ಮಾಗಡಿ: ನವೆಂಬರ್ ತಿಂಗಳ ಪೂರ್ಣ ಕೆಂಪೇಗೌಡ ಉತ್ಸವ ನಡೆಸಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಕೆಂಪೇಗೌಡರ ಸ್ಮಾರಕ ಅಭಿವೃದ್ಧಿಗೆ ₹ 103 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮುಂದಿನ ತಿಂಗಳು ಕಾಮಗಾರಿ ಆರಂಭವಾಗಲಿದ್ದು ರಾಷ್ಟ್ರೀಯ ಹಬ್ಬಗಳನ್ನು ಇನ್ನು ಮುಂದೆ ಕೆಂಪೇಗೌಡ ಬೈಲೂರು ರಂಗಮಂದಿರದಲ್ಲಿ ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಹಬ್ಬಗಳಲ್ಲಿ ಬೆಳಗ್ಗೆ ವೇದಿಕೆ ಕಾರ್ಯಕ್ರಮ ನಡೆಸಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಕುವೆಂಪು ರಚಿಸಿದ ನಾಡಗೀತೆಗೆ 100 ವರ್ಷ ತುಂಬಿದ್ದು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಅಂದಾಜು 1200 ಆಸನಗಳುಳ್ಳ ಕುವೆಂಪು ಸಭಾಂಗಣ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಮುಂದಿನ ರಾಜ್ಯೋತ್ಸವಕ್ಕೆ ಹಾಗೂ ಸಾರ್ವಜನಿಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಲೋಕಾರ್ಪಣೆಗೊಳಿಸಲಾಗುವುದು. ತಾಲೂಕಿನಲ್ಲಿ ಕನ್ನಡ ಭವನ ಮತ್ತು ಪತ್ರಿಕಾ ಭವನಕ್ಕೆ ನಿವೇಶನ ಗುರುತಿಸಲಾಗಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶರತ್ ಕುಮಾರ್, ಪುರಸಭಾ ಅಧ್ಯಕ್ಷೆ ಶಿವರುದ್ರಮ್ಮ, ಉಪಾಧ್ಯಕ್ಷ ರಿಯಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ವಿಜಯಲಕ್ಷ್ಮಿ, ಭಾಗ್ಯಮ್ಮ, ರಹಮತ್, ರಾಮಣ್ಣ, ತಾಪಂ ಇಒ ಜೈಪಾಲ್, ಬಿಇಒ ಚಂದ್ರಶೇಖರ್, ಕಸಾಪ ಅಧ್ಯಕ್ಷ ತಿ.ನಾ. ಪದ್ಮನಾಭ ಹಾಗೂ ಡಾ.ಮುರಳೀಧರ್, ತಾಲೂಕು ಗ್ಯಾರಂಟಿ ಅಧ್ಯಕ್ಷ ಕಲ್ಕೆರೆ ಶಿವಣ್ಣ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ತಗೀಕುಪ್ಪೆ ರಾಮು ಭಾಗವಹಿಸಿದ್ದರು.