ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಗ್ರಾಮಗಳಲ್ಲಿ ರೈತರು ಕಾಟಮರಾಯನ ಪೂಜೆ ನೆರವೇರಿಸಿ ಸಾಂಪ್ರದಾಯಿಕ ಸಂಕ್ರಾಂತಿ ಉತ್ಸವಕ್ಕೆ ಚಾಲನೆ ನೀಡಿದರು. ಊರಿನ ದೇವಾಲಯಗಳಲ್ಲೂ ವಿಶೇಷ ಪೂಜಾ ಕಾರ್‍ಯಕ್ರಮಗಳನ್ನು ನೆರವೇರಿಸಿದರು. ಸಂಜೆ ರೈತರು ಹೊಲಗಳ ಸಮೀಪ ಹಾಗೂ ಗ್ರಾಮಗಳಲ್ಲಿ ಎತ್ತುಗಳಿಗೆ ಕಿಚ್ಚು ಹಾಯಿಸುವ ಮೂಲಕ ಗಮನ ಸೆಳೆದರು. ಎತ್ತುಗಳಿಗೆ ಬಣ್ಣದ ಕಾಗದ, ಬಲೂನು, ಹೂಗಳಿಂದ ಅಲಂಕರಿಸಿ, ಅರಿಶಿಣ-ಕುಂಕುಮ ಇಟ್ಟು ಪೂಜೆ ನೆರವೇರಿಸಲಾಯಿತು. ಹಲವು ಬಸವಣ್ಣ ದೇಗುಲಗಳಲ್ಲಿ ಜೋಡೆತ್ತುಗಳ ಪೂಜೆ ಆಯೋಜನೆಗೊಂಡಿತ್ತು.
ತಾಲೂಕಿನ ಕುಂಟನಹಳ್ಳಿ, ನಾಗಸಂದ್ರ, ತೂಬಗೆರೆ, ಸಾಸಲು, ದೊಡ್ಡಬೆಳವಂಗಲ, ತಿಪ್ಪಾಪುರ ಸೇರಿದಂತೆ ವಿವಿಧೆಡೆ ಎತ್ತುಗಳಿಗೆ ಕಿಚ್ಚಾಯಿಸುವ ಕಾರ್‍ಯಕ್ರಮ ನಡೆಯಿತು.ಹಳ್ಳಿಗಳಲ್ಲಿ ಸುಗ್ಗಿ ಗ್ರಾಮೀಣ ಹಬ್ಬ
ಈ ವೇಳೆ ಮಾತನಾಡಿದ ಗ್ರಾಮದ ಮುಖಂಡರು, ಸಂಕ್ರಾಂತಿ ಗ್ರಾಮೀಣ ಜನರ ಸಂಸ್ಕೃತಿಯ ಬಹುದೊಡ್ಡ ಉತ್ಸವವಾಗಿದೆ. ಸುಗ್ಗಿ ಹಬ್ಬವೆಂದೇ ಹೆಸರಾದ ಈ ಹಬ್ಬದಲ್ಲಿ ವರ್ಷ ಪೂರ್ತಿ ರೈತ ಹೊಲಗದ್ದೆಗಳಲ್ಲಿ ಅವಿರತ ಪರಿಶ್ರಮ ವಹಿಸಿ ಬೆಳೆದ ಬೆಳೆಯ ರಾಶಿ ಹಾಕಿ ಪೂಜಿಸಲಾಗುತ್ತದೆ. ಕಬ್ಬಿನ ಮಂಟಪ ಕಟ್ಟಿ ಬದುಕು ಕಬ್ಬಿನಷ್ಟೇ ಸಿಹಿಯಾಗಿರಲಿ ಎಂದು ಹರಸಲಾಗುತ್ತದೆ. ರೈತ ಸಂವೇದನೆಯಎಲ್ಲ ವಸ್ತುಗಳನ್ನೂ ಪೂಜನೀಯ ಮನೋಭಾವದಲ್ಲಿ ನೋಡುವುದು ವಿಶೇಷ ಎಂದರು.