ಅಟೋ ಚಾಲಕರು ಹಾಗು ಮಾಲೀಕರ ಸಂಘದ ವತಿಯಿಂದ 19ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಿತು.
ಸೋಮವಾರಪೇಟೆ : ಅಟೋ ಚಾಲಕರು ಹಾಗು ಮಾಲೀಕರ ಸಂಘದ ವತಿಯಿಂದ 19ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಿತು.ಬೆಳಿಗ್ಗೆ ಸಂಘದ ಅಧ್ಯಕ್ಷ ಎಸ್.ವಿ. ಸಂಪತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಪಟ್ಟಣದಲ್ಲಿರುವ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಹಾಗೂ ಆಟೋ ಮೆರವಣಿಗೆ ನಡೆಯಿತು.
ಖಾಸಗಿ ಬಸ್ ನಿಲ್ದಾಣದಲ್ಲಿ ಅಳವಡಿಸಿರುವ ವೇದಿಕೆಯಲ್ಲಿ ನಡೆದ ಸಮಾರಂಭವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಕನ್ನಡ ಭಾಷಾ ಬೆಳವಣಿಗೆಗೆ ಕವಿಗಳು ಮತ್ತು ಸಾಹಿತಿಗಳ ಕೊಡುಗೆ ಅಪಾರ. ಅವರನ್ನು ಶ್ರಮ ತ್ಯಾಗವನ್ನು ನಾವು ಮನನ ಮಾಡಿಕೊಳ್ಳಬೇಕು. ಭಾಷೆಯನ್ನು ಕಲಿಯುವ ಮಾತನಾಡುವ ಮೂಲಕ ಭಾಷೆ ಬೆಳವಣಿಗೆಗೆ ಕೊಡುಗೆ ನೀಡಬೇಕು. ಮಾತೃಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಮತ್ತು ಇಂಗ್ಲೀಷ್, ಹಿಂದಿ ಸೇರಿದಂತೆ ಇತರ ಭಾಷೆಗಳನ್ನು ಕಲಿಯಲು ಪ್ರೋತ್ಸಾಹ ನೀಡಬೇಕು ಎಂದು ಆಶಿಸಿದರು.ಕರವೇ(ಪ್ರವೀಣ್‌ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ ಕನ್ನಡ ನೆಲ, ಜಲ, ನಾಡು, ನುಡಿಗೆ ಧಕ್ಕೆಯಾದಾಗ ಕನ್ನಡ ಹೋರಾಟ ಮಾಡಲೇಬೇಕು ಎಂದು ಹೇಳಿದರು.ವೇದಿಕೆಯಲ್ಲಿ ಹಿಂದೂ ಮಲೆಯಾಳ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ. ವಿಜಯ, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಮಹೇಶ್, ಜೇಸಿ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಪ್ರಮುಖರಾದ ಬಿ.ಬಿ. ಭಾರತೀಶ್, ವಸಂತ್ ಅಚಾರಿ, ಯೋಗೇಂದ್ರ, ಕೆ.ಈ. ಸುಲೈಮಾನ್, ರೋಹಿತ್ ಪೂಜಾರಿ, ಪಾಣತ್ತಲೆ ಶಶಿಧರ್, ಕಾರ್ಯದರ್ಶಿ ಪಿ.ಎಂ.ಕವನ್ ಇದ್ದರು.
ಶಾಲಾ ಮಕ್ಕಳಿಂದ ಕುಣಿಯೋಣ ಬಾರ ನೃತ್ಯ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನದಾನ ನಡೆಯಿತು. ಚಿತ್ರ : ಸೋಮವಾರಪೇಟೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನಡೆದ ರಾಜ್ಯೋತ್ಸವ ಸಮಾರಂಭವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಉದ್ಘಾಟಿಸಿದರು. ಸಂಪತ್, ವಿಜಯ್, ಮಹೇಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.