- ಶಾಸಕ ಕೆ. ಹರೀಶ್ ಗೌಡ ಆಶಯ
- ಕ್ಯಾಲೆಂಡರ್ ಬಿಡುಗಡೆ, ಗಾನ-ನಂದನ ಲಾಂಛನ ಅನಾವರಣ, ಸಂಗೀತ ಸಂಜೆಕನ್ನಡಪ್ರಭ ವಾರ್ತೆ ಮೈಸೂರು
ಸಾಹಿತ್ಯದ ಗತವೈಭವ ಮರುಕಳಿಸಬೇಕು ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಆಶಯ ವ್ಯಕ್ತಪಡಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಭೂಮಿಗಿರಿ ನಾರಾಯಣಪ್ಪ ಪ್ರತಿಷ್ಠಾನದ ವತಿಯಿಂದ ಸೋಮವಾರ ವಿಜಯನಗರ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಹಿಂದೆ ಸಾಹಿತ್ಯದ ಕಾರ್ಯಕ್ರಮಗಳು ಮೇಳೈಸುತ್ತಿದ್ದವು. ಸಿಪಿಕೆ ಅವರಾದಿಯಾಗಿ ಹಲವಾರು ಗಣ್ಯಮಾನ್ಯರು ಮೈಸೂರಿನಲ್ಲಿ ಭಾಗವಹಿಸುತ್ತಿದ್ದರು. ಮುಂದೆ ಕೂಡ ಅದೇ ರೀತಿ ಆಗಬೇಕು. ಇದಕ್ಕಾಗಿಯೇ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದಿನ ದಿನಗಳಲ್ಲಿ ಏರ್ಪಡಿಸಲಾಗುತ್ತಿದೆ ಎಂದರು.
ಶ್ರೀರಾಮ ಪಿತೃವಾಕ್ಯ ಪರಿಪಾಲಕ ಎಂದು ಹೇಳುವ ನಾವು ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದೇವೆ. ಇದು ತಪ್ಪಬೇಕು. ಭೂಮಿಗಿರಿ ನಾರಾಯಣಪ್ಪ ಅವರಂಥವರನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಆ ಮೂಲಕ ಸಮಾಜದ ಪರಿವರ್ತನೆಗೆ ಕಾರಣಕರ್ತರಾಗಬೇಕು ಎಂದು ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಾಧಕರಾದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ತಾಂಡವಪುರ ಎಂಐಟಿ ಪ್ರಾಂಶುಪಾಲ ಡಾ.ವೈ.ಟಿ. ಕೃಷ್ಣೇಗೌಡ, ಲೇಖಕಿ ಬಿ.ಕೆ. ಮೀನಾಕ್ಷಿ ಅವರಿಗೆ ಲಯನ್ ಮಾಜಿ ಜಿಲ್ಲಾ ರಾಜ್ಯಪಾಲ ನಾಗರಾಜ ವಿ. ಭೈರಿ ಅವರು ಭೂಮಿಗಿರಿ ನಾರಾಯಣಪ್ಪ ಪ್ರಶಸ್ತಿ ಪ್ರದಾನ ಮಾಡಿದರು.
ಭೂಮಿಗಿರಿ ಪ್ರತಿಷ್ಠಾನದ ಅಧ್ಯಕ್ಷ ಎನ್. ಬೆಟ್ಟೇಗೌಡ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಎನ್. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಚೀಲೂರು ಚಂದ್ರಶೇಖರ್ ನಿರೂಪಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಡಾ.ಬಿ.ಎನ್. ರವೀಶ್ ಪರಿಚಯಿಸಿದರು. ಶ್ರೀಲತಾ ಮನೋಹರ್ ಪ್ರಾರ್ಥಿಸಿದರು.