ಕನ್ನಡ ಫಲಕ ಅಳವಡಿಕೆ ಆದೇಶ: ಜಿಲ್ಲಾಧಿಕಾರಿಗೆ ಕನ್ನಡ ಸಾಹಿತ್ಯ ಪರಿಷತ್ ಅಭಿನಂದನೆ

KannadaprabhaNewsNetwork | Published : May 30, 2024 12:51 AM

ಸಾರಾಂಶ

ಮಡಿಕೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಕನ್ನಡ ಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಲ್ಲ ಸಾರ್ವಜನಿಕ ಫಲಕಗಳಲ್ಲಿ ಕನ್ನಡ ಪ್ರಮುಖ ಸ್ಥಾನದಲ್ಲಿರಬೇಕು ಮತ್ತು ಶೇ. 60ರಷ್ಟು ಭಾಗ ಕನ್ನಡದಲ್ಲಿ ಇರಬೇಕು ಎಂದು ಆದೇಶ ಹೊರಡಿಸಿರುವ ಕರ್ನಾಟಕ ಸರ್ಕಾರ ಹಾಗೂ ಜಿಲ್ಲೆಯಲ್ಲಿ ಅಳವಡಿಸಲು ಆದೇಶಿಸಿರುವ ಜಿಲ್ಲಾಧಿಕಾರಿ ವೆಂಕಟರಾಜಾ ಅವರನ್ನು ಅಭಿನಂದಿಸಿ ಪತ್ರ ಬರೆಯುವಂತೆ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡ ಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಲ್ಲ ಸಾರ್ವಜನಿಕ ಫಲಕಗಳಲ್ಲಿ ಕನ್ನಡ ಪ್ರಮುಖ ಸ್ಥಾನದಲ್ಲಿರಬೇಕು ಮತ್ತು ಶೇ. 60ರಷ್ಟು ಭಾಗ ಕನ್ನಡದಲ್ಲಿ ಇರಬೇಕು ಎಂದು ಆದೇಶ ಹೊರಡಿಸಿರುವ ಕರ್ನಾಟಕ ಸರ್ಕಾರ ಹಾಗೂ ಜಿಲ್ಲೆಯಲ್ಲಿ ಅಳವಡಿಸಲು ಆದೇಶಿಸಿರುವ ಜಿಲ್ಲಾಧಿಕಾರಿ ವೆಂಕಟರಾಜಾ ಅವರನ್ನು ಅಭಿನಂದಿಸಿ ಪತ್ರ ಬರೆಯುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ತೀರ್ಮಾನಿಸಿದೆ.

ಮಡಿಕೇರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೇಶವ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಪರಿಷತ್ತಿನ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಚುನಾವಣೆ ಮತ್ತು ಶಾಲೆಗಳಿಗೆ ರಜದ ಕಾರಣ ಉಳಿದು ಹೋಗಿರುವ ದತ್ತಿ ಕಾರ್ಯಕ್ರಮವನ್ನು ಜೂ. 15ರ ಒಳಗಾಗಿ ಮಾಡಬೇಕು. 2024 - 25ರ ನೂತನ ದತ್ತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕಿದೆ. ಎಲ್ಲ ಜಿಲ್ಲಾ ತಾಲೂಕು ಮತ್ತು ಹೋಬಳಿ ಸಮಿತಿಗಳು ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಬೇಕು ಎಂದು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ವತಿಯಿಂದ ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆ ತಾಲೂಕು ಮತ್ತು ಹೋಬಳಿ ಘಟಕಗಳ ಕಾರ್ಯಕಾರಿ ಸಮಿತಿಯ ಸದಸ್ಯರ ಭಾವಚಿತ್ರ ಮತ್ತು ಮಾಹಿತಿ ಇರುವ ಪುಸ್ತಕವನ್ನು ಬಿಡುಗಡೆ ಮಾಡುವ ಯೋಜನೆ ಇದ್ದು ಕೂಡಲೇ ಅದಕ್ಕೆ ಬೇಕಾದ ಭಾವಚಿತ್ರ ಅರ್ಜಿ ನೀಡಬೇಕೆಂದು ಕೋರಿದರು.

ಜಿಲ್ಲಾಧ್ಯಕ್ಷರಿಗೆ ಆರೋಗ್ಯದ ಸಮಸ್ಯೆಯಿಂದ ಕಾರ್ಯಕ್ರಮಗಳಿಗೆ ಪಾಲ್ಗೊಳ್ಳಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಜಿಲ್ಲಾ ಸಮಿತಿ ತಾಲೂಕು ಸಮಿತಿ ಮತ್ತು ಹೋಬಳಿ ಸಮಿತಿಗಳು ಕಾರ್ಯಕ್ರಮಗಳನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕಾಗಿರುವುದು ನಮ್ಮ ಜವಾಬ್ದಾರಿ. ಈಗಾಗಲೇ ಚೆಟ್ಟಿಮಾನಿಯಲ್ಲಿ ನಡೆದ ಮಡಿಕೇರಿ ತಾಲೂಕು ಗ್ರಾಮಸಿರಿ ಕಾರ್ಯಕ್ರಮ, ಕರಿಕೆಯಲ್ಲಿ ನಡೆದ ಗಡಿನಾಡ ಉತ್ಸವ, ಕುಶಾಲನಗರ ತಾಲೂಕು ಹೆಬ್ಬಾಲೆಯಲ್ಲಿ ನಡೆದ ಗ್ರಾಮಸಿರಿ ಉತ್ಸವ ಸೇರಿದಂತೆ ದತ್ತಿ ಕಾರ್ಯಕ್ರಮಗಳಲ್ಲಿ, ಸಂಸ್ಥಾಪನಾ ದಿನಾಚರಣೆ ಪಾಲ್ಗೊಂಡು ಕಾರ್ಯಕ್ರಮವನ್ನು ಸಮರ್ಪಕವಾಗಿ ನಡೆಸಿಕೊಟ್ಟಂತಹ ಎಲ್ಲ ಸದಸ್ಯರನ್ನು ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಅಭಿನಂದಿಸಿದರು.

ಮೃತ ಪಟ್ಟಿರುವ ಸಾಹಿತ್ಯ ಪರಿಷತ್ತಿನ ಸದಸ್ಯರ ಪಟ್ಟಿ ತಯಾರಿಸಿ ಈಗಾಗಲೇ ಎಲ್ಲಾ ತಾಲೂಕು ಸಮಿತಿಗಳಿಗೆ ಕಳುಹಿಸಲಾಗಿದೆ. ಅದನ್ನು ಪರಿಶೀಲಿಸಿ ದೃಢಪಡಿಸಿ ಕೇಂದ್ರಕ್ಕೆ ಕಳುಹಿಸಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಮೃತ ಸದಸ್ಯರ ಹೆಸರು ತೆಗೆದುಹಾಕುವ ಕೆಲಸ ನಡೆಯಬೇಕಾಗಿದೆ ಎಂದರು.

ಜಿಲ್ಲಾ ಕಾರ್ಯ ಸಮಿತಿ ಸದಸ್ಯ, ಸಾಹಿತಿ ಹಂಚೇಟಿರ ಫ್ಯಾನ್ಸಿ ಮುತ್ತಣ್ಣ ತಮ್ಮ ಅತ್ತೆ ಮಾವ ಹೆಸರಿನಲ್ಲಿ ರುವ ಐವತ್ತು ಸಾವಿರ ರು.ಗಳ ದತ್ತಿ ಸ್ಥಾಪನೆ ಮಾಡುವುದಾಗಿ ಘೋಷಿಸಿದರು.

ಜಿಲ್ಲಾ ಗೌರವ ಕಾರ್ಯದರ್ಶಿ ಎಸ್. ಐ ಮುನಿರ್ ಅಹಮದ್, ರೇವತಿ ರಮೇಶ್, ಜಿಲ್ಲಾ ಗೌರವ ಕೋಶಾಧಿಕಾರಿ ಎಸ್. ಎಸ್ ಸಂಪತ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್.ಪಿ ಚಂದ್ರಶೇಖರ್ ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್, ಸಂಪಾಜೆ ಹೋಬಳಿ ಅಧ್ಯಕ್ಷ ಗೋಪಾಲ್ ಪೆರಾಜೆ, ಮೂರ್ನಾಡು ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್, ಕೋಶಾಧಿಕಾರಿ ಕೆ ಡಿ ವಿಂದ್ಯ, ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ. ಎನ್ ಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಫ್ಯಾನ್ಸಿ ಮುತ್ತಣ್ಣ, ಮ.ನಾ ವೆಂಕಟನಾಯಕ್, ಸಹನಾ ಕಾಂತಬೈಲು, ಗೌರಮ್ಮ ಮಾದಮಯ್ಯ, ಚೊಕ್ಕಾಡಿ ಪ್ರೇಮ ರಾಘವಯ್ಯ, ಎಚ್‌.ಪಿ ಜಯಮ್ಮ, ಎಚ್.ಎಸ್ ಪ್ರೇಮ್ ಕುಮಾರ್, ಕುಶಾಲನಗರ ತಾಲೂಕು ಕೋಶಾಧಿಕಾರಿ ಕೆ.ವಿ. ಉಮೇಶ್, ಮಡಿಕೇರಿ ತಾಲೂಕು ಕೋಶಾಧಿಕಾರಿ ಸಿದ್ದರಾಜು ಬೆಳ್ಳಯ್ಯ, ಮಡಿಕೇರಿ ತಾಲೂಕು ನಿಕಟ ಪೂರ್ವ ಅಧ್ಯಕ್ಷ ಅಂಬೆಕಲ್ ನವೀನ್ ಮತ್ತು ಕಚೇರಿ ಸಿಬ್ಬಂದಿ ರೇಣುಕಾ ಇದ್ದರು.

Share this article