ಕಾರ್ಕಳ: ಕನ್ನಡ ಶಾಲೆಗಳು ನಮ್ಮ ಸಾಹಿತ್ಯ, ಕಲೆ, ಜನಪದ ಹಾಗೂ ಹಬ್ಬ-ಹರಿದಿನಗಳ ಕುರಿತು ಅರಿವು ಮೂಡಿಸುವ ಮಹತ್ವದ ಕೇಂದ್ರಗಳಾಗಿವೆ. ಇದರಿಂದ ಮಕ್ಕಳಲ್ಲಿ ತಮ್ಮ ನಾಡಿನ ಬಗ್ಗೆ ಹೆಮ್ಮೆ ಬೆಳೆಯುತ್ತದೆ. ಇಂತಹ ಮಹಾನ್ ಕಾರ್‍ಯಕ್ಕೆ ಪೋಷಕರು ಕೈಜೋಡಿಸಬೇಕು ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಮಾತೃಭಾಷೆಯಲ್ಲಿ ಅಭಿವ್ಯಕ್ತಿ ಸುಲಭವಾಗಿರುವುದರಿಂದ ಮಕ್ಕಳು ಆತ್ಮವಿಶ್ವಾಸದಿಂದ ಮಾತನಾಡಲು, ಬರೆಯಲು ಹಾಗೂ ಚಿಂತಿಸಲು ಸಾಧ್ಯವಾಗುತ್ತದೆ. ಕನ್ನಡ ಶಾಲೆಗಳು ನಮ್ಮ ಭಾಷಾ ಸಂರಕ್ಷಣೆ ಮತ್ತು ಸಮಾಜ ನಿರ್ಮಾಣದ ಬಲವಾದ ಅಡಿಗಲ್ಲುಗಳು. ಇವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಸರ್ಕಾರಿ ಶಾಲೆಗಳಲ್ಲಿ ಆಯೋಜಿಸಿದರೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸರ್ಕಾರಿ ಶಾಲೆಗಳ ಕುರಿತು ಅರಿವು ಪಡೆದು ಕನ್ನಡ ಭಾಷೆಯ ಜೊತೆಗೆ ಶಾಲೆಗಳೂ ಉಳಿಯಲು ಸಾಧ್ಯವಾಗುತ್ತದೆ. ಪರಿಷತ್ತು ಈ ಕುರಿತು ಮನಸ್ಸು ಮಾಡಲಿ ಎಂದರು.ಮಕ್ಕಳಲ್ಲಿ ಓದುವ ಅಭ್ಯಾಸ ಕುಂಠಿತ: ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಗೊಪಾಲ್ ಶೆಟ್ಟಿ ಮಾತನಾಡಿ, ಡಿಜಿಟಲ್ ಯುಗದಲ್ಲಿ ಮಕ್ಕಳಲ್ಲಿ ಓದುವ ಅಭ್ಯಾಸ ಕುಂಠಿತವಾಗುತ್ತಿರುವುದು ಕಳವಳಕಾರಿ. ಆದರೆ ಇಂತಹ ಸಮ್ಮೇಳನಗಳು ವಿದ್ಯಾರ್ಥಿಗಳಲ್ಲಿ ಓದು, ಬರಹ ಮತ್ತು ಚಿಂತನೆಯ ಸಂಸ್ಕೃತಿಯನ್ನು ಬೆಳೆಸುವ ಉತ್ತಮ ವೇದಿಕೆಗಳಾಗಿವೆ. ಕವಿತೆ ವಾಚನ, ಕಥೆ ಹೇಳಿಕೆ, ಪ್ರಬಂಧ ಹಾಗೂ ಭಾಷಣಗಳ ಮೂಲಕ ಪ್ರತಿಭೆ ತೋರಲು ಇದು ಸುವರ್ಣಾವಕಾಶ ಎಂದು ಹೇಳಿದರು. ಸಾಹಿತ್ಯವು ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದ್ದು, ಸಮಾಜದ ನೋವು-ನಲಿವಿನ ಬಗ್ಗೆ ಸಂವೇದನಾಶೀಲತೆಯನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಪಾಠಪುಸ್ತಕಗಳಿಗಷ್ಟೇ ಸೀಮಿತವಾಗದೆ ವಿವಿಧ ಸಾಹಿತ್ಯ ಕೃತಿಗಳನ್ನು ಓದಬೇಕು. ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಪೋಷಕರ ಜೊತೆಗೆ ಶಿಕ್ಷಕರ ಪಾತ್ರವೂ ಮುಖ್ಯವಾಗಿದೆ. ಕೆಲವೆಡೆ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುಮತಿ ಪಡೆದು ಆಂಗ್ಲಭಾಷೆಯಲ್ಲಿ ಬೋಧನೆ ನಡೆಯುತ್ತಿರುವುದು ಅನ್ಯಾಯ. ಸರ್ಕಾರ ಸಮಗ್ರ ಕ್ರಮ ಕೈಗೊಂಡಾಗ ಮಾತ್ರ ಸರ್ಕಾರಿ ಕನ್ನಡ ಶಾಲೆಗಳು ಉಳಿಯಲು ಸಾಧ್ಯ ಎಂದರು.ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿ ಸಲ್ಲಿಸಿ ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಅರಸಮ್ಮಕಾನು ಕ್ಷೇತ್ರದ ಅರ್ಚಕ ನಾಗರಾಜ ಬಾಯರಿ, ಅಮಾಸೆಬೈಲು ಸಬ್ ಇನ್‌ಸ್ಪೆಕ್ಟರ್ ಅಶೋಕ್, ಉದ್ಯಮಿ ಹೆಬ್ರಿ ಯೋಗೀಶ್ ಭಟ್, ಹೆಬ್ರಿ ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರಾಜ್ ಶೆಟ್ಟಿ, ಮಡಾಮಕ್ಕಿ ಅನಂತ ತಂತ್ರಿ, ಕಾರ್ಕಳ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ, ಬೆಳ್ವೆ ಸಹಕಾರಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ, ಉದ್ಯಮಿ ಮಡಾಮಕ್ಕಿ ಶಶಿಧರ ಶೆಟ್ಟಿ, ಧರ್ಮಸ್ಥಳ ಯೋಜನಾಧಿಕಾರಿ ಲೀಲಾವತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹೆಬ್ರಿಯ ವಿದ್ಯಾಧರ ಹೆಗ್ಡೆ, ಮುನಿಯಾಲಿನ ಸುಧಾಕರ ಕೆ.ಜಿ., ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್‍ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕೋಶಾಧಿಕಾರಿ ಮನೋಹರ್ ಪಿ., ರಜನಿ ಗೋಪಾಲ ಶೆಟ್ಟಿ ಶೇಡಿಮನೆ, ಉದ್ಯಮಿ ಗಣೇಶ ಹಾಂಡ ಶಿವಪುರ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಅರಸಮ್ಮಕಾನು, ಕಾರ್‍ಯಾಧ್ಯಕ್ಷ ಶಂಕರ ಪೂಜಾರಿ, ಸಂಚಾಲಕ ರಾಧಾಕೃಷ್ಣ ಕ್ರಮಧಾರಿ ಸಹಿತ ಜನಪ್ರತಿನಿಧಿಗಳು, ವಿವಿಧ ಗಣ್ಯರು, ಸಾಹಿತಿಗಳು, ಸ್ವಾಗತ ಸಮಿತಿ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಅಧಿಕಾರಿಗಳು ಭಾಗವಹಿಸಿದ್ದರು.ಮುದ್ದೂರು ಶ್ರೀನಿವಾಸ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾಕರ ಶೆಟ್ಟಿ ಅರಸಮ್ಮಕಾನು ಸ್ವಾಗತಿಸಿದರು. ಶಂಕರ ಪೂಜಾರಿ ವಂದಿಸಿದರು. ಶಶಿಧರ ಶೆಟ್ಟಿ, ಗಣೇಶ್, ನವೀನ ಶೆಟ್ಟಿ ಮಡಾಮಕ್ಕಿ ನಿರೂಪಿಸಿದರು.ಪುಸ್ತಕ ಬಿಡುಗಡೆ: ಅರುಣಾ ಹೆಬ್ರಿ ಅವರ ‘ಅರುಣೋದಯ ಕಾಲದಲ್ಲಿ’, ಅರಸಮ್ಮಕಾನು ಸಿಂಚನಾ ಎಸ್. ಶೆಟ್ಟಿ ಅವರ ‘ಹೃದಯ ಸಿಂಚನಾ’ ಕವನ ಸಂಕಲನ ಮತ್ತು ಮಂಜುನಾಥ ಕೆ. ಶಿವಪುರ ಅವರ ‘ಒಲುಮೆ ಗೀತಿಕಾ’ ಭಾವಗೀತೆ ಸಂಕಲನವನ್ನು ಡಾ. ಶೇಡಿಮನೆ ವಿಕ್ರಂ ಶೆಟ್ಟಿ ಬಿಡುಗಡೆ ಮಾಡಿದರು. ದಾನಿಗಳನ್ನು, ಸಮ್ಮೇಳನದ ಪೋಷಕರು, ಸಾಧಕರನ್ನು ಗೌರವಿಸಲಾಯಿತು. ಉಡುಪಿ ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಶೈಕ್ಷಣಿಕ ಉಪನ್ಯಾಸ ನೀಡಿದರು. ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.
ಮಡಾಮಕ್ಕಿ ಗ್ರಾಪಂ ಅಧ್ಯಕ್ಷ ದಯಾನಂದ ಪೂಜಾರಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.ಗೋಷ್ಠಿಗಳು: ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ‘ಶಾಸನ ಮತ್ತು ಜನಪದದಲ್ಲಿ ಹೆಬ್ರಿ ತಾಲೂಕು ಇತಿಹಾಸ’ ಕುರಿತ ಗೋಷ್ಠಿಯಲ್ಲಿ ಸಹಾಯಕ ಪ್ರಾಧ್ಯಾಪಕ ಮಹೇಶ ಶೆಟ್ಟಿ ಅವರು ಹೆಬ್ರಿ ಪ್ರದೇಶದ ಶಾಸನ ಪರಂಪರೆ ಕುರಿತು ಮಾಹಿತಿ ನೀಡಿದರು. ಜನಪದದ ಹಿನ್ನೆಲೆಯಲ್ಲಿನ ಊರುಗಳ ಸ್ಥಳನಾಮಗಳ ವೈಶಿಷ್ಟ್ಯಗಳ ಕುರಿತು ಉಪನ್ಯಾಸಕಿ ಶ್ರೀ ಮುದ್ರಾಡಿ ವಿಚಾರ ಮಂಡನೆ ಮಾಡಿದರು. ಕಾರ್‍ಯಕ್ರಮಕ್ಕೆ ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಸಮನ್ವಯಕಾರರಾಗಿದ್ದರು. ವೀಣಾ ಆರ್. ಭಟ್ ಸ್ವಾಗತಿಸಿ, ಮಹೇಶ ಹೈಕಾಡಿ ನಿರೂಪಣೆ ಮಾಡಿದರು. ವಿದ್ಯಾ ಜನಾರ್ದನ್ ವಂದಿಸಿದರು.ಇನ್ನೊಂದು ಗೋಷ್ಠಿಯಾದ ‘ಕುಂದಗನ್ನಡ’ ಕಾರ್‍ಯಕ್ರಮದಲ್ಲಿ ಭಾಷಾ ವೈಶಿಷ್ಟ್ಯಗಳ ಬಗ್ಗೆ ಕವಿ ಅರುಣಾ ಹೆಬ್ರಿ ಹಾಗೂ ಸುಲತಾ ಗಂಗಾಧರ ಹೆಗ್ಡೆ ಮಾತನಾಡಿದರು. ಕುಂದಗನ್ನಡ ಗಾದೆಗಳ ಕುರಿತು ಡಾ. ಮಾಲತಿ ಜಿ. ಪೈ ಮತ್ತು ನವೀನ್ ಶೆಟ್ಟಿ ಮಡಾಮಕ್ಕಿ ವಿವರಿಸಿದರು. ಕುಂದಗನ್ನಡ ಆಚರಣೆಗಳ ಬಗ್ಗೆ ಶಿಕ್ಷಕ ರಾಜೀವ ಪೂಜಾರಿ ಶೇಡಿಮನೆ ವಿಚಾರ ಮಂಡನೆ ಮಾಡಿದರು. ಮುಖ್ಯ ಶಿಕ್ಷಕ ವಾಸು ಕೆ. ಸೀತಾನದಿ ಸಮನ್ವಯಕಾರರಾಗಿದ್ದರು. ಕೆ. ಬಾಲಚಂದ್ರ ಹೆಬ್ಬಾರ್ ಸ್ವಾಗತಿಸಿ, ಪುಪ್ಪಾವತಿ ಹೆಬ್ರಿ ನಿರೂಪಣೆ ಮಾಡಿ, ಶೋಭಾ ಆರ್. ಕಲ್ಕೂರ್ ವಂದಿಸಿದರು.