ಕನ್ನಡ ಕೇವಲ ಒಂದು ಭಾಷೆಯಲ್ಲ. ಅದೊಂದು ಅಸ್ಮಿತೆ: ತಹಸೀಲ್ದಾರ್ ಜಿ.ಆದರ್ಶ

KannadaprabhaNewsNetwork |  
Published : Nov 02, 2025, 02:30 AM IST
1ಕೆಎಂಎನ್ ಡಿ31,32 | Kannada Prabha

ಸಾರಾಂಶ

ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಜಾನಪದ ಕಲಾವಿದೆ ತೊಳಲಿ ಗ್ರಾಮದ ಚೈತ್ರ ಶಿವನಾಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 10 ಮಂದಿ ಸಾಧಕರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಎರಡು ಸಾವಿರ ವರ್ಷ ಇತಿಹಾಸ ಹೊಂದಿರುವ ಕನ್ನಡ ಭಾಷೆ ಕೇವಲ ಒಂದು ಭಾಷೆಯಲ್ಲ. ಅದೊಂದು ಅಸ್ಮಿತೆ. ಕನ್ನಡದ ಹಿರಿಮೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಪರಿಚಯಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ತಹಸೀಲ್ದಾರ್ ಜಿ.ಆದರ್ಶ ಹೇಳಿದರು.

ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಲೆ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ವಾಸ್ತು ಶಿಲ್ಪಕ್ಕೆ ಖ್ಯಾತಿಯಾಗಿರುವ ಕರ್ನಾಟಕದ ಇತಿಹಾಸದಲ್ಲಿ ಮೌರ್‍ಯರು, ಕದಂಬರು, ಗಂಗರು, ಚಾಲುಕ್ಯರು, ವಿಜಯನಗರದ ಅರಸರು ಸೇರಿದಂತೆ ಅನೇಕ ರಾಜಮನೆತನದವರು ಆಳ್ವಿಕೆ ನಡೆಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.

ಬಸವಣ್ಣ, ಪುರಂದರ ದಾಸರು, ಕನಕದಾಸರು, ರನ್ನ, ಪೊನ್ನ, ಪಂಪ, ಕುವೆಂಪು ಸೇರಿ ಅನೇಕ ಮಹಾನ್ ಕವಿಗಳು, ಸಾಹಿತಿಗಳು ರಚಿಸಿರುವ ಸಾಹಿತ್ಯದಿಂದಾಗಿ ಕನ್ನಡ ಭಾಷೆಗೆ ೮ ಜ್ಞಾನಪೀಠ ಪ್ರಶಸ್ತಿಗಳು ಹಾಗೂ ಶಾಸ್ತ್ರೀಯ ಸ್ಥಾನಮಾನವೂ ಸಿಕ್ಕಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ಸಾಹಿತಿ ವ.ನಂ.ಶಿವರಾಮು, ದೇಶದಲ್ಲಿ ಹಿಂದಿ ಖಂಡಿತವಾಗಿಯೂ ರಾಷ್ಟ್ರಭಾಷೆಯಲ್ಲ. ಒಕ್ಕೂಟದ ವ್ಯವಸ್ಥೆಯಲ್ಲಿ ಕರ್ನಾಟಕವೂ ಒಂದು ರಾಷ್ಟ್ರವಿದ್ದಂತೆ, ಕನ್ನಡ ಭಾಷೆಯೂ ಒಂದು ರಾಷ್ಟ್ರ ಭಾಷೆಯಿದ್ದಂತೆ. ಕನ್ನಡ ಕರುಳಿನ ಭಾಷೆಯಾಗಿ ಉಳಿದೆಲ್ಲಾ ಭಾಷೆಗಳನ್ನು ಸೋದರತ್ವ ಭಾವನೆಯಿಂದ ಪ್ರೀತಿಸುವ ಮೂಲಕ ನಮ್ಮ ಮಾತೃ ಭಾಷಾ ಪ್ರೇಮವನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಜಾನಪದ ಕಲಾವಿದೆ ತೊಳಲಿ ಗ್ರಾಮದ ಚೈತ್ರ ಶಿವನಾಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 10 ಮಂದಿ ಸಾಧಕರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಕನ್ನಡಾಂಬೆ ಭಾವಚಿತ್ರವನ್ನು ಅಲಂಕರಿಸಿದ ತೆರೆದ ವಾಹನದಲ್ಲಿರಿಸಿ, ತಾಲೂಕು ಆಡಳಿತ ಸೌಧದಿಂದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಲಾಯಿತು. ಪಟ್ಟಣದ ವಿವಿಧ ಶಾಲಾ ಮಕ್ಕಳು ನಾಡು, ನುಡಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷಾ, ಉಪಾಧ್ಯಕ್ಷೆ ವಸಂತಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ತಾಪಂ ಇಒ ಬಿ.ಕೆ.ಸತೀಶ್, ಡಿವೈಎಸ್ ಪಿ ಬಿ.ಚಲುವರಾಜು, ಬಿಇಒ ಲೋಕೇಶ್, ಬಿಆರ್‌ಪಿ ಕೆ.ರವೀಶ್, ಸಿಡಿಪಿಒ ಕೃಷ್ಣಮೂರ್ತಿ, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಅಗ್ನಿಶಾಮಕ ಠಾಣಾಧಿಕಾರಿ ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ಸಿ.ಆರ್.ಚಂದ್ರಶೇಖರ್, ಬಗರ್‌ಹುಕುಂ ಸಾಗುವಳಿ ಸಮಿತಿ ಸದಸ್ಯ ಎಂ.ನಾಗರಾಜಯ್ಯ ಸೇರಿದಂತೆ ಹಲವರು ಇದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ