ಗದಗ: ವಿದ್ಯಾರ್ಥಿಗಳಿಗೆ ಮೃಗಾಲಯದ ಪರಿಸರದ ಮಧ್ಯೆ ಚಿತ್ರ ಬಿಡಿಸಲು ಅವಕಾಶ ಕಲ್ಪಿಸಿಕೊಟ್ಟ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಕಾರ್ಯ ಶ್ಲಾಘನೀಯ. ಈ ರೀತಿ ಚಿತ್ರಕಲಾ ಸ್ಪರ್ಧೆ ಆಯೋಜನೆ ಮಾಡಿರುವುದು ಇನ್ನುಳಿದ ಮಾಧ್ಯಮಗಳಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಭಿಪ್ರಾಯ ಪಟ್ಟರು.
ಮಕ್ಕಳ ಸೃಜನಾತ್ಮಕ ಪ್ರತಿಭೆಯನ್ನು ಮುಕ್ತವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲ ಮಾಧ್ಯಮಗಳು ಇನ್ನು ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು. ಮಕ್ಕಳಲ್ಲಿನ ವಿಶೇಷವಾದ ಪ್ರತಿಭೆಗೆ ಪತ್ರಿಕೆಗಳ ಮುಖಪುಟದಲ್ಲಿ ಸ್ಥಳವನ್ನು ಕೊಟ್ಟು ಅವರನ್ನು ರಾಜ್ಯಕ್ಕೆ ಪರಿಚಯಿಸುವಂಥ ಕೆಲಸಗಳು ನಡೆಯಬೇಕು. ಇದಕ್ಕೆ ಪಾಲಕರು ಕೂಡಾ ಸ್ಪಂದಿಸಬೇಕು ಎಂದರು.
ಕಲೆ ಮತ್ತು ಸಾಹಿತ್ಯದ ತವರೂರು: ಗದಗ ಸಾಂಸ್ಕೃತಿಕವಾಗಿ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಸಂಗೀತ ಮತ್ತು ಸಾಹಿತ್ಯಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಕನ್ನಡ ನಾಡಿಗೆ ಮಹತ್ವದ ಕೊಡುಗೆ ನೀಡಿದ, ತಾಯಿ ಭುವನೇಶ್ವರಿ ಕಲ್ಪನೆಯನ್ನು ರಾಜ್ಯಕ್ಕೆ ನೀಡಿದ ಸಿ.ಎನ್. ಪಾಟೀಲರಂತಹ ಹಲವು ಕಲಾವಿದರನ್ನು ಮತ್ತು ಸಾಧಕರನ್ನು ಗದಗ ಬೆಳೆಸಿದೆ. ಈಗಿನ ವಿದ್ಯಾರ್ಥಿಗಳಲ್ಲಿ ಕಲಾ ಕ್ಷೇತ್ರದಲ್ಲಿ ಇಂತಹ ಒಳ್ಳೆಯ ಆಸಕ್ತಿ ಮೂಡಲು ಈ ಸ್ಪರ್ಧೆ ಉತ್ತಮ ವೇದಿಕೆಯಾಗಿದ್ದು, ನಿಜಕ್ಕೂ ಸಂತೋಷದ ವಿಷಯ ಎಂದರು.ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಮೊಬೈಲ್‌ನಿಂದ ಮಕ್ಕಳನ್ನು ದೂರವಿಟ್ಟು ಅವರಲ್ಲಿ ಅಡಗಿರುವ ಅಮೂಲ್ಯ ಪ್ರತಿಭೆಗಳ ಅನಾವರಣಕ್ಕೆ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಆಯೋಜಿಸುತ್ತಿರುವ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಉತ್ತಮ ವೇದಿಕೆಯಾಗಿದೆ ಎಂದರು.ಸಾಮಾಜಿಕ ಜಾಲತಾಣಗಳು ಮತ್ತು ರೀಲ್ಸ್‌ಗಳ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಅವಲಂಬನೆಯನ್ನು ತಗ್ಗಿಸಲು, ಕನ್ನಡಪ್ರಭ ಪತ್ರಿಕೆಯು ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸುತ್ತಿರುವ ಚಿತ್ರಕಲಾ ಸ್ಪರ್ಧೆಯನ್ನು ಇದೀಗ ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಈ ಮಕ್ಕಳ ಹಬ್ಬವನ್ನು ಗಿನ್ನೆಸ್ ದಾಖಲೆ ಮಾಡುವತ್ತ ದಾಪುಗಾಲು ಇಡಲಾಗಿದೆ ಎಂದರು.
ಪ್ರತಿಯೊಂದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸಧ್ಯದಲ್ಲಿಯೇ ರಾಜ್ಯ ಮಟ್ಟದಲ್ಲಿ ಬೃಹತ್ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗುವುದು. ಅಲ್ಲಿ ಕೂಡಾ ಅತ್ಯುತ್ತಮವಾದ ನಗದು ಬಹುಮಾನವನ್ನು ಸಂಸ್ಥೆ ನೀಡಲಿದೆ ಎಂದರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಡಿಡಿಪಿಐ ಆರ್.ಎಸ್. ಬುರುಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ, ಮೃಗಾಲಯ ಆರ್‌ಎಫ್‌ಒ ಸ್ನೇಹಾ ಕೊಪ್ಪಳ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳಾರಿ, ವಿಷಯ ಪರಿವೀಕ್ಷಕಿ ಗೀತಾ ಕುಲಕರ್ಣಿ, ಮುಖಂಡರಾದ ಅಶೋಕ ಮಂದಾಲಿ, ಉಮರ್ ಫಾರೂಕ ಹುಬ್ಬಳ್ಳಿ, ನಗರಸಭೆಯ ಸದಸ್ಯ ಬರ್ಕತ್ ಅಲಿ ಮುಲ್ಲಾ, ಮುನ್ನಾ ರೇಷ್ಮೆ, ಪ್ರಭು ಬುರಬುರೆ, ರವೀಂದ್ರ ಮೂಲಿಮನಿ, ಏಷ್ಯಾನೆಟ್ ಸುವರ್ಣ ನ್ಯೂಸ್‌ನ ವರದಿಗಾರ ಗಿರೀಶ ಕಮ್ಮಾರ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ, ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಚಿತ್ರಕಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕಿರೇಸೂರ ನಿರೂಪಿಸಿ, ವಂದಿಸಿದರು. ವಿನೂತನ ಕಲ್ಪನೆ: ಸಚಿವರ ಶ್ಲಾಘನೆ...
ಮಕ್ಕಳ ಚಿತ್ರಕಲಾ ಸ್ಪರ್ಧೆಗಳು ಎಂದರೆ ನಾಲ್ಕು ಗೋಡೆಗಳ ಮಧ್ಯೆ, ಅಥವಾ ತರಗತಿಯಲ್ಲಿ ಎನ್ನುವ ನಮ್ಮೆಲ್ಲರ ಕಲ್ಪನೆಯನ್ನು ಕನ್ನಡಪ್ರಭ ಸಂಸ್ಥೆ ಬದಲಾಯಿಸಿ, ಪರಿಸರದ ಮಧ್ಯದಲ್ಲಿ, ಮೃಗಾಲಯದ ಸುಂದರ ಮತ್ತು ಆಹ್ಲಾದಕರ ಸ್ಥಳದಲ್ಲಿ ಕುಳಿತು ಮಕ್ಕಳು ಚಿತ್ರ ಬಿಡಿಸುವ ಹೊಸ ಕಲ್ಪನೆಯನ್ನು ನಾಡಿಗೆ ಪರಿಚಯಿಸಲಾಗಿದೆ. ಇದನ್ನು ಮುಂಬರುವ ದಿನಗಳಲ್ಲಿ ಎಲ್ಲರೂ ಅನುಕರಿಸಿದರೂ ಆಶ್ಚರ್ಯವಿಲ್ಲ. ಕನ್ನಡಪ್ರಭ ಸಿಬ್ಬಂದಿಯ ಈ ವಿನೂತನ ಪ್ರಯತ್ನವನ್ನು ನಾನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.