ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾಗಡಿ ರಸ್ತೆ ಟೋಲ್ ಗೇಟ್ ಸಮೀಪದ ವಿದ್ಯಾರಣ್ಯ ನಗರದ ಶ್ರೀ ಮಂಜುನಾಥ ವಿದ್ಯಾಲಯದಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 26 ವಿದ್ಯಾರ್ಥಿಗಳಿಗೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅವರು ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ಮುಖ್ಯ. ಆದರೆ, ಅಂಕ ಗಳಿಕೆಯೊಂದೇ ಮುಖ್ಯವಲ್ಲ. ಶಾಲೆಗಳಲ್ಲಿ ಪಠ್ಯ ಪುಸ್ತಕಗಳ ಶಿಕ್ಷಣ ಮೀರಿ ಜ್ಞಾನ, ಒಳ್ಳೆಯತನ, ಜವಾಬ್ದಾರಿಗಳನ್ನು ಬೆಳೆಸಿಕೊಳ್ಳಬೇಕು. ಸ್ವಸಾಮರ್ಥ್ಯದ ಮೇಲೆ ನಂಬಿಕೆ ಮತ್ತು ವಿಶ್ವಾಸ ಇಟ್ಟುಕೊಳ್ಳಬೇಕು. ಆಗ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಒಳ್ಳೆಯ ವ್ಯಕ್ತಿಯಾಗಿ ಎತ್ತರದ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಾಧನೆಗೆ ಬಡತನ ಅಥವಾ ಸ್ಥಾನಮಾನ ಅಡ್ಡಿಯಾಗುವುದಿಲ್ಲ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ಸಾಧನೆಗಾಗಿ ಸ್ವಂತ ಶ್ರಮ ಹಾಕುವ ಜೊತೆಗೆ ಸಾಧಿಸಬೇಕು ಎನ್ನುವ ಛಲ ಹೊಂದಬೇಕು. ಸಾಧಕರನ್ನು ನೋಡಿ ಸ್ಫೂರ್ತಿ ಪಡೆಯಬೇಕು. ನಿತ್ಯ ದಿನಪತ್ರಿಕೆಗಳನ್ನು ಓದಬೇಕು. ವಿದ್ಯಾರ್ಥಿಗಳ ಸಾಧನೆಗೆ ತಂದೆ-ತಾಯಿ ಮತ್ತು ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ರವಿ ಹೆಗಡೆ ಹೇಳಿದರು.ಮಂಜುನಾಥ ವಿದ್ಯಾಲಯದ ಪ್ರಾಂಶುಪಾಲ ಜೆ.ಎಸ್.ನಾಗರಾಜು ಮಾತನಾಡಿ, ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿರುವುದರಿಂದ ಮತ್ತಷ್ಟು ವಿದ್ಯಾರ್ಥಿಗಳು ಕೂಡ ಸಾಧನೆ ಮಾಡಲು ಪ್ರೇರಣೆ ಪಡೆಯಬೇಕು. ನಾನು ಇನ್ನೂ ಉತ್ತಮ ಸಾಧನೆ ಮಾಡುತ್ತೇನೆ ಎನ್ನುವ ಛಲ ಹೊಂದಬೇಕು. ಸಾಧನೆಯ ಮೂಲಕ ತಂದೆ-ತಾಯಿ ಮತ್ತು ಶಾಲೆಗೆ ಗೌರವ ಮತ್ತು ಕೀರ್ತಿ ಬರುತ್ತದೆ ಎಂದರು.
ನಿವೃತ್ತ ಸರ್ಕಾರಿ ಅಧಿಕಾರಿ ವಿ.ಹನುಮಂತಯ್ಯ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜೊತೆಗೆ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಓದಿನ ಜ್ಞಾನದ ಜೊತೆಗೆ ಲೋಕಜ್ಞಾನ ಮುಖ್ಯವಾಗಿರುತ್ತದೆ. ಜಗತ್ತಿನ ಸಾಧಕರೆಲ್ಲರೂ ಶೈಕ್ಷಣಿಕವಾಗಿ, ಶಾಲಾ-ಕಾಲೇಜುಗಳಲ್ಲಿ ಅಂಕ ಸಾಧನೆ ಮಾಡಿದವರಲ್ಲ. ಆದರೆ, ಸಾಧನೆಗೆ ಎಲ್ಲಾ ರೀತಿಯ ಜ್ಞಾನ ಅವಶ್ಯಕವಾಗುತ್ತದೆ ಎಂದು ಹೇಳಿದರು. ಈ ವೇಳೆ ಶಾಲೆಯ ನೂರಾರು ವಿದ್ಯಾರ್ಥಿಗಳು, ಪತ್ರಿಕಾ ಪ್ರತಿನಿಧಿ ಎಂ. ಪ್ರಕಾಶ್, ವೆಂಕಟರಾಜು, ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.