ಕನ್ನಡಪ್ರಭ ಪತ್ರಕರ್ತ ಚನ್ನಯ್ಯ ಇಟ್ನಾಳಮಠ ಇನ್ನಿಲ್ಲ

KannadaprabhaNewsNetwork |  
Published : Jul 15, 2025, 01:00 AM ISTUpdated : Jul 15, 2025, 11:31 AM IST
itnalamutt

ಸಾರಾಂಶ

ಅಥಣಿಯ ಕನ್ನಡಪ್ರಭದ ಹಿರಿಯ ಪತ್ರಕರ್ತ ಚನ್ನಯ್ಯ ಎ.ಇಟ್ನಾಳಮಠ (62) ಅವರು ಸೋಮವಾರ ಅನಾರೋಗ್ಯದಿಂದ ನಿಧನರಾದರು. ಕನ್ನಡಪ್ರಭ ಮತ್ತು ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್‌ ಪತ್ರಿಕೆಗಳ ಅಥಣಿ ತಾಲೂಕು ವರದಿಗಾರರಾಗಿ ಸುಮಾರು ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ.

 ಬೆಳಗಾವಿ :  ಅಥಣಿಯ ಕನ್ನಡಪ್ರಭದ ಹಿರಿಯ ಪತ್ರಕರ್ತ ಚನ್ನಯ್ಯ ಎ.ಇಟ್ನಾಳಮಠ (62) ಅವರು ಸೋಮವಾರ ಅನಾರೋಗ್ಯದಿಂದ ನಿಧನರಾದರು.

ಕನ್ನಡಪ್ರಭ ಮತ್ತು ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್‌ ಪತ್ರಿಕೆಗಳ ಅಥಣಿ ತಾಲೂಕು ವರದಿಗಾರರಾಗಿ ಸುಮಾರು ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ.

ಮಾಧ್ಯಮ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಇಟ್ನಾಳಮಠ ಅವರು ಸಾಮಾಜಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತಮ್ಮ ನೇರ ನಡೆ ನುಡಿಗಳಿಂದ ಹೆಸರಾಗಿದ್ದ ಇಟ್ನಾಳಮಠರು ಒಬ್ಬ ಉತ್ತಮ ಪತ್ರಕರ್ತರಾಗಿ ಕೆಲಸವನ್ನು ನಿರ್ವಹಿಸಿದ್ದರು. ಸಮಾಜ ಚಿಂತಕರಾಗಿ ಹಲವಾರು ನೆಲೆಗಳಲ್ಲಿ ಸೇವೆಯನ್ನು ನೀಡಿದ್ದರು. ಅವರ ವಿಚಾರಗಳು ನಿಷ್ಠರಾಗಿರುತ್ತಿದ್ದವು. ಅವರು ಸ್ಪಷ್ಟವಾದಿಯಾಗಿದ್ದರು. ರಾಜಕೀಯ ವಿಶ್ಲೇಷಕರು ಆಗಿದ್ದರು. ಮೃತರಿಗೆ ತಾಯಿ, ಪತ್ನಿ ಮತ್ತು ಪುತ್ರ ಇದ್ದಾರೆ.

ಇಟ್ನಾಳಮಠ ಅವರ ಅಂತ್ಯಕ್ರಿಯೆ ಜು.15 ರಂದು ಬೆಳಗ್ಗೆ 8 ಗಂಟೆಗೆ ಅಥಣಿಯ ಗಚ್ಚಿನಮಠದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಇಟ್ನಾಳಮಠ ನಿಧನಕ್ಕೆ ಕೋರೆ ಶೋಕ

ಅಥಣಿಯ ಹಿರಿಯ ಪತ್ರಕರ್ತ ಇಟ್ನಾಳಮಠ ಅವರು ನಿಧನ ಹೊಂದಿರುವುದು ತೀವ್ರ ದುಃಖವನ್ನುಂಟು ಮಾಡಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಪ್ರಭಾಕರ್ ಕೋರೆ ಅವರು ದುಃಖ ವ್ಯಕ್ತಪಡಿಸಿದ್ದಾರೆ. ಕೆಎಲ್ಇ ಸಂಸ್ಥೆ ಅಭಿಮಾನಿಗಳಾಗಿದ್ದ ಅವರು ಸಂಸ್ಥೆ ಬೆಳವಣಿಗೆ, ಹಲವಾರು ಸಭೆ ಸಮಾರಂಭಗಳ ವರದಿಗಳನ್ನು ಅತ್ಯಂತ ನಿಖರವಾಗಿ ಬರೆದು ಗಡಿ ಭಾಗದಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಜನತೆಗೆ ಎತ್ತಿ ತೋರಿಸಿದ್ದರು. ಅಥಣಿ ಭಾಗದ ವರದಿಗಳನ್ನು ನೀಡುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಒಬ್ಬ ಕ್ರಿಯಾಶೀಲ ವ್ಯಕ್ತಿ, ಸೃಜನಶೀಲ ಬರಹಗಾರ ನಿಧನರಾಗಿರುವುದು ಮಾಧ್ಯಮ ಕ್ಷೇತ್ರಕ್ಕೆ ತುಂಬಾ ನಷ್ಟ ಉಂಟಾಗಿದೆ, ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಕೆಎಲ್ಇ ಸಂಸ್ಥೆಯ ಪರವಾಗಿ ಸಂತಾಪ ಸೂಚಿಸಿದ್ದಾರೆ.

ಗಣ್ಯರ ಸಂತಾಪ:

ಮೃತರ ನಿಧನಕ್ಕೆ ಅಥಣಿಯ ಪೂಜ್ಯರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಮೋಟಿಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ಶೇಗುಣಸಿಯ ಡಾ.ಮಹಾಂತ ಸ್ವಾಮೀಜಿ, ಇಳಕಲ್ಲದ ಗುರುಮಹಾಂತ ಸ್ವಾಮೀಜಿ, ಕವಲಗುಡ್ಡದ ಅಮರೇಶ್ವರ ಮಹಾರಾಜರು, ಕಕಮರಿಯ ಗುರುಲಿಂಗ ಜಂಗಮ ಮಹಾರಾಜರು, ಶಾಸಕರಾದ ಲಕ್ಷ್ಮಣ ಸವದಿ, ಬರಮಗೌಡ ಕಾಗೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕಟಗಿಮಠ, ಮಾಜಿ ಶಾಸಕ ಮಹೇಶ ಕುಮಟಳ್ಳಿ, ಶಹಜಾನ ಡೊಂಗರಗಾವ, ಗಜಾನನ ಮಂಗಸೂಳಿ, ಸದಾಶಿವ ಬೂಟಾಳಿ ಸೇರಿದಂತೆ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ನಮ್ಮೂರಿನ ಹಿರಿಯ ಪತ್ರಕರ್ತ ಚನ್ನಯ್ಯ ಇಟ್ನಾಳಮಠ ಅಪಾರ ಜ್ಞಾನ, ಇತಿಹಾಸ ಬಲ್ಲವರಾಗಿದ್ದರು. ಅವರ ಅಗಲಿಕೆಯಿಂದ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ವರದಿಗಾರಿಕೆ, ಪತ್ರಿಕಾ ರಂಗದ ಸೇವೆ ಇಂದಿನ ಅನೇಕ ಪತ್ರಕರ್ತರಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಲಿ.

- ಲಕ್ಷ್ಮಣ ಸವದಿ, ಶಾಸಕ ಅಥಣಿ.

ಅಥಣಿಯ ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ಮರುಳಶಂಕರ ಸ್ವಾಮೀಜಿಯವರ ಮೊಮ್ಮಗನಾಗಿದ್ದ ಪತ್ರಕರ್ತ ಚನ್ನಯ್ಯ ಇಟ್ನಾಳಮಠ ಅವರು ನನ್ನ ಆತ್ಮೀಯ ಗೆಳೆಯರಾಗಿದ್ದವರು. ಪತ್ರಕರ್ತರಾಗಿ ಅಥಣಿಯ ಸಾಮಾಜಿಕ ಬದುಕಿನಲ್ಲಿ ಸಕ್ರಿಯರಾಗಿದ್ದರು. ಅವರ ಆಕಸ್ಮಿಕ ಅಗಲಿಕೆ ನನಗೆ ಅತ್ಯಂತ ದುಃಖ ತಂದಿದೆ. ಬಸವಾದಿ ಶಿವಶರಣರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬದವರಿಗೆ ದುಃಖ ಬರಿಸುವ ಶಕ್ತಿ ದೇವರು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.

-ಅಪ್ಪಾಸಾಹೇಬ ಅಲಿಬಾದಿ, ಹಿರಿಯ ಸಾಹಿತಿಗಳು ಅಥಣಿ.

ಅಥಣಿ ತಾಲೂಕಿನಲ್ಲಿ ನಿರ್ಲಕ್ಷ್ಯಕ್ಕೊಳಗಾದ ಕಾಮಗಾರಿಗಳು ಸೇರಿದಂತೆ ಅಭಿವೃದ್ಧಿಗೆ ಪೂರಕವಾಗುವಂತಹ ಕಾಮಗಾರಿಗಳ ಬಗ್ಗೆ ಹಿರಿಯ ಪತ್ರಕರ್ತರಾದ ಸಿ.ಎ.ಇಟ್ನಾಳಮಠ ಅವರು ವಿಶೇಷ ವರದಿಗಳನ್ನು ಪ್ರಕಟಿಸಿ ಆಡಳಿತ ನಡೆಸುವರನ್ನು ಎಚ್ಚರಿಸುತ್ತಿದ್ದರು. ಹೀಗಾಗಿ ಜಿಲ್ಲೆಯಲ್ಲಿಯೇ ಅಥಣಿ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಹೆಚ್ಚು ನಡೆದಿವೆ. ಅವರನ್ನು ಕಳೆದುಕೊಂಡ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ.

-ಸುನಿತಾ ಐಹೊಳೆ, ಕಾಂಗ್ರೆಸ್‌ ಮುಖಂಡರು ಅಥಣಿ.

PREV
Read more Articles on

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು