ಮಕ್ಕಳ ಕಲ್ಪನೆಗೆ ಬಣ್ಣದ ರೂಪ ನೀಡಿದ ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆ

KannadaprabhaNewsNetwork |  
Published : Nov 14, 2026, 02:00 AM IST
ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿರುವ ಮಕ್ಕಳು. | Kannada Prabha

ಸಾರಾಂಶ

ಮಕ್ಕಳ ಮನಸ್ಸಿನಲ್ಲಿರುವ ಕಲ್ಪನೆಗಳಿಗೆ ಬಣ್ಣದ ರೂಪ ನೀಡುವ, ಅವರಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸತತವಾಗಿ ಕಳೆದ ಎಂಟು ವರ್ಷಗಳಿಂದ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಆಯೋಜಿಸುತ್ತಿರುವ ಚಿತ್ರಕಲಾ ಸ್ಪರ್ಧೆಯು ಸಂಪೂರ್ಣ ಯಶಸ್ವಿಯಾಯಿತು.

ಹುಬ್ಬಳ್ಳಿ:

ಈ ಬಾರಿಯ ಮಕ್ಕಳ ದಿನಾಚರಣೆಯ ಸಂಭ್ರಮಕ್ಕೆ ಇಂದಿರಾ ಗಾಜಿನ ಮನೆಯ ಆವರಣ ಸಾಕ್ಷಿಯಾಯಿತು. ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ಮುನ್ನಾದಿನ ಶುಕ್ರವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯು ಸಾವಿರಾರು ಮಕ್ಕಳ ಸೃಜನಶೀಲ ಪ್ರತಿಭೆ ಹೊರಹಾಕಲು ಕಾರಣವಾಯಿತು. ಮಕ್ಕಳ ಕೈಯಿಂದ ಅರಳಿದ ತರಹೇವಾರಿ ಕಲ್ಪನೆಯ ಚಿತ್ರಗಳು ಸ್ಪರ್ಧೆಗೆ ಮತ್ತಷ್ಟು ಮೆರುಗು ನೀಡಿದವು.

ಮಕ್ಕಳ ಮನಸ್ಸಿನಲ್ಲಿರುವ ಕಲ್ಪನೆಗಳಿಗೆ ಬಣ್ಣದ ರೂಪ ನೀಡುವ, ಅವರಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸತತವಾಗಿ ಕಳೆದ ಎಂಟು ವರ್ಷಗಳಿಂದ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ಆಯೋಜಿಸುತ್ತಿರುವ ಚಿತ್ರಕಲಾ ಸ್ಪರ್ಧೆಯು ಸಂಪೂರ್ಣ ಯಶಸ್ವಿಯಾಯಿತು. ಬೆಳಗ್ಗೆಯಿಂದಲೇ ಗಾಜಿನ ಮನೆಯ ಆವರಣ ಮಕ್ಕಳ ಕಲರವದಿಂದ ಕಳೆಗಟ್ಟಿತ್ತು. ಕೈಯಲ್ಲಿ ಬಣ್ಣದ ಪೆನ್ಸಿಲ್, ಕುಂಚ, ಬಣ್ಣದ ಡಬ್ಬಿ, ಬ್ರಶ್ ಹಿಡಿದ ವಿದ್ಯಾರ್ಥಿಗಳ ಮುಖದಲ್ಲಿ ಸ್ಪರ್ಧೆಯ ಉತ್ಸಾಹ ಎದ್ದು ಕಾಣುತ್ತಿತ್ತು. ಪ್ರತಿಯೊಬ್ಬರಲ್ಲೂ, ನಾನು ಈ ಸ್ಪರ್ಧೆಯಲ್ಲಿ ಉತ್ತಮವಾಗಿ ಚಿತ್ರ ಬಿಡಿಸಿ ಪ್ರಥಮ ಬಹುಮಾನವಾದ ಸೈಕಲ್‌ ಪಡೆಯುತ್ತೇನೆಂಬ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ, ಇಡೀ ಪರಿಸರವೇ ಬಣ್ಣಗಳ ಲೋಕವಾಗಿ ಕಂಗೊಳಿಸಿತು.

ಪ್ರತಿ ತರಗತಿಗೆ ನಾಲ್ಕು ಬಹುಮಾನ:

ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು ತಮ್ಮ ಕಲ್ಪನಾ ಲೋಕವನ್ನು ಹಾಳೆಯ ಮೇಲೆ ಬಣ್ಣಗಳ ಮೂಲಕ ತೆರೆದಿಟ್ಟರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳ ಉತ್ಸಾಹ, ಅವರ ಚಿತ್ರಗಳಲ್ಲಿನ ವೈವಿಧ್ಯಮಯ ಪರಿಕಲ್ಪನೆಗಳು ನೋಡುಗರ ಗಮನ ಸೆಳೆದವು. ಪ್ರತಿ ತರಗತಿಗೆ ಪ್ರತ್ಯೇಕ ವಿಷಯ ನೀಡಿ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳ ವಯಸ್ಸು, ಗ್ರಹಿಕೆ ಹಾಗೂ ಚಿತ್ರಕಲಾ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು. ಪುಟ್ಟ ಮಕ್ಕಳಿಂದ ಹಿಡಿದು ಪ್ರೌಢಶಾಲಾ ವಿದ್ಯಾರ್ಥಿಗಳವರೆಗೆ ಎಲ್ಲರೂ ತಮ್ಮದೇ ಆದ ಕಲ್ಪನೆಗೆ ಬಣ್ಣ ತುಂಬಿದರು. 8ನೇ ತರಗತಿ ವಿದ್ಯಾರ್ಥಿಗಳಿಗೆ ಹಸಿರು ಜೀವನ, 9ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಚ್ಛ ಭಾರತ, 10ನೇ ತರಗತಿ ವಿದ್ಯಾರ್ಥಿಗಳಿಗೆ ಬರಗಾಲದ ತೀವ್ರತೆ ವಿಷಯಗಳು ಮಕ್ಕಳ ಕುಂಚದಲ್ಲಿ ಜೀವಂತಿಕೆ ಪಡೆದವು.

8 ವರ್ಷಗಳ ಕಲಾ ಅಭಿಯಾನ:

ಕನ್ನಡಪ್ರಭ ಪತ್ರಿಕೆಯು ಕೇವಲ ಸುದ್ದಿಗಳ ಮೂಲಕ ಸಮಾಜದೊಂದಿಗೆ ಬೆರೆಯುವುದಷ್ಟೇ ಅಲ್ಲದೆ, ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಬೆಳೆಸುವ ಸಾಮಾಜಿಕ ಹೊಣೆಗಾರಿಕೆ ಸಹ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಆರಂಭವಾದ ಚಿತ್ರಕಲಾ ಸ್ಪರ್ಧೆ ಇದೀಗ ಎಂಟನೇ ವರ್ಷಕ್ಕೆ ಕಾಲಿಟ್ಟಿರುವುದು ವಿಶೇಷ. ವರ್ಷದಿಂದ ವರ್ಷಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ಸಂಖ್ಯೆ ಮತ್ತು ಆಸಕ್ತಿ ಹೆಚ್ಚುತ್ತಿರುವುದು ಈ ಪ್ರಯತ್ನದ ಯಶಸ್ಸಿಗೆ ಸಾಕ್ಷಿಯಾಗಿದೆ.

ಮಕ್ಕಳಿಗೆ ಪಠ್ಯಪುಸ್ತಕದ ಜ್ಞಾನವಷ್ಟೇ ಅಲ್ಲದೆ, ಸೃಜನಶೀಲ ಚಿಂತನೆ, ಕಲಾತ್ಮಕ ಅಭಿವ್ಯಕ್ತಿ ಹಾಗೂ ಸಾಮಾಜಿಕ ಪ್ರಜ್ಞೆಯೂ ಮುಖ್ಯ. ಚಿತ್ರಕಲೆ ಮಕ್ಕಳ ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಪರಿಣಾಮಕಾರಿ ಮಾಧ್ಯಮವಾಗಿದೆ. ಇಂತಹ ವೇದಿಕೆಗಳು ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಜತೆಗೆ ಅವರಲ್ಲಿನ ಕಲಾಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುತ್ತವೆ ಎಂದು ಕಾರ್ಯಕ್ರಮದ ಅತಿಥಿಗಳು ಕನ್ನಡಪ್ರಭ ಪ್ರಯತ್ನವನ್ನು ಶ್ಲಾಘಿಸಿದರು.

ಮಕ್ಕಳ ದಿನಾಚರಣೆಯ ಸಂಭ್ರಮಕ್ಕೆ ಬಣ್ಣದ ಮೆರುಗು ನೀಡಿದ ಕನ್ನಡಪ್ರಭದ ಈ ಪ್ರಯತ್ನ, ಎಂಟು ವರ್ಷಗಳ ಪಯಣದೊಂದಿಗೆ ಮತ್ತಷ್ಟು ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗಿದೆ. ಸ್ಪರ್ಧೆಯ ಬಹುಮಾನಕ್ಕಿಂತಲೂ ಭಾಗವಹಿಸುವ ಅವಕಾಶ, ತಮ್ಮ ಕಲ್ಪನೆಗೆ ರೂಪ ನೀಡಿದ ಸಂತಸವೇ ಮಕ್ಕಳ ಪಾಲಿಗೆ ದೊಡ್ಡ ಸಂಭ್ರಮವಾಗಿತ್ತು ಎಂಬುದು ವಿಜೇತ ಮಕ್ಕಳ ಮಂದಹಾಸದಲ್ಲಿ ಕಾಣುತ್ತಿತ್ತು. ಪ್ರತಿ ತರಗತಿಯ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ, ನಗದು ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.

ಈ ಚಿತ್ರಕಲಾ ಸ್ಪರ್ಧೆಯ ಯಶಸ್ವಿಯಾಗಲು ಸ್ವರ್ಣಾ ಗ್ರುಪ್‌ ಆಫ್‌ ಕಂಪನಿಜ್‌, ಮೇಜೇಥಿಯಾ ಫೌಂಡೇಶನ್‌, ಗಂಗಾವತಿ ಸಿಲ್ಕ್‌, ಟ್ರ್ಯಾಕ್‌ ಅಂಟ ಟ್ರಾಯಲ್‌, ಹ್ಯಾಂಗೋ ಐಸಕ್ರೀಮ್‌, ದಾವಣಗೆರೆ ಬಿ.ಎಸ್‌. ಚೆನ್ನಬಸಪ್ಪ ಅಂಡ್‌ ಸನ್ಸ್‌, ಹೆಗಡೆ ಗ್ರುಪ್‌, ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಟಾನ, ಅಸೋಸಿಯೇಶನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ ಸಹಕರಿಸಿದರು. ಹಾಗೆಯೇ, ಸಾವಿರಾರು ಮಕ್ಕಳು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ 28 ಕರ್ನಾಟಕ ಎನ್‌ಸಿಸಿ ಬಟಾಲಿಯನ್‌ ಮತ್ತು ಕೆಎಸ್‌ಎಸ್‌ ಕಾಲೇಜು, ವಿದ್ಯಾನಗರ ಹುಬ್ಬಳ್ಳಿ ಘಟಕದ ಸಂಯೋಜನೆಯೊಂದಿಗೆ ಪಾಲ್ಗೊಂಡಿದ್ದರು.

ಖ್ಯಾತ ಗಾಯಕಿ ಮಹನ್ಯ ಗುರು ಪಾಟೀಲ, ಇಡೀ ಚಿತ್ರಕಲಾ ಸ್ಪರ್ಧೆಗೆ ಹಾಗೂ ಭಾಗವಹಿಸಿದ ಮಕ್ಕಳಿಗೆ ಹಾಡುಗಳ ಮೂಲಕ ಸ್ಪೂರ್ತಿ ತುಂಬಿದರು. ಹುಬ್ಬಳ್ಳಿಯ ಬಾಲಾಜಿ ಆಸ್ಪತ್ರೆಯ ಮುಖ್ಯಸ್ಥ, ಖ್ಯಾತ ನರರೋಗ ತಜ್ಞರಾದ ಡಾ. ಕ್ರಾಂತಿಕಿರಣ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ, ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ, ವೆಂಕಟೇಶ್ವರ ಎಲೆಕ್ಟ್ರಿಲ್‌ ಆ್ಯಂಡ್‌ ಎಂಜಿನಿಯರಿಂಗ್‌ ವರ್ಕ್ಸ್‌ನ ಮಾಲೀಕ ಪರಶುರಾಮ ಪೂಜಾರ ಅತಿಥಿಗಳಾಗಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕನ್ನಡಪ್ರಭ ಪತ್ರಿಕೆ ಸಂಪಾದಕ ಗಿರೀಶರಾವ್‌ ಹತ್ವಾರ್‌ (ಜೋಗಿ) ವಹಿಸಿದ್ದರು. ಬಹುಮಾನ ವಿತರಣೆಯನ್ನು ಕನ್ನಡಪ್ರಭ ಹುಬ್ಬಳ್ಳಿಯ ಬ್ಯೂರೋ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ ನೆರವೇರಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಮುಖ್ಯ ವರದಿಗಾರ ಶಿವಾನಂದ ಗೊಂಬಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ