ಈ ಬಸ್ಸಿನಲ್ಲಿ ನಿತ್ಯವೂ ಕನ್ನಡ ದಿನಪತ್ರಿಕೆ ಲಭ್ಯ

KannadaprabhaNewsNetwork |  
Published : Nov 25, 2025, 02:15 AM IST
Kannada

ಸಾರಾಂಶ

ಕನ್ನಡ ನಾಡು, ನುಡಿಗಾಗಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸೇವೆ ಮಾಡುತ್ತಿರುತ್ತಾರೆ. ಆದರೆ, ಇಲ್ಲೊಬ್ಬ ಬಸ್ ನಿರ್ವಾಹಕ ಕಳೆದ 20 ವರ್ಷಗಳಿಂದ ‘ಕನ್ನಡಪ್ರಭ’ ಸೇರಿದಂತೆ ಎಲ್ಲ ಕನ್ನಡ ದಿನಪತ್ರಿಕೆಗಳನ್ನು ಪ್ರಯಾಣಿಕರಿಗೆ ಓದಲು ಉಚಿತವಾಗಿ ನೀಡುತ್ತಿದ್ದಾರೆ.

ಸೋಮರಡ್ಡಿ ಅಳವಂಡಿ

 ಕೊಪ್ಪಳ :  ಕನ್ನಡ ನಾಡು, ನುಡಿಗಾಗಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಸೇವೆ ಮಾಡುತ್ತಿರುತ್ತಾರೆ. ಆದರೆ, ಇಲ್ಲೊಬ್ಬ ಬಸ್ ನಿರ್ವಾಹಕ ಕಳೆದ 20 ವರ್ಷಗಳಿಂದ ‘ಕನ್ನಡಪ್ರಭ’ ಸೇರಿದಂತೆ ಎಲ್ಲ ಕನ್ನಡ ದಿನಪತ್ರಿಕೆಗಳನ್ನು ಪ್ರಯಾಣಿಕರಿಗೆ ಓದಲು ಉಚಿತವಾಗಿ ನೀಡುತ್ತಿದ್ದಾರೆ.

ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ನಿವಾಸಿಯಾಗಿರುವ ಮುರ್ತುಜಾಸಾಬ ಮೈದರಗಿ ಎನ್ನುವವರೇ ಈ ಕನ್ನಡ ಸೇವೆ ಮಾಡುತ್ತಿರುವವರು.

ಗಂಗಾವತಿಯಿಂದ ವಿಜಯಪುರಕ್ಕೆ ತೆರಳುವ ಬಸ್ಸಿನಲ್ಲಿ ಮುರ್ತುಜಾಸಾಬ ಕರ್ತವ್ಯ ನಿರ್ವಹಿಸುತ್ತಿದ್ದು, ಬೆಳಗ್ಗೆ 7.30ಕ್ಕೆ ಗಂಗಾವತಿಯಿಂದ ಬಸ್‌ ಹೊರಡುತ್ತದೆ. ಬಸ್‌ ಹೊರಡುವ ಮುನ್ನ ‘ಕನ್ನಡಪ್ರಭ’ ಸೇರಿದಂತೆ ಲಭ್ಯ ಇರುವ ಕನ್ನಡ ದಿನಪತ್ರಿಕೆಗಳನ್ನು ಖರೀದಿಸಿ, ಅವುಗಳನ್ನು ಬಸ್‌ನಲ್ಲಿ ಇಡುತ್ತಾರೆ. ಅದಕ್ಕಾಗಿಯೇ ಬಸ್‌ನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದಾರೆ. ಕೆಲವರು ಪತ್ರಿಕೆ ಓದುವ ಸಲುವಾಗಿಯೇ ಈ ಬಸ್‌ನಲ್ಲಿಯೇ ಪ್ರಯಾಣ ಮಾಡುತ್ತಾರೆ ಎನ್ನುತ್ತಾರೆ.

‘ಕನ್ನಡಪ್ರಭ’ ಓದಿ ನೌಕರಿ ಪಡೆದರು:

ಮುರ್ತುಜಾಸಾಬ ಮೈದರಗಿ ಅವರು ನಿತ್ಯವೂ ತಪ್ಪದೇ ಗ್ರಂಥಾಲಯಕ್ಕೆ ತೆರಳಿ, ಪತ್ರಿಕೆ ಓದುತ್ತಾರೆ. ಅದರಲ್ಲೂ ‘ಕನ್ನಡಪ್ರಭ’ ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಯಾಕೆಂದರೆ ‘ಕನ್ನಡಪ್ರಭ’ದಲ್ಲಿಯೇ ಪ್ರಕಟವಾದ ಮಾಹಿತಿಯಿಂದ ಅರ್ಜಿ ಸಲ್ಲಿಸಿ, ಸಾರಿಗೆ ಇಲಾಖೆಯಲ್ಲಿ ಚಾಲಕ ಕಂ ನಿರ್ವಾಹಕರಾಗಿದ್ದಾರೆ.

2006ರಲ್ಲಿ ಮೊದಲು ಸಿಂಧನೂರು ಘಟಕದಲ್ಲಿ ನೌಕರಿಗೆ ಸೇರಿದರು. ಅಲ್ಲಿಂದಲೇ ನಿತ್ಯವೂ ಬಸ್ಸಿನಲ್ಲಿ ಕನ್ನಡ ದಿನಪತ್ರಿಕೆಗಳನ್ನು ಇಡುವ ಅಭ್ಯಾಸ ಮಾಡಿಕೊಂಡರು. ಇದಾದ ಮೇಲೆ ಕೆಲವು ವರ್ಷ ಕುಷ್ಟಗಿ ಘಟಕದಲ್ಲಿ ಸೇವೆ ಮಾಡಿದ್ದಾರೆ. ಈಗ ಗಂಗಾವತಿ ಘಟಕದಲ್ಲಿ ಸೇವೆ ಮಾಡುತ್ತಿದ್ದಾರೆ. ಅವರ ಈ ರೂಢಿ ಪ್ರಯಾಣಕರಿಗೆ ಎಲ್ಲಿಲ್ಲದ ಖುಷಿ ನೀಡುತ್ತಿದೆ. ಅಷ್ಟೇ ಅಲ್ಲ, ಈ ಬಸ್ಸಿನಲ್ಲಿ ಪ್ರಯಾಣ ಮಾಡುವ ಪ್ರತಿಯೊಬ್ಬರಿಗೂ ಅವರು ಪತ್ರಿಕೆ ಕಂಡಕ್ಟರ್ ಎಂದೇ ಪ್ರಸಿದ್ಧ.

ಯಾಕೆ ಈ ಸೇವೆ?:

ನನ್ನ ನೇಮಕಾತಿಯಾಗಿರುವುದೇ ಪತ್ರಿಕೆಯಿಂದ. ಅಷ್ಟೇ ಅಲ್ಲ, ಕನ್ನಡ ಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕು. ನಮ್ಮ ಕನ್ನಡ ತಾಯಿಯನ್ನು ನಾವು ಬೆಳೆಸಬೇಕು. ಈ ಕಾರಣಕ್ಕಾಗಿಯೇ ನಾನು ಕಳೆದ 20 ವರ್ಷಗಳಿಂದ ‘ಕನ್ನಡಪ್ರಭ’ ಸೇರಿದಂತೆ ಕನ್ನಡ ದಿನಪತ್ರಿಕೆಗಳನ್ನು ನಿತ್ಯವೂ ಬಸ್ಸಿನಲ್ಲಿರಿಸುತ್ತೇನೆ ಎಂದು ಮುರ್ತುಜಾಸಾಬ ಮೈದರಗಿ ಹೇಳುತ್ತಾರೆ.

ಬಸ್ಸಿನಲ್ಲಿ ಬರುವವರು ಗುಟ್ಕಾ ಮತ್ತಿತರ ಅನಗತ್ಯ ವಸ್ತುಗಳನ್ನು ತರುತ್ತಾರೆ. ಆದರೆ, ಐದಾರು ರುಪಾಯಿ ನೀಡಿ ಪತ್ರಿಕೆ ತರುವುದಿಲ್ಲ. ಅವರಿಗೆ ಪತ್ರಿಕೆಯ ಬಗ್ಗೆ ಜಾಗೃತಿ ಬರಲಿ, ಅವರಲ್ಲಿಯೂ ಕನ್ನಡ ದಿನಪತ್ರಿಕೆ ಓದುವ ಹವ್ಯಾಸ ಬೆಳೆಯಲಿ ಎನ್ನುವ ಕಳಕಳಿಯಿಂದ ಮಾಡುತ್ತಿದ್ದೇನೆ ಎನ್ನುತ್ತಾರೆ.

ಕನ್ನಡದ ಅಭಿಮಾನ:

ಕೇವಲ ಪತ್ರಿಕೆ ನೀಡುವುದು ಅಷ್ಟೇ ಅಲ್ಲ, ಅವರ ಬಸ್ಸಿನಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸುತ್ತಾರೆ. ಕನ್ನಡ ಪತ್ರಿಕೆಯನ್ನು ನೀಡುತ್ತಲೇ ಪ್ರಯಾಣಿಕರಲ್ಲಿ ಕನ್ನಡ ಜಾಗೃತಿ ಮೂಡಿಸುತ್ತಾರೆ. ಪತ್ರಿಕೆ ಓದಲು ಕೇಳುವವರಿಗೆ ನೀತಿಪಾಠ ಮಾಡುತ್ತಾರೆ. ತೆಗೆದುಕೊಳ್ಳಿ, ಓದಿ ಎನ್ನುತ್ತಲೇ, ನೀವು ಮುಂದೆಯೂ ಈ ಅಭ್ಯಾಸ ಮಾಡಿಕೊಳ್ಳಿ ಎಂದು ತಿಳಿ ಹೇಳುತ್ತಾರೆ.

ನನಗೆ ಅತೀವ ಸಂತೋಷ ಕೊಡುವ ಕೆಲಸ ಇದಾಗಿದೆ. ಕನ್ನಡ ತಾಯಿ ನುಡಿ ಸೇವೆ ಎಂದು ನಾನು ನಿತ್ಯವೂ ತಪ್ಪದೇ ‘ಕನ್ನಡಪ್ರಭ’ ಸೇರಿದಂತೆ ಲಭ್ಯ ಇರುವ ಎಲ್ಲ ಕನ್ನಡ ದಿನಪತ್ರಿಕೆಗಳನ್ನು ಖರೀದಿಸಿ, ಬಸ್‌ನಲ್ಲಿರುತ್ತೇನೆ. ಪ್ರಯಾಣಿಕರು ಸಂತೋಷದಿಂದ ಓದುತ್ತಾರೆ.

-ಮುರ್ತೂಜಸಾಬ ಮೈದರಗಿ, ಬಸ್ ನಿರ್ವಾಹಕ, ಕೊಪ್ಪಳ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಎಸ್‌ಐಆರ್‌ನಿಂದ ಅರ್ಹರಿಗೆ ಅನ್ಯಾಯ ಆಗಬಾರ್ದು: ಸಿಎಂ
ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ