ವಿಜಯನಗರ ಜಿಲ್ಲೆಯಲ್ಲಿ ಮಕ್ಕಳಿಂದ ಬಣ್ಣದ ಚಿತ್ತಾರ

KannadaprabhaNewsNetwork |  
Published : Dec 01, 2025, 02:15 AM IST
ಸ | Kannada Prabha

ಸಾರಾಂಶ

ಸಭಾಂಗಣದಲ್ಲಿ ನೋಂದಣಿ ಮಾಡಿಸಿದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರೊಂದಿಗೆ ಆಗಮಿಸಿದ್ದರು.

ಹೊಸಪೇಟೆ: ಶಾಲಾ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮೈಗೂಡಿಸಲು ನಗರದ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ನಾಡಿನ ಸಾಕ್ಷಿಪ್ರಜ್ಞೆಯಂತೆ ಕಾರ್ಯ ನಿರ್ವಹಿಸುತ್ತಿರುವ ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜಂಟಿಯಾಗಿ ಮಕ್ಕಳ ದಿನಾಚರಣೆ ನಿಮಿತ್ತ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಜಯನಗರ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಕುಂಚದಲ್ಲಿ ಕಲೆಯನ್ನು ಅರಳಿಸಿದರು.

ಸಭಾಂಗಣದಲ್ಲಿ ನೋಂದಣಿ ಮಾಡಿಸಿದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರೊಂದಿಗೆ ಆಗಮಿಸಿದ್ದರು.

ಬೆಳಗ್ಗೆಯಿಂದಲೇ ಆರಂಭಗೊಂಡ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು, ವನ್ಯಜೀವಿ ಹಾಗೂ ಮಾನವ ಸಂಘರ್ಷ, ವನ್ಯಜೀವಿಗಳ ಸಂರಕ್ಷಣೆ, ವಾಯು ಮಾಲಿನ್ಯ ಜಾಗೃತಿ ಮತ್ತು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಕುರಿತ ಕಲ್ಪನೆಯನ್ನು ಅರಳಿಸಿದರು. ಸುಮಾರು ಎರಡು ತಾಸು ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಶಾಲೆಗಳ 500ಕ್ಕೂ ಅಧಿಕ ಮಕ್ಕಳು ಬಣ್ಣದ ಚಿತ್ತಾರ ಅನಾವರಣಗೊಳಿಸಿದರು.

ಗೆಲುವು ಮುಖ್ಯವಲ್ಲ; ಭಾಗವಹಿಸುವಿಕೆ ಮುಖ್ಯ:

ಬಳಿಕ ನಡೆದ ಬಹುಮಾನ ವಿತರಣೆ ಸಮಾರಂಭಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದ ವಿಜಯನಗರ ಎಸ್ಪಿ ಎಸ್‌. ಜಾಹ್ನವಿ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲತೆ, ಕುಶಲತೆ ಬೆಳೆಸಬೇಕಿದೆ. ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಉತ್ತಮ ಕಾರ್ಯ ಮಾಡಿದೆ. ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜನೆ ಮಾಡಿ ವೇದಿಕೆ ಕಲ್ಪಿಸಿದೆ. ಈ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕಿದೆ. ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯವಾಗಿದೆ. ಪೊಲೀಸ್‌ ಇಲಾಖೆಯಿಂದಲೂ ಇಂತಹ ಚಿತ್ರಕಲಾ ಸ್ಪರ್ಧೆ ಆಯೋಜನೆ ಮಾಡಿದಾಗ ನೀವೆಲ್ಲರೂ ಭಾಗವಹಿಸುವಬೇಕು. ಇಂತಹ ಕಾರ್ಯವನ್ನು ಮುಂದಿನ ದಿನಗಳಲ್ಲಿ ನಾವು ಹಮ್ಮಿಕೊಳ್ಳುತ್ತೇವೆ. ಶಾಲಾ, ಕಾಲೇಜು ಸುತ್ತಮುತ್ತ ಗಾಂಜಾ, ಮಾದಕದ್ರವ್ಯ ಮಾರಾಟ ಮಾಡುವುದು, ಕಿಡಿಗೇಡಿಗಳು ಕಂಡುಬಂದರೆ ಪೊಲೀಸರಿಗೆ ತಿಳಿಸಬೇಕು. ಮಕ್ಕಳ ಸಹಾಯವಾಣಿ, ಪೊಲೀಸ್‌ ಹೆಲ್ಪ್‌ಲೈನ್‌ ಸಂಖ್ಯೆ ಬಗ್ಗೆ ತಿಳಿದುಕೊಳ್ಳಬೇಕು. ಎಲ್ಲರೂ ಕೂಡ ಮೊಬೈಲ್‌ಗಳಿಂದ ದೂರ ಇದ್ದು, ಓದಿನ ಕಡೆಗೆ ಗಮನಹರಿಸಬೇಕು. ಜಿಲ್ಲೆಯ ಪೊಲೀಸ್‌ ಇಲಾಖೆ ಸದಾ ನಿಮ್ಮ ಜೊತೆಗಿರಲಿದೆ. ನಿಮಗೆ ಸಮಸ್ಯೆ ಉಂಟಾದರೆ, ಪೊಲೀಸ್‌ ಹೆಲ್ಪ್‌ಲೈನ್‌ ನಂಬರ್‌ಗೆ ಕರೆ ಮಾಡಬಹುದು ಎಂದರು.

ಹುಡಾ ಅಧ್ಯಕ್ಷ ಎಚ್‌ಎನ್‌ಎಫ್‌ ಇಮಾಮ್‌ ನಿಯಾಜಿ ಮಾತನಾಡಿ, ಮಕ್ಕಳು ಚಿತ್ರಗಳ ಮೂಲಕ ವನ್ಯಜೀವಿ ಸಂರಕ್ಷಣೆ, ಪರಿಸರ ಕಾಳಜಿ ತೋರ್ಪಡಿಸಿದ್ದಾರೆ. ಇಂತಹ ಕೆಲಸಗಳಿಂದ ಉತ್ತಮ ಸಮಾಜವನ್ನು ಭವಿಷ್ಯದಲ್ಲಿ ಕಟ್ಟಲು ಅನುಕೂಲ ಆಗಲಿದೆ ಎಂದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ್‌ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಮಾಲಿನ್ಯ ರಹಿತ ಜೀವನ ನಡೆಸಬೇಕು. ಹಾಗಾಗಿ ವಾಯು ಮಾಲಿನ್ಯ ಮತ್ತು ಪರಿಸರ ಮಾಲಿನ್ಯದ ಬಗ್ಗೆ ಅರಿವು ಹೊಂದಬೇಕು ಎಂದರು.

ಸಮಾಜ ಸೇವಕಿ ರಶ್ಮಿ ರಾಜಶೇಖರ ಹಿಟ್ನಾಳ ಮಾತನಾಡಿ, ಮಕ್ಕಳು ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಚಿತ್ರಕಲೆ ಮೂಲಕ ಅನಾವರಣಗೊಳಿಸಿದ್ದಾರೆ. ಯಶಸ್ಸು ಎಂದರೆ ಉನ್ನತ ಶಿಖರಕ್ಕೆ ಏರುವುದಲ್ಲ, ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆಯೇ ಒಂದು ಯಶಸ್ಸು ಎಂದರು.

ಪ್ರೌಢಶಾಲಾ ಮುಖ್ಯೋಪಾಧ್ಯಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಅಕ್ಕಮಹಾದೇವಿ ಮಾತನಾಡಿ, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸೃಜನಾತ್ಮಕತೆ ಹಾಗೂ ಕೌಶಲ್ಯ ಬಹುಮುಖ್ಯ. ಹಾಗಾಗಿ ಶಾಲಾ ಹಂತದಲ್ಲಿ ಬೆಳೆಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕಿದೆ. ಮಕ್ಕಳು ಕೂಡ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದರು.

ಡಿಡಿಪಿಐ ವೆಂಕಟೇಶ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ, ಜಿಲ್ಲೆಯ ವಿವಿಧ ಶಾಲೆಗಳಿಂದ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿರುವುದು ನಿಜಕ್ಕೂ ಖುಷಿ ವಿಚಾರ. ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವತಿಯಿಂದ ಇಂತಹ ಕಾರ್ಯಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಆರ್‌ಟಿಒ ಇನ್ಸ್‌ಪೆಕ್ಟರ್‌ ಪ್ರದೀಪ್‌ ಹಡಗಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಮಿಷನ್‌ ಸಂಯೋಜಕಿ ವಿದ್ಯಾಬಾಯಿ, ರೈತಸಂಘದ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ, ಅಲೆಮಾರಿ ಸಮಾಜದ ಮುಖಂಡ ಸಣ್ಣಮಾರೆಪ್ಪ ಮತ್ತಿತರರಿದ್ದರು.

ಕನ್ನಡಪ್ರಭ ಜಿಲ್ಲಾ ವರದಿಗಾರ ಕೃಷ್ಣ ಲಮಾಣಿ, ಹೂವಿನಹಡಗಲಿ ವರದಿಗಾರ ಚಂದ್ರು ಕೊಂಚಿಗೇರಿ, ಛಾಯಾಚಿತ್ರಗಾರ ಎಲ್‌. ಸುರೇಶ್‌, ಶಿವು ನಾಯ್ಕ ನಿರ್ವಹಿಸಿದರು.

ವಿಜಯನಗರ ಪೊಲೀಸ್‌ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ, ಪಾಪಿನಾಯಕನಹಳ್ಳಿಯ ಅಕ್ಷಯ ಸ್ಮಾರಕ ಪ್ರೌಢಶಾಲೆ ಮತ್ತು ಚಿತ್ತವಾಡ್ಗಿಯ ಆಕಾಶ ಇಂಟರ್‌ ನ್ಯಾಶನಲ್‌ ಪಬ್ಲಿಕ್‌ ಶಾಲೆ ಸಹಯೋಗದೊಂದಿಗೆ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು. ಚಿತ್ರಕಲಾ ಶಿಕ್ಷಕರಾದ ಲೀಲಾಮೂರ್ತಿ ಟಿ., ದೀಪಾ ಟಿ., ರಂಜಾನ್‌ ಬಿ.ಪಿ., ನಾಗೇಂದ್ರ ಸಿ., ಶಿವಕುಮಾರ, ಪುಷ್ಪಲತಾ, ಗವಿಸಿದ್ದಪ್ಪ, ಎ. ಸಿದ್ದಪ್ಪ ಮತ್ತು ಭಾರತಿ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಲ್‌. ರೆಡ್ಡಿ ನಾಯ್ಕ, ಶಿವಪ್ಪ ನಾಯಕ ದೊರೆ, ಶಿಕ್ಷಣ ತಜ್ಞ ಹಾಗೂ ನಿವೃತ್ತ ದೈಹಿಕ ಶಿಕ್ಷಕ ಗುರುಲಿಂಗಯ್ಯ ಗಡಾದ, ಕಲಾವಿದರಾದ ವಾಮದೇವ ಅಂಗಡಿ ಮತ್ತು ಸಮರ್ಥ ಅಂಗಡಿ, ಯುವ ಮುಖಂಡರಾದ ಪ್ರಫುಲ್‌ ಪಾಟೀಲ್‌, ನಾಗರಾಜ ಬೋವಿ ಅವರನ್ನು ಸನ್ಮಾನಿಸಲಾಯಿತು. ವಿಜಯನಗರ ಕಾಲೇಜ್‌ನ ಎನ್‌ಸಿಸಿ ಕೆಡೆಟ್‌ಗಳು, ಚಿತ್ತವಾಡ್ಗಿ ಠಾಣೆ ಪೊಲೀಸರು ಸಹಕರಿಸಿದರು.

8ನೇ ತರಗತಿ: ಪ್ರಥಮ ಬಹುಮಾನ: ಜಿ. ಸೋಮೇಶ್ವರ, ಸರ್ಕಾರಿ ಶಾಲೆ ಕೊಂಡನಾಯಕನಹಳ್ಳಿ, ಹೊಸಪೇಟೆ. ದ್ವಿತೀಯ ಬಹುಮಾನ: ಶಾಲಿನಿ, ಬ್ಲಾಸಂ ಶಾಲೆ, ಹೊಸಪೇಟೆ. ತೃತೀಯ ಬಹುಮಾನ: ಎಂ. ಕುಬೇರ, ಮೊರಾರ್ಜಿ ದೇಸಾಯಿ ಶಾಲೆ, ಕನ್ನನಾಯಕನಹಳ್ಳಿ ಹರಪನಹಳ್ಳಿ.

9ನೇ ತರಗತಿ: ಪ್ರಥಮ ಬಹುಮಾನ: ಅನುಷ್ಕಾ ಮೊರಾರ್ಜಿ ದೇಸಾಯಿ ಶಾಲೆ, ಕನ್ನನಾಯಕನಹಳ್ಳಿ ಹರಪನಹಳ್ಳಿ. ದ್ವಿತೀಯ ಬಹುಮಾನ: ಎಲ್‌. ಸಾಯಿಲಕ್ಷ್ಮೀ ಮೊರಾರ್ಜಿ ದೇಸಾಯಿ ಶಾಲೆ, ಕಾಳಗಟ್ಟ ಹೊಸಪೇಟೆ. ತೃತೀಯ ಬಹುಮಾನ: ಹೊಸಪೇಟೆ. ಆರ್‌. ಮಾನಸಾ ಸರ್ಕಾರಿ ಪ್ರೌಢಶಾಲೆ ಎನ್‌.ಸಿ. ಕಾಲೋನಿ, ಹೊಸಪೇಟೆ.

10ನೇ ತರಗತಿ: ಪ್ರಥಮ ಬಹುಮಾನ: ಸಂಕಲ್ಪ, ಜೆಎಸ್‌ಎಸ್‌ ಪಬ್ಲಿಕ್‌ ಸ್ಕೂಲ್‌ ಹೂವಿನಹಡಗಲಿ. ದ್ವಿತೀಯ ಬಹುಮಾನ: ಬಿಂದುಶ್ರೀ ಮೊರಾರ್ಜಿ ದೇಸಾಯಿ ಶಾಲೆ, ಕಾಳಗಟ್ಟ ಹೊಸಪೇಟೆ. ತೃತೀಯ ಬಹುಮಾನ: ಸಿಂಚನಾ ಸರ್ಕಾರಿ ಶಾಲೆ ಅನಂತಶಯನಗುಡಿ, ಹೊಸಪೇಟೆ.

ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಪ್ರಶಸ್ತಿ:

ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಮೂರು ವಿಭಾಗದ (8, 9, 10ನೇ ತರಗತಿ) ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ 5 ಸಾವಿರ ನಗದು, ದ್ವಿತೀಯ ಬಹುಮಾನ 3 ಸಾವಿರ ನಗದು, ತೃತೀಯ ಬಹುಮಾನ 2 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌