ಕನ್ನಡಪ್ರಭ ವಾರ್ತೆ ಬೆಂಗಳೂರು
ಅಲ್ಲದೆ, ಸುಗ್ರೀವಾಜ್ಞೆ ಮೂಲಕ ಜಾರಿಯಾಗಲಿರುವ ತಿದ್ದುಪಡಿ ಕಾನೂನು ಅನ್ವಯ 2024ರ ಫೆಬ್ರವರಿ 28ರ ಒಳಗಾಗಿ ರಾಜ್ಯದಲ್ಲಿನ ಎಲ್ಲಾ ‘ವಾಣಿಜ್ಯ ಕೈಗಾರಿಕೆ, ವ್ಯಾಪಾರ ಸಂಸ್ಥೆ, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನೋರಂಜನಾ ಕೇಂದ್ರ ಮತ್ತು ಹೋಟೆಲ್’ ಮುಂತಾದವುಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು. ಉಳಿದ ಶೇ.40ರಷ್ಟು ಮಾತ್ರ ಇತರೆ ಭಾಷೆ ಇರಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಕನ್ನಡ ನಾಮಫಲಕಗಳ ಕುರಿತು ರಾಜ್ಯಾದ್ಯಂತ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಜತೆ ಗೃಹ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು.ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2018ರ ಮಾರ್ಚ್ ತಿಂಗಳಲ್ಲಿ ನಮ್ಮ ಸರ್ಕಾರವು ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಹಾಗೂ ಶೇ.40 ರಷ್ಟು ಇತರೆ ಭಾಷೆ ಇರಬೇಕು ಎಂದು ಸುತ್ತೋಲೆ ಹೊರಡಿಸಿತ್ತು. ಬಳಿಕ 2023ರ ಮಾರ್ಚ್ ತಿಂಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ 2022ರ ಸೆಕ್ಷನ್ 17 (6) ರ ಪ್ರಕಾರ ನಾಮಫಲಕದ ಅರ್ಧಭಾಗವು (ಶೇ.50) ಕನ್ನಡದಲ್ಲಿ ಇರತಕ್ಕದ್ದು ಎಂದು ತಿಳಿಸಿದೆ. ಇದೀಗ ನಮ್ಮ ಸರ್ಕಾರವು 2018ರ ಸುತ್ತೋಲೆಯಂತೆಯೇ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ 2022ರ ಸೆಕ್ಷನ್-17 (6)ಕ್ಕೆ ತಿದ್ದುಪಡಿ ತಂದಿದ್ದು, 2024ರ ಫೆಬ್ರವರಿ 28 ರೊಳಗೆ ಅನುಷ್ಠಾನಗೊಳಿಸಲು ವಾಣಿಜ್ಯ ಮಳಿಗೆಗಳಿಗೆ ಗಡುವು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.ಜಾಹೀರಾತು, ಸೂಚನಾ ಫಲಕದಲ್ಲೂ ಕನ್ನಡಕ್ಕೆ ಆದ್ಯತೆ:
ಇನ್ನು ಈ ಕಾಯ್ದೆಯ ನಿಯಮ 17(8) ರಲ್ಲಿ ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾದ ಜಾಹೀರಾತು ಮತ್ತು ಸೂಚನೆಗಳನ್ನು ಪ್ರದರ್ಶಿಸುವ ಎಲ್ಲ ಫಲಕಗಳಲ್ಲಿನ ವಿಷಯಗಳ ನಿಗದಿತ ಶೇಕಡಾವಾರು ಪ್ರಮಾಣವು ಕನ್ನಡ ಭಾಷೆಯಲ್ಲಿರಬೇಕು. ಜಾಹೀರಾತುಗಳ ವರ್ಗೀಕರಣ ಮತ್ತು ಕನ್ನಡದಲ್ಲಿ ಪ್ರದರ್ಶಿಸಬೇಕಾದ ಜಾಹೀರಾತು ವಿಷಯಗಳ ಶೇಕಡಾವಾರು ಪ್ರಮಾಣವು ರಾಜ್ಯ ಸರ್ಕಾರದಿಂದ ಸೂಚಿಸಿದಂತೆ ಇರಬೇಕು ಎಂಬ ನಿಯಮ ಇದೆ. ಈ ಅಧಿನಿಯಮಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ಸಿಕ್ಕಿದ್ದು ರಾಜ್ಯಪಾಲರೂ ಅಂಗೀಕಾರ ಸೂಚಿಸಿದ್ದಾರೆ. ಆದರೆ, ಈ ಬಗ್ಗೆ ನಿಯಮಗಳನ್ನು ರೂಪಿಸುವ ಕೆಲಸ ಆಗಿಲ್ಲ. ಇದೀಗ ಸುಗ್ರೀವಾಜ್ಞೆ ಹೊರಡಿಸಿ ತಕ್ಷಣ ನಿಯಮಗಳನ್ನು ರೂಪಿಸಿ ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.ರಾಜ್ಯಾದ್ಯಂತ ಅನ್ವಯ:ಈ ನಾಮಫಲಕ, ಜಾಹೀರಾತು ಹಾಗೂ ಸೂಚನಾಫಲಕದ ನಿಯಮ ರಾಜ್ಯಾದ್ಯಂತ ಅನ್ವಯ ಆಗಲಿದೆ. ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನಿಗಾ ವಹಿಸಲಿವೆ. ಫೆ.28ರ ಬಳಿಕವೂ ಕನ್ನಡ ಬಳಕೆ ನಿಯಮಾನುಸಾರ ಆಗದಿದ್ದರೆ ಅಂತಹವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.ಸುಗ್ರೀವಾಜ್ಞೆ ಯಾಕೆ?ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ದೊರೆತು ರಾಜ್ಯಪಾಲರ ಅಂಗೀಕಾರ ಸಿಕ್ಕಿದ್ದರೂ ನಿಯಮಾವಳಿ ರೂಪಿಸಿ ಜಾರಿಯಾಗಿಲ್ಲ. ಇದೀಗ ಸೆಕ್ಷನ್ 17 (6)ಕ್ಕೆ ತಿದ್ದುಪಡಿ ಮಾಡಬೇಕಾದರೆ ಉಭಯ ಸದನಗಳಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಬೇಕು. ಮೂಲಗಳ ಪ್ರಕಾರ, ಮುಂದಿನ ಜಂಟಿ ಅಧಿವೇಶನವು 2024ರ ಫೆಬ್ರುವರಿ ಎರಡನೇ ವಾರದಲ್ಲಿ ನಡೆಯಲಿದೆ. ಹೋರಾಟ ಕಾವು ಪಡೆದಿರುವುದರಿಂದ ಅಲ್ಲಿಯವರೆಗೂ ನಾಮಫಲಕಗಳಲ್ಲಿ ಕನ್ನಡ ಬಳಕೆ ನಿಯಮ ಅನುಷ್ಠಾನಕ್ಕೆ ಕಾಯಲು ಸಾಧ್ಯವಿಲ್ಲ. ಹೀಗಾಗಿ ಸುಗ್ರೀವಾಜ್ಞೆ ತರಲು ನಿರ್ಧರಿಸಲಾಗಿದೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡವೇ ಆಡಳಿತ ಭಾಷೆ. ನಾನು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿದ್ದವನು. ನಾನು ಸಹಿ ಸಹಿತ ಕಡತಗಳ ಮೇಲೆ ಯಾವುದೇ ಸೂಚನೆಯನ್ನೂ ಕನ್ನಡದಲ್ಲೇ ಬರೆಯುತ್ತೇನೆ. ನಮ್ಮ ಸರ್ಕಾರ ಕನ್ನಡಕ್ಕಾಗಿ ಬದ್ಧವಾಗಿದೆ.- ಸಿದ್ದರಾಮಯ್ಯ, ಮುಖ್ಯಮಂತ್ರಿಕಾನೂನು ಕೈಗೆತ್ತಿಕೊಂಡರೆ ಸಹಿಸಲ್ಲ: ಸಿಎಂ
2022ರ ಮಾ.3ರಂದು ಹೈಕೋರ್ಟ್ ಪ್ರತಿಭಟನೆ, ಧರಣಿಗಳನ್ನು ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾತ್ರ ಮಾಡಬೇಕು. ಇದನ್ನು ಸರ್ಕಾರ ಖಾತರಿಪಡಿಸಬೇಕು ಎಂದು ಸ್ಪಷ್ಟ ಆದೇಶ ನೀಡಿದೆ. ಹೀಗಿದ್ದರೂ ರಾಜ್ಯದ ಹಿತದೃಷ್ಟಿಯಿಂದ ಶಾಂತಿಯುತ ಪ್ರತಿಭಟನೆ ಮಾಡಿದರೆ ನಾವು ವಿರೋಧಿಸುವುದಿಲ್ಲ. ಆದರೆ ಕಾನೂನು ಕೈಗೆ ತೆಗೆದುಕೊಂಡರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಂಘಟನೆಯಿರಲಿ, ವ್ಯಕ್ತಿಗಳಿರಲಿ, ಖಾಸಗಿ ಸಂಸ್ಥೆಗಳಿರಲಿ ಯಾರಾದರೂ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡುತ್ತೇನೆ.
ಕನ್ನಡ ಸಂಘಟನೆಗಳನ್ನು ಒಗ್ಗೂಡಿಸಿದ ಫಲಕ ಹೋರಾಟಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯ ಆಂಗ್ಲ ಫಲಕಗಳ ವಿರುದ್ಧ ಸಮರ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ 53 ಕಾರ್ಯಕರ್ತರನ್ನು ಬುಧವಾರ ರಾತ್ರಿಯಿಡೀ ನಾಟಕೀಯ ಬೆಳವಣಿಗೆ ಬಳಿಕ ಶಾಂತಿಭಂಗ ತಂದ ಆರೋಪದಡಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ಆಂಗ್ಲ ನಾಮಫಲಕ ಹಾಕಿದ್ದ ಕೆಲ ಅಂಗಡಿ ಹಾಗೂ ಮಾಲ್‌ಗಳಲ್ಲಿ ನಾಮಫಲಕ ಕಿತ್ತು ಹಾಕಿದ್ದಲ್ಲದೆ ಕಲ್ಲು ತೂರಾಟ ಸಹ ನಡೆಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ವಶಕ್ಕೆ ಪಡೆದಿದ್ದ ನಾರಾಯಣಗೌಡ ಹಾಗೂ ಕರವೇ ಕಾರ್ಯಕರ್ತರನ್ನು ಯಲಹಂಕ ಪೊಲೀಸ್ ತರಬೇತಿ ಕೇಂದ್ರ ಮೈದಾನದಲ್ಲಿ ಪೊಲೀಸರು ನಿರ್ಬಂಧನೆಯಲ್ಲಿ ಇಟ್ಟಿದ್ದರು. ಆಗ ಕನ್ನಡ ಸೇವೆ ಮಾಡಿದ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ನಾರಾಯಣಗೌಡ ಅವರು, ತಮ್ಮ ಮನವಿ ಸ್ವೀಕರಿಸಲು ಸ್ಥಳಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮಿಸುವಂತೆ ಒತ್ತಾಯಿಸಿ ತಡ ರಾತ್ರಿವರೆಗೆ ಧರಣಿ ಕುಳಿತರು.ಪ್ರತಿಭಟನಾನಿರತರ ಸಮಾಧಾನಪಡಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಯತ್ನಿಸಿದರೂ ಫಲ ನೀಡಲಿಲ್ಲ. ಅಂತಿಮವಾಗಿ ಶಾಂತಿ ಭಂಗ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿ ಗುರುವಾರ ನಸುಕಿನಲ್ಲಿ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧನಕ್ಕೊಳಪಡಿಸಿದರು. ಆನಂತರ ನ್ಯಾಯಾಧೀಶರ ಮನೆಯಲ್ಲಿ ಅವರ ಮುಂದೆ ಪೊಲೀಸರು ಹಾಜರುಪಡಿಸಿದರು.ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯವು ಆದೇಶಿಸಿದ ಹಿನ್ನೆಲೆಯಲ್ಲಿ ನಾರಾಯಣಗೌಡ ಸೇರಿದಂತೆ ಕರವೇ ಕಾರ್ಯಕರ್ತರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಪೊಲೀಸರು ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂಗಡಿಗಳು, ಮಾಲ್‌ಗಳು ಹಾಗೂ ಹೋಟೆಲ್‌ಗಳು ಸೇರಿದಂತೆ ವಾಣಿಜ್ಯೋದ್ಯಮ ವಲಯದ ಕಟ್ಟಡಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಒತ್ತಾಯಿಸಿ ಬುಧವಾರ ಕರವೇ ಪ್ರತಿಭಟನೆ ನಡೆಸಿತು. ಈ ವೇಳೆ ಆಂಗ್ಲ ನಾಮಫಲಕ ಹಾಕಿದ್ದ ಕಾರಣಕ್ಕೆ ಕೆಲ ಅಂಗಡಿಗಳು ಹಾಗೂ ಮಾಲ್‌ಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದರು. ಕೆಲವು ಆಂಗ್ಲ ನಾಮಫಲಕಗಳನ್ನು ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ದೇವನಹಳ್ಳಿ ಸಮೀಪದ ಸಾದಹಳ್ಳಿ ಗೇಟ್‌ನಿಂದ ಜಾಥಾ ಆಯೋಜಿಸಿ ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗದ ರಸ್ತೆಯಲ್ಲಿ ಸಂಚಾರಕ್ಕೂ ಅಡ್ಡಿಪಡಿಸಿದ್ದ ಆರೋಪ ಕರವೇ ಮೇಲೆ ಕೇಳಿ ಬಂದಿತು. ಈ ಪ್ರತಿಭಟನೆ ವೇಳೆ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ ಆರೋಪದ ಮೇರೆಗೆ ಚಿಕ್ಕಜಾಲ, ಬಾಣಸವಾಡಿ, ಆಡುಗೋಡಿ, ಕಬ್ಬನ್ ಪಾರ್ಕ್, ಕಾಟನ್‌ಪೇಟೆ ಹಾಗೂ ಹೈಗ್ರೌಂಡ್ಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ 10 ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದರು. ಈ ಪ್ರಕರಣಗಳ ಸಂಬಂಧ ಕರವೇ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.ಕನ್ನಡೇತರ ನಾಮಫಲಕ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಲ್ಲದೆ ಕೆಐಎ ರಸ್ತೆಯಲ್ಲಿ ಜಾಥಾ ಆಯೋಜಿಸಿ ಸಂಚಾರಕ್ಕೆ ಅಡ್ಡಿಪಡಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಆರೋಪದ ಮೇರೆಗೆ ನಾರಾಯಣಗೌಡ ವಿರುದ್ಧ ಚಿಕ್ಕಜಾಲ ಠಾಣೆಯಲ್ಲಿ ಎರಡು ಎಫ್ಐಆರ್‌ಗಳನ್ನು ಪೊಲೀಸರು ದಾಖಲಿಸಿದರು. ಈ ಪ್ರಕರಣಗಳಲ್ಲಿ ನಾರಾಯಣಗೌಡ ಸೇರಿದಂತೆ ಪ್ರಮುಖ 29 ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.ಎಲ್ಲರಿಗೂ ಕಾನೂನು ಪ್ರಕಾರ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಆದರೆ ಪ್ರತಿಭಟನೆ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದರೆ ಸಹಿಸುವುದಿಲ್ಲ. ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಿದ ಕಾರಣಕ್ಕೆ ಕರವೇ ಸಂಘಟನೆ ಮೇಲೆ ಪ್ರಕರಣ ದಾಖಲಿಸಿ ನಾರಾಯಣಗೌಡ ಸೇರಿದಂತೆ 53 ಮಂದಿಯನ್ನು ಬಂಧಿಸಲಾಗಿದೆ.