ಕನ್ನಡಪ್ರಭದ ಪರಿಸರ ಕಾಳಜಿ ಅಭಿನಂದನಾರ್ಹ

KannadaprabhaNewsNetwork |  
Published : Dec 12, 2025, 03:15 AM IST
ಮುದ್ದೇಬಿಹಾಳ ಪಟ್ಟಣದ ಮುಖ್ಯ ಬಜಾರ್‌ನಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏಷಿಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ನೇತೃತ್ವದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಪರಿಸರ ಹಾಗೂ ವನ್ಯ ಜೀವಿಗಳ ಕುರಿತು ಹೈಸ್ಕೂಲ ವಿದ್ಯಾರ್ಥಿಗಳಿಗಾಗಿ ಗುರುವಾರ ಚಿತ್ರಕಲಾ ಸ್ಪರ್ಧೆ ನಡೆಯಿತು. | Kannada Prabha

ಸಾರಾಂಶ

ಪರಿಸರ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆಗಳು ಸಹಕಾರಿಯಾಗಿವೆ. ಇಂತಹದೊಂದು ವೇದಿಕೆ ಕಲ್ಪಿಸಿಕೊಟ್ಟ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣನ್ಯೂಸ್‌ನ ಪರಿಸರ ಕಾಳಜಿ ಅಭಿನಂದನಾರ್ಹ ಎಂದು ತಹಸೀಲ್ದಾರ್‌ ಕೀತಿ ಚಾಲಕ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕಲಾತ್ಮಕ ಪ್ರತಿಭೆ ಪ್ರೋತ್ಸಾಹಿಸಲು ಹಾಗೂ ಪರಿಸರ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆಗಳು ಸಹಕಾರಿಯಾಗಿವೆ. ಇಂತಹದೊಂದು ವೇದಿಕೆ ಕಲ್ಪಿಸಿಕೊಟ್ಟ ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣನ್ಯೂಸ್‌ನ ಪರಿಸರ ಕಾಳಜಿ ಅಭಿನಂದನಾರ್ಹ ಎಂದು ತಹಸೀಲ್ದಾರ್‌ ಕೀತಿ ಚಾಲಕ ಹೇಳಿದರು.

ಪಟ್ಟಣದ ಮುಖ್ಯ ಬಜಾರ್‌ನಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡಪ್ರಭ ಹಾಗೂ ಏಷಿಯಾನೆಟ್ ಸುವರ್ಣ ನ್ಯೂಸ್ ನೇತೃತ್ವದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಪರಿಸರ ಹಾಗೂ ವನ್ಯ ಜೀವಿಗಳ ಕುರಿತು ಹೈಸ್ಕೂಲ್‌ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ತಾಲೂಕುಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಮಾತನಾಡಿ, ಇಂದಿನ ದಿನಗಳಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ದೃಶ್ಯ ಮಾಧ್ಯಮದ ಹಾವಳಿಯಲ್ಲಿ ಜನ ಸಾಮಾನ್ಯರು ಪತ್ರಿಕೆ ಓದುವ ಸಮಯ ಕಳೆದುಕೊಂಡಿದ್ದಾರೆ. ಹಾಗಾಗೀ ಮಕ್ಕಳು ದಿನನಿತ್ಯ ತಪ್ಪದೇ ದಿನಪತ್ರಿಕೆಗಳನ್ನು ಓದಬೇಕೆಂದು ಹೇಳಿದರು.

ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರಭುಗೌಡ ರಾರಡ್ಡಿ ಮಾತನಾಡಿ, ಮಕ್ಕಳು ತಮ್ಮ ಮನಸ್ಸಿನಲ್ಲಿರುವ ಪ್ರತಿಬಿಂಬ ಹಾಗೂ ಪರಿಸರದ ಬಗೆಗಿರುವ ಕಾಳಜಿಯನ್ನು ಚಿತ್ರಕಲೆಯಲ್ಲಿ ಬಿಡಿಸುವ ಮೂಲಕ ತಾಲೂಕು ಮಟ್ಟದಲ್ಲಿ ಆಯ್ಕೆಯಾಗಿ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ತಾಲೂಕಿನ ಕೀರ್ತಿ ಪಸರಿಸಲಿ ಎಂದು ಸ್ಪರ್ಧಿಗಳಿಗೆ ಶುಭ ಕೋರಿದರು.

ತಾಲೂಕು ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ಮಾತನಾಡಿ, ಪರಿಸರ, ಸಾಲುಮರದ ತಿಮ್ಮಕ್ಕ, ವನ್ಯಜೀವಿ ಸಂರಕ್ಷಣೆ ವಿಷಯಗಳ ಬಗ್ಗೆ ನಡೆಯುತ್ತಿರುವ ಸ್ಪರ್ಧೆಯಲ್ಲಿ ವಿಜೇತರನ್ನು ವಿಷಯ, ಕ್ರಿಯಾತ್ಮಕತೆ, ಬಣ್ಣಗಳ ಬಳಕೆ ಮತ್ತು ವಿಷಯ ಪರಿಗಣಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಮಾಡಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದು ಹೇಳಿದರು.

ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಮಾತನಾಡಿ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ. ಪ್ರಕೃತಿ ನಾಶದಿಂದ ದೇಶ ಸೇರಿದಂತೆ ವಿದೇಶಗಳಲ್ಲಿ ಅನಾಹುತಗಳು ಸಂಭವಿಸಿರುವ ಘಟನೆಗಳನ್ನು ಹಲವು ಬಾರಿ ಕಂಡಿದ್ದೇವೆ. ಅದರಲ್ಲೂ ಕೋವಿಡ್‌ ಸಂದರ್ಭದಲ್ಲಿ ಪರಿಸರ ರಕ್ಷಣೆ ಎಷ್ಟು ಮುಖ್ಯ ಅನ್ನುವುದು ಎಲ್ಲರ ಅರಿವಿಗೆ ಬಂದಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಮಾತ್ರವಲ್ಲ. ಎಲ್ಲ ನಾಗರಿಕರ ಕರ್ತವ್ಯ. ಮನೆ ಮುಂದೆ, ರಸ್ತೆಬದಿ ಕಸ ಎಸೆಯದೆ ಸ್ವಚ್ಛತೆ ಕಾಪಾಡಬೇಕು. ಸದ್ಯ ಚಿತ್ರಕಲಾ ಸ್ಪರ್ಧೆಗೆ ಮಾತ್ರ ಮಕ್ಕಳ ಪ್ರತಿಭೆ ಸೀಮಿತಗೊಳ್ಳದೆ ರಾಜ್ಯಮಟ್ಟಕ್ಕೆ ಹೋಗಬೇಕು. ಕಲೆಗಳ ತವರೂರಾಗಿರುವ ಮುದ್ದೇಬಿಹಾಳ ತಾಲೂಕಿನ ಕೀರ್ತಿ ಹೆಚ್ಚಿಸಬೇಕೆಂದರು.

ಹಿರಿಯ ಪತ್ರಕರ್ತ ಪರುಶುರಾಮ ಕೊಣ್ಣೂರ ಮಾತನಾಡಿ, ಸಂವಿಧಾನ ನಾಲ್ಕನೇ ಅಂಗವಾಗಿ ಮಾಧ್ಯಮ ಸಾಮಾಜಿಕ ಜವಾಬ್ದಾರಿಯನ್ನು ಉತ್ತಮವಾಗಿ ಕಾರ್ಯ ನಿರ್ವಹಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿದೆ ಎನ್ನುವುದಕ್ಕೆ ಕನ್ನಡಪ್ರಭ ಪತ್ರಿಕೆಯ ಸಾಕ್ಷಿಯಾಗುತ್ತದೆ. ಈ ನಿಟ್ಟಿನಲ್ಲಿ ಇಡೀ ರಾಜ್ಯದಾದ್ಯಂತ ಮಕ್ಕಳಿಗೆ ಪರಿಸರದ ಹಾಗೂ ವನ್ಯ ಜೀವಗಳ ಕರಿತು ಜಾಗೃತಿ ಮೂಡಿಸುವಲ್ಲಿ ಪತ್ರಿಕೆ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಕನ್ನಡ ಪ್ರಭ ಪತ್ರಿಕೆ ಹಿರಿಯ ವರದಿಗಾರ ನಾರಾಯಣ ಮಾಯಾಚಾರಿ ಮಾತನಾಡಿ, ಶಾಲಾ ಮಕ್ಕಳಲ್ಲಿರುವ ಸೃಜನಾತ್ಮಕ ಮತ್ತು ಕಲಾತ್ಮಕ ಪ್ರತಿಭೆಯನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಲು ಕನ್ನಡಪ್ರಭ ಪತ್ರಿಕೆ ವೇದಿಕೆ ಕಲ್ಪಿಸುವುದು ಚಿತ್ರಕಲೆಯ ಪ್ರಮುಖ ಉದ್ದೇಶವಾಗಿದೆ. ಹಾಗಾಗೀ ಮಕ್ಕಳು ಸ್ಪರ್ಧೆಯ ಸೂಚನೆಗಳನ್ನು ಪಾಲನೆ ಮಾಡಿ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮತ್ತು ರಾಜ್ಯಮಟ್ಟವನ್ನು ಪ್ರತಿನಿಧಿಸುವಂತಾಗಬೇಕು. ಮಕ್ಕಳು ಗುಣಮಟ್ಟ ಶಿಕ್ಷಣದ ಜತೆಗೆ ಚಿತ್ರಕಲೆ ಹಾಗೂ ಸಾಂಸ್ಕೃತಿಕ, ಕಲೆ ಸಾಹಿತ್ಯ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳು ಸದಾ ಚೈತನ್ಯಶೀಲರಾಗಿರಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ರಾಜೇಂದ್ರ ಹುನ್ನೂರ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಎಂ.ಎಸ್ ಕವಡಿಮಟ್ಟಿ, ತಾಲೂಕು ಶಿಕ್ಷಣ ಸಂಯೋಜಕಿ ಪಿ.ಎ ಬಾಳಿಕಾಯಿ, ಚಿತ್ರಕಲಾ ಶಿಕ್ಷಕರಾದ ಬಸವರಾಜ ಮನಗೂಳಿ, ಸುರೇಶಬಾಬು ಶಿವರಾಯ, ಸ್ವಪ್ನಾ ಮುರಾಳ ಪ್ರಾರ್ಥಿಸಿ, ಶಿಕ್ಷಕ ಟಿ.ಡಿ ಲಮಾಣಿ ನಿರೂಪಿಸಿ ಸ್ವಾಗತಿಸಿ, ವಂದಿಸಿದರು.

70ಕ್ಕೂ ವಿದ್ಯಾರ್ಥಿಗಳ ಭಾಗಿ:

ಇದೇ ವೇಳೆ ತಾಲೂಕಿನ ವಿವಿಧ ಶಾಲೆಗಳಿಂದ ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ, ವಾಯು ಮಾಲಿನ್ಯದ ಸ್ವರೂಪ, ಅದರಿಂದಾಗುವ ಪರಿಣಾಮ, ಓಝೋನ್ ಪದರದ ಹಾನಿ, ವಿಷ ಗಾಳಿ, ದೆಹಲಿಯಲ್ಲಿ ಉದ್ಭವಿಸಿರುವ ವಾಯು ಮಾಲಿನ್ಯ, ಪರಿಸರ ಅಸಮತೋಲನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಚಿತ್ರ ಬರೆದು ಸಂಭ್ರಮಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ನಿವೃತ್ತ ಚಿತ್ರಕಲಾ ಶಿಕ್ಷಕ ಎಸ್.ಆರ್.ಪಾಟೀಲ, ಬುರುಕಾಪೋಶ್ ಯಶಸ್ವಿಯಾಗಿ ನಡೆಸಿಕೊಟ್ಟರು.

ಚಿತ್ರಕಲೆ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳು

8ನೇ ತರಗತಿ ವಿಭಾಗದಲ್ಲಿ ಮಾಹೀನ ಕರಡಿ (ಪ್ರಥಮ), ತನುಶ್ರೀ ಬಿರಾದಾರ (ದ್ವೀತಿಯ), ವೀಣಾ ಬಡಿಗೇರ(ತೃತೀಯ). 9ನೇ ತರಗತಿ ವಿಭಾಗದಲ್ಲಿ ದಾವಲಮಾ ಕಿಜಿ (ಪ್ರಥಮ), ಸಮರ್ಥ ಮಠಪತಿ (ದ್ವೀತಿಯ), ಸಿಂಚನಾ ಪಲ್ಲೇದ (ತೃತೀಯ). 10ನೇ ತರಗತಿ ವಿಭಾಗದಲ್ಲಿ ಸ್ವಪ್ನಾ ಮೂರಾಳ (ಪ್ರಥಮ), ಸಾನಿಯಾ ವಾಲಿಕಾರ (ದ್ವೀತಿಯ), ಸಾಕ್ಷೀ ಬಡಿಗೇರ (ತೃತೀಯ) ಸ್ಥಾನ ಗಳಿಸಿ ಬಹುಮಾನ ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡರು.

ಮನುಷ್ಯ ಇಂದು ತನ್ನ ಸೌಂದರ್ಯಕ್ಕಾಗಿ, ಆಡಂಬರಕ್ಕಾಗಿ ಗಿಡಮರಗಳನ್ನು ಕಡಿದು ಪರಿಸರ ನಾಶ ಮಾಡುತ್ತಿರುವುದರಿಂದ ಇಂದು ಪರಿಷರದಲ್ಲಿ ವ್ಯತ್ಯಾಸವುಂಟಾಗಿ ಮನಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಎದುರಿಸಬೇಕಾಗಿದೆ.

- ಕೀತಿ ಚಾಲಕ, ತಹಸೀಲ್ದಾರ್‌ ಮುದ್ದೇಬಿಹಾಳ

ಪ್ರತಿನಿತ್ಯ ಹಲವು ವೈವಿದ್ಯಗಳೊಂದಿಗೆ ಕ್ರಿಯಾತ್ಮಕವಾಗಿ ಹಲವು ವಿಷಯಗಳನ್ನು ಕಟ್ಟಿ ಕೊಡುವ ಕನ್ನಡಪ್ರಭ ಪತ್ರಿಕೆ ಪರಿಸರದ ಬಗೆಗೆ ಕಾಳಜಿ ವಹಿಸಿಕೊಂಡು ಮಕ್ಕಳ ಪ್ರತಿಭೆ ಹೊರತರಲು ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ.

-ಬಿ.ಎಸ್.ಸಾವಳಗಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮುದ್ದೇಬಿಹಾಳ

ಅರಣ್ಯ ನಾಶದಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇನ್ನಾದರೂ ಎಚ್ಚೆತ್ತು ಕೊಂಡು ಅರಣ್ಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಮಕ್ಕಳಲ್ಲಿ ಪರಿಸರ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಲಿದೆ. ಮಕ್ಕಳು ಹಾಗೂ ಯುವ ಜನರು ಪರಿಸರ ಸಂರಕ್ಷಣೆ ಮಹತ್ವ ಅರಿಯಬೇಕು

- ಬಸನಗೌಡ ಬಿರಾದಾರ, ಅರಣ್ಯಾಧಿಕಾರಿ, ತಾಲೂಕು ಪ್ರಾದೇಶಿಕ ವಲಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ.ಅಂಬೇಡ್ಕರ್‌ ಭವನ ಅವ್ಯವಸ್ಥೆ ಆಗರ !
ಕಬ್ಬಿಗೆ ಒಟ್ಟು ₹ 5500 ನೀಡಲು ರೈತರ ಬೇಡಿಕೆ