವಚನಕಾರರು, ದಾಸರು, ರಾಜರು, ಕವಿಗಳು ಮುಂತದವರು ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಅವುಗಳನ್ನು ನಾವು ಉಳಿಸಿ, ಬೆಳೆಸಬೇಕಿದೆ ಎಂದು ತಿಳಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಚಂದ್ರಶೇಖರಪ್ಪ ಅವರು ಕರ್ನಾಟಕದ ಏಕೀಕರಣ, ಅದಕ್ಕೆ ಶ್ರಮಿಸಿದ ಮಹನೀಯರ ಕುರಿತು ವಿವರಿಸಿದರಲ್ಲದೆ, ಕನ್ನಡ ನಮ್ಮ ಮನೆಯ ಹೆಬ್ಬಾಗಿಲಾಗಬೇಕು. ಇತರ ಭಾಷೆಗಳು ಕಿಟಕಿಗಳಂತಿರಬೇಕು. ಎಲ್ಲರೂ ನಮ್ಮ ನಾಡು, ನುಡಿ, ಸಂಸ್ಕೃತಿಯ ಸಂರಕ್ಷಣೆಗೆ ಶ್ರಮಿಸಬೇಕು ಎಂದರು.ಪತ್ರಕರ್ತ ಅರಳಿ ಕುಮಾರಸ್ವಾಮಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪ ತಾಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ ಕನ್ನಡ ನಾಡಿನ ಏಕೀಕರಣ, ಅದಕ್ಕೆ ಕಾರಣವಾದ ಅಂಶಗಳು, ನಾಡಿನ ಏಕೀಕರಣಕ್ಕೆ ದುಡಿದ ಮಹನೀಯರು, ಇಲ್ಲಿನ ಸಂಸ್ಕೃತಿ ಕುರಿತು ಮಾತನಾಡಿದರು.
ಸ್ನೇಹಾ ಹಾಗೂ ಸಿಂಚನಾ ನಾಡಿನ ಸಂಸ್ಕೃತಿಯನ್ನು ಸಾರುವ ಗೀತೆಗಳನ್ನು ಹಾಡಿದರು. ಎಚ್.ಎನ್. ಭೋಸ್ಲೆ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ಜಿ. ವೀರೇಶ್ ನಿರೂಪಿಸಿದರು. ನಿವೃತ್ತ ಶಿಕ್ಷಕಿ ಎಸ್.ಡಿ. ಪ್ರೇಮಲೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಬಷೀರ್ ಅಹಮ್ಮದ್, ಬಾದಾಮಿ ಬನಶಂಕರಿ, ಎಲ್ ಮಂಜುನಾಥ್, ಶಿವಮೂರ್ತಿಸ್ವಾಮಿ ಸೋವೇನಹಳ್ಳಿ ಉಪಸ್ಥಿತರಿದ್ದರು.ಸಂಡೂರಿನ ಕನ್ನಡ ಭವನದ ಆವರಣದಲ್ಲಿ ಕಸಾಪ ತಾಲೂಕು ಘಟಕದಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.