-ಮಾಜಿ ಶಾಸಕ ಕಳಲೆ ಕೇಶವಮೂರ್ತಿ
ಕನ್ನಡಪ್ರಭ ವಾರ್ತೆ ನಂಜನಗೂಡುಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿರುವುದು, ಕನ್ನಡ ಭಾಷೆಯ ಹಿರಿಮೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಹೇಳಿದರು.ನಗರದ ಹಂಡುವಿನಹಳ್ಳಿ ಬಡಾವಣೆ ನಿವಾಸಿಗಳು ಹಾಗೂ ಕನ್ನಡ ಸ್ನೇಹ ಬಳಗದ ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕನ್ನಡ ಭಾಷೆಗೆ ತನ್ನದೇ ಆದ ವೈಶಿಷ್ಟ ಪೂರ್ಣವಾದ ಸಂಸ್ಕೃತಿ, ಪರಂಪರೆ ಹಾಗೂ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜೊತೆಗೆ ಕರ್ನಾಟಕ ರಾಜ್ಯ ಪ್ರಾಕೃತಿಕವಾಗಿ ಸಾಂಸ್ಕೃತಿಕವಾಗಿ ಸಾಹಿತ್ಯಿಕವಾಗಿ ಅತ್ಯಂತ ಸಂಪತ್ಭರಿತವಾಗಿದೆ. ಕನ್ನಡ ಭಾಷೆ ಮತ್ತು ಲಿಪಿ ಅತ್ಯಂತ ಸರಳವಾಗಿದ್ದು, ಅನ್ಯ ಭಾಷಿಗರೂ ಕೂಡ ಸುಲಭವಾಗಿ ಕಲಿಯುವ ಭಾಷೆಯಾಗಿದೆ ಎಂದರು.ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಸಲುವಾಗಿ ಮನೆಯಲ್ಲಿ ನಿಮ್ಮ ಮಕ್ಕಳಿಗೆ ಕಡ್ಡಾಯವಾಗಿ ಕನ್ನಡ ಕಲಿಸಿ ಜೊತೆಗೆ ಅನ್ಯ ಭಾಷಿಗರಿಗೂ ಕನ್ನಡ ಕಲಿಸುವ ಮೂಲಕ ಕನ್ನಡವನ್ನು ಬಳಸಿ ಉಳಿಸಿ ಬೆಳೆಸಿ ಎಂದು ಕರೆ ನೀಡಿದರು.ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಮಾತನಾಡಿ, ಹಲವರ ಹೋರಾಟದ ಫಲವಾಗಿ ಕನ್ನಡ ಭಾಷೆ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ನೆಲಗಳು ಸದಾ ಚಿಂತನಶೀಲವಾಗಿದ್ದು, ಕನ್ನಡಿಗರು ಕಲೆ, ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಗೈವ ಮೂಲಕ ಕನ್ನಡ ಭಾಷೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದ್ದಾರೆ. ಅಲ್ಲದೆ ವಿದೇಶಿ ನೆಲದಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ಭಾಷೆ, ಸಂಸ್ಕೃತಿಯನ್ನು ಬಿತ್ತರಿಸುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.ಪಟ್ಟಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ರವೀಂದ್ರ ಮಾತನಾಡಿ, ಅನ್ಯ ಭಾಷೆಯ ವ್ಯಾಮೋಹಕ್ಕೆ ಬಲಿಯಾಗಿ ನಾವು ಯಾವ ಭಾಷೆಯಲ್ಲೂ ಕೂಡ ಪರಿಪೂರ್ಣತೆ ಪಡೆಯದ ಸ್ಥಿತಿಗೆ ತಲುಪಿದ್ದೇವೆ. ಜೊತೆಗೆ ಭಾಷೆಯನ್ನು ಸಮರ್ಥವಾಗಿ ಕಲಿಯದ ಕಾರಣದಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಅಪರಿಚಿತ ಭಾವ ಎಲ್ಲರಲ್ಲೂ ಕಾಡುತ್ತಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಸಲುವಾಗಿ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಯುಪಿಎಸ್ಸಿ ಪರೀಕ್ಷೆಗಳನ್ನು ಬರೆಯಬೇಕು. ಆ ಮೂಲಕ ಕನ್ನಡ ಉಳಿಸಿ ಬೆಳೆಸುವ ಕೆಲಸವಾಗಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಗದ ಅಧ್ಯಕ್ಷ ಪ್ರಕಾಶ್, ಡಿ.ಜಿ. ರಾಜೇಂದ್ರ, ಮಂಜುನಾಥ, ವಸಂತ ಸುಲಾಕೆ, ವೀಣಾ, ಅಶ್ವಿನಿ, ವೀರಭದ್ರಾಚಾರ್, ಬಸವರಾಜು, ಶಿವಕುಮಾರ್ ಸೇರಿದಂತೆ ಕನ್ನಡ ಸ್ನೇಹ ಬಳಗದ ಎಲ್ಲಾ ಸದಸ್ಯರು ಹಾಗೂ ನಿವಾಸಿಗಳು ಭಾಗವಹಿಸಿದ್ದರು.