ಕನ್ನಡಪ್ರಭ ವಾರ್ತೆ ಪಾಲಬಾವಿ
ರಾಯಬಾಗ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾಲೂಕಿನ ಗಡಿಭಾಗದ ಕಟ್ಟ ಕಡೆಯ ಹಳ್ಳಿ ಹಂದಿಗುಂದ ಗ್ರಾಮದಲ್ಲಿ 2024ರ ಜನವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದ್ದು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಆರ್.ಎಂ. ಪಾಟೀಲ ನೇತೃತ್ವದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಡಿ.16ರಂದು ಹಂದಿಗುಂದ ಗ್ರಾಮದ ಶ್ರೀ ಸಿದ್ದೇಶ್ವರ ವಿರಕ್ತ ಮಠಕ್ಕೆ ಭೇಟಿ ನೀಡಿ ಶ್ರೀಮಠದ ಕರ್ತೃ ಗದ್ದುಗೆ ಹಾಗೂ ವಿರಕ್ತಮಠದ ಪೀಠಾಧಿಪಥಿ ಶ್ರೀ ಶಿವಾನಂದ ಮಹಾಸ್ವಾಮಿಗಳ ದರ್ಶನ ಪಡೆದು ತಾಲೂಕು ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು ಚರ್ಚಿಸಿದರು.ಶ್ರೀಮಠದ ಭವ್ಯ ಮಂಟಪದಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವುದು ಬಹುತೇಕ ಖಚಿತವಾಗಿದ್ದು, ಹಂದಿಗುಂದ ಗ್ರಾಮದಲ್ಲಿ ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಇದು ಎರಡನೆಯ ಬಾರಿಗೆ ಮತ್ತು ರಾಯಬಾಗ ತಾಲೂಕು ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದು ಹಂದಿಗುಂದ ಗ್ರಾಮದಲ್ಲಿ ಎಂಬುದು ಹೆಗ್ಗಳಿಕೆಯಾಗಿದೆ. ರಾಯಬಾಗ ತಾಲೂಕು 7ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶರಣ ವಿಚಾರವಾಹಿನಿಯ ಸಂಸ್ಥಾಪಕ ಅಧ್ಯಕ್ಷ ಐ.ಆರ್. ಮಠಪತಿ ಸರ್ವಾನುಮತದಿಂದ ಆಯ್ಕೆಯಾಗಿದ್ದು, ತಾಲೂಕು ಕನ್ನಡ ಸಾಹಿತ್ಯ ಪ್ರೇಮಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದೆ.
ಡಿ.31 ರಂದು ಬೆಳಗ್ಗೆ 11 ಗಂಟೆಗೆ ಹಂದಿಗುಂದ ಗ್ರಾಮದ ಶ್ರೀ ಸಿದ್ದೇಶ್ವರ ವಿರಕ್ತಮಠದಲ್ಲಿ ಶಿವಾನಂದ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕನ್ನಡ ಕುಸುಮಗಳ, ಕನ್ನಡ ಅಭಿಮಾನಿಗಳ, ಗ್ರಾಮದ ಗುರು -ಹಿರಿಯರ ಸಮ್ಮುಖದಲ್ಲಿ ರಾಯಬಾಗ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂತಿಮ ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ತಾಲೂಕು ಕದನ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಎಂ. ಪಾಟೀಲ ತಿಳಿಸಿದರು.ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಎಂ. ಪಾಟೀಲ, ಗೌರವ ಕಾರ್ಯದರ್ಶಿ ಸಾಹಿತಿ ಎಸ್.ಬಿ. ಕ್ಯಾಸ್ತಿ, ಟಿ.ಎಸ್. ವಂಟಗೋಡಿ, ಡಾ. ರತ್ನಾ ಬಾಳಪ್ಪನವರ, ಕವಯಿತ್ರಿ ಲತಾ ಹುದ್ದಾರ, ಎಂ.ಎಸ್. ಬಳವಾಡ, ಸಂತೋಷ ತಮ್ಮದಡ್ಡಿ, ಟಿ.ಜಿ. ದಾಸಪ್ಪನವರ, ಹನುಮಂತ ಅಥಣಿ, ಷಣ್ಮುಖ ತೇರದಾಳ ಇತರರು ಇದ್ದರು.