ಕನ್ನಡ ಪತ್ರಿಕೆಗಳ ಸಂಗ್ರಹಕಾರ ‘ಪೇಪರ್ ಬ್ಯಾಂಕ್ ಶಿವಕುಮಾರ್’

KannadaprabhaNewsNetwork |  
Published : Nov 24, 2025, 02:30 AM IST
33 | Kannada Prabha

ಸಾರಾಂಶ

ಕನ್ನಡ ಪತ್ರಿಕೆಗಳ ಸಂಗ್ರಹಕಾರ ಇವರು, ‘ಪೇಪರ್ ಬ್ಯಾಂಕ್ ಶಿವಕುಮಾರ್’ ಎಂದೇ ಖ್ಯಾತರಾಗಿದ್ದಾರೆ.

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಕಾಳಿಹುಂಡಿ ಶಿವಕುಮಾರ್, ‘ಪೇಪರ್ ಬ್ಯಾಂಕ್ ಶಿವಕುಮಾರ್’ ಎಂದೇ ಪ್ರಸಿದ್ಧಿ. ಇವರಿಗೆ ಕನ್ನಡ ಪತ್ರಿಕೆಗಳ ಬಗ್ಗೆ ವಿಶೇಷ ಪ್ರೀತಿ. ಸ್ಥಳೀಯ ಪತ್ರಿಕೆಗಳನ್ನು ಅಲ್ಲದೆ, ರಾಜ್ಯದ ಪತ್ರಿಕೆಗಳನ್ನು ಕೂಡ ಇವರು ಕೊಂಡುಕೊಂಡು ಓದುತ್ತಾರೆ. ಮನೆಗೆ ಎರಡು ಪತ್ರಿಕೆ ಬರುತ್ತವೆ. ಇನ್ನುಳಿದಂತೆ ದಿನಂಪ್ರತಿ ಮೈಸೂರಿನ ಕುವೆಂಪುನಗರ ಕಾಂಪ್ಲೆಕ್ಸ್ ಬಳಿಯ ಪೇಪರ್‌ ಅಂಗಡಿಗೆ ಬೆಳ್ಳಂಬೆಳಗ್ಗೆ ಹಾಜರ್‌. ಅಲ್ಲಿ ಸ್ನೇಹಿತರೊಡನೆ ಮಾತನಾಡುತ್ತಾ, ಚಹಾ ಕುಡಿಯುತ್ತಾ, ಎಲ್ಲಾ ಪತ್ರಿಕೆಗಳನ್ನು ಓದಿ, ತಮಗೆ ಬೇಕಾದ ಮತ್ತೆ ಏಳೆಂಟು ಪತ್ರಿಕೆಗಳನ್ನು ಖರೀದಿಸುತ್ತಾರೆ. ಇದು ಇವರ ದಿನಚರಿ. ಇವರು ಮೈಸೂರಿನಿಂದ ಹೊರಗಡೆ ಹೋದಾಗಲೂ ಕೂಡ ಅಂಗಡಿಯವರಿಗೆ ಪತ್ರಿಕೆಗಳನ್ನು ಎತ್ತಿಟ್ಟಿರುವಂತೆ ತಿಳಿಸುತ್ತಾರೆ.

ಇವರ ಈ ವಿಶಿಷ್ಟ ಪತ್ರಿಕಾ ಪ್ರೀತಿಯಿಂದಾಗಿ ಕಳೆದ 30 ವರ್ಷಗಳಿಂದಲೂ ಕೂಡ ಪತ್ರಿಕೆಗಳನ್ನು ಮಾರದೆ ತಮ್ಮ ಮನೆಯಲ್ಲಿ ಸಂಗ್ರಹಿಸಿದ್ದಾರೆ. ಇದೊಂದು ದಾಖಲೆ. ಇವತ್ತಿನ ಪತ್ರಿಕೆ ನಾಳೆ ರದ್ದಿಯಾಗುತ್ತದೆ, ಹೀಗಿರುವಾಗ ಇವರು ಪತ್ರಿಕೆಗಳನ್ನು ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಕೇವಲ ದಿನಪತ್ರಿಕೆ ಅಲ್ಲದೆ ವಾರ, ಮಾಸ ಇನ್ನಿತರ ಪತ್ರಿಕೆಗಳೂ ಇವರ ಸಂಗ್ರಹಾಲಯದಲ್ಲಿವೆ. ಇವುಗಳ ಜೊತೆಗೆ ಸಾವಿರಾರು ಕನ್ನಡ ಪುಸ್ತಕಗಳನ್ನು ಕೂಡ ಕೊಂಡುಕೊಂಡಿದ್ದಾರೆ. ಎಲ್ಲಿ ಸಾಹಿತ್ಯ ಸಮಾರಂಭಗಳು ನಡೆದರೂ ಅಲ್ಲಿಗೆ ಹಾಜರಾಗಿ ಪುಸ್ತಕಗಳನ್ನು ಖರೀದಿಸುತ್ತಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿ ವರ್ಷವೂ ತಪ್ಪದೇ ಹೋಗುತ್ತಾರೆ. ಅಲ್ಲಿ ಹತ್ತರಿಂದ ಹದಿನೈದು ಸಾವಿರ ರು. ಮೊತ್ತದ ಪುಸ್ತಕ ಖರೀದಿಸುತ್ತಾರೆ.

ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕಪರಿಶೋಧನಾಧಿಕಾರಿ ಆಗಿರುವ ಇವರು ಪ್ರಸ್ತುತ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ, ತಾಲೂಕು ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಶಾಲಾ-ಕಾಲೇಜು ಹಂತದಲ್ಲೇ ಇವರು ಗ್ರಂಥಾಲಯದಲ್ಲಿ ಹೋಗಿ ಪತ್ರಿಕೆಗಳನ್ನ ಓದುತ್ತಿದ್ದರು. 1998ರಲ್ಲಿ ತಮ್ಮ ತಂದೆಯ ಅನುಕಂಪ ಆಧಾರಿತ ಸರ್ಕಾರಿ ಕೆಲಸ ಸಿಕ್ಕಿದ ನಂತರ, ತಾವೇ ಪತ್ರಿಕೆಗಳನ್ನು ಕೊಂಡುಕೊಂಡು ಇದುವರೆಗೂ ಬೃಹತ್ ಲೈಬ್ರರಿ ಮಾಡುವ ಹಂತಕ್ಕೆ ತಲುಪಿದ್ದಾರೆ. ಜೊತೆಗೆ ಇತರ ಸ್ನೇಹಿತರಿಗೂ ಕೂಡ ಪತ್ರಿಕೆಗಳನ್ನು ಓದಲು ಸಲಹೆ ನೀಡುತ್ತಾರೆ. ಜೊತೆಗೆ ಹಲವು ಬಾರಿ ಉಚಿತವಾಗಿಯೂ ನೀಡಿದ್ದಾರೆ. ಇವರ ಈ ಪತ್ರಿಕಾ ಸಂಗ್ರಹದ ಕ್ಷೇತ್ರದ ವಿಶಿಷ್ಟ ಹವ್ಯಾಸಕ್ಕಾಗಿಯೇ 2025ನೇ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಇವರು ದೀಪಾವಳಿ, ಯುಗಾದಿ ವಿಶೇಷಾಂಕಗಳನ್ನು ಕೂಡ ಸಂಗ್ರಹಿಸುತ್ತಾರೆ. ಅಲ್ಲದೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು ದಸರಾ ಇನ್ನಿತರ ವಿಶೇಷ ದಿನಗಳಲ್ಲಿ ಬರುವ ಪತ್ರಿಕಾ ವಿಶೇಷಗಳನ್ನು ಕೂಡ ಸಂಗ್ರಹಿಸಿದ್ದಾರೆ. ಇವರ ಸ್ನೇಹಿತರು ನೀನು ಪತ್ರಿಕೆ ತೆಗೆದುಕೊಂಡಿರುವ ಹಣದಿಂದ ಎರಡು-ಮೂರು ಸೈಟು ಖರೀದಿಸಬಹುದಿತ್ತು ಎಂದು ಚುಡಾಯಿಸುತ್ತಾರೆ. ಇವರು ಕೇವಲ ಪತ್ರಿಕೆಗಳನ್ನ ಸಂಗ್ರಹ ಮಾಡಲಿಲ್ಲ. ಸಂಗ್ರಹ ಮಾಡಿದ ಪತ್ರಿಕೆಗಳನ್ನು ವಿಷಯವಾರು ಪ್ರತ್ಯೇಕಿಸಿ, ಹಲವು ಕಡೆ ಪ್ರದರ್ಶನವನ್ನು ಕೂಡ ಮಾಡಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ತಾವೇ ಸಂಗ್ರಹಿಸಿರುವ ಪತ್ರಿಕೆಗಳಲ್ಲಿ ಪತ್ರಿಕೆ ಮತ್ತು ಯೋಗ, ಪತ್ರಿಕೆ ಮತ್ತು ದಸರಾ, ಪತ್ರಿಕೆ ಮತ್ತು ಆಕಾಶವಾಣಿ ಮುಂತಾದ ಶೀರ್ಷಿಕೆಗಳಲ್ಲಿ ಅದನ್ನು ಕಟ್ ಮಾಡಿ, ಒಂದೆಡೆ ಅಂಟಿಸಿ ಪ್ರದರ್ಶನ ಮಾಡಿದ್ದಾರೆ.

ಇವರು ಹೊರ ಜಿಲ್ಲೆಗಳಿಗೆ ಹೋದಾಗಲೂ ಕೂಡ ಆಯಾ ಭಾಗದ ಸ್ಥಳೀಯ ಪತ್ರಿಕೆಗಳನ್ನು ಕೊಂಡುಕೊಳ್ಳುತ್ತಾರೆ. ಇದರಿಂದಾಗಿ ಇವರ ಸಂಗ್ರಹಾಲಯದಲ್ಲಿ ರಾಜ್ಯಾದ್ಯಂತ ಪ್ರಕಟವಾಗುವ 500ಕ್ಕೂ ಹೆಚ್ಚು ವಿವಿಧ ಪತ್ರಿಕೆಗಳು ಇವೆ.

ಪತ್ರಿಕೆಗಳಿಗೆ ಕತೆ, ಕವನ, ಲೇಖನ ಬರೆಯುವ ಆಸಕ್ತಿ ಇರುವ ಕಾಳಿಹುಂಡಿ ಶಿವಕುಮಾರ್‌, ಮೈಸೂರು ಆಕಾಶವಾಣಿ ಕೇಂದ್ರದ ಸಮ್ಯುದತಾ ಶ್ರೋತೃಗಳ ಬಳಗದಲ್ಲೂ ಸಕ್ರಿಯ. ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಪತ್ರಿಕಾ ವಿತರಕರ ಸಮ್ಮೇಳನದಲ್ಲಿ ‘ಅತ್ಯುತ್ತಮ ಓದುಗ’ ಎಂಬ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.

PREV

Recommended Stories

ಮುಂದುವರಿದ ಉಪವಾಸ ಸತ್ಯಾಗ್ರಹ: ರೈತನ ಅರೋಗ್ಯದಲ್ಲಿ ಏರುಪೇರು
ಅನುದಾನ ಪಟ್ಟಿ ಸಿದ್ಧತೆಗೆ ಹೆಚ್ಚಿನ ಮುತುವರ್ಜಿ ವಹಿಸಿ: ಹರೀಶ್