ಹಾವೇರಿ:ಎಲ್ಲೆಡೆ ಈಗ ಕೆಪಿಎಸ್ ಶಾಲೆ ಮಾಡಲು ಸರ್ಕಾರ ಮುಂದಾಗಿದೆ. ಹೀಗಾದರೆ ಹಳ್ಳಿಗಳಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ಬರುತ್ತದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದೆ ಶಾಸಕರ ಮಾದರಿ ಶಾಲೆ ಮಾಡಿದ್ದರು. ಈಗ ಅವುಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಅವಲೋಕನ ಮಾಡಬೇಕು. ಕೇರಳದಲ್ಲಿ ಒಂದು ತರಗತಿಗೆ ಒಬ್ಬರು ಶಿಕ್ಷಕರಿದ್ದಾರೆ. ಆದರೆ, ಇಲ್ಲಿ ಶಿಕ್ಷಕರೇ ಇಲ್ಲ. ಹೀಗಾಗಿ, ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬ ಕಾರಣಕ್ಕೆ ಕೆಪಿಎಸ್ ಶಾಲೆ ಮಾಡಲು ಹೊರಟಿದ್ದಾರೆ. ಶಿಕ್ಷಣ ಸಚಿವರಿಗೆ ಇಲಾಖೆಯಲ್ಲಿ ಒಳ್ಳೆಯ ಕೆಲಸ ಮಾಡಬೇಕೆಂಬ ಹುಮ್ಮಸ್ಸಿದೆ. ಆದರೆ, ಅಧಿಕಾರಿಗಳು ಅವರ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಇರುವಷ್ಟು ಭ್ರಷ್ಟಾಚಾರ ಯಾವ ಇಲಾಖೆಯಲ್ಲೂ ಇಲ್ಲ. ಈ ಇಲಾಖೆಯಲ್ಲಿ ಅನೇಕ ಅಯೋಗ್ಯ ಅಧಿಕಾರಿಗಳು ಸೇರಿದ್ದಾರೆ. ಅನಧಿಕೃತ ಶಾಲೆಗಳು ಕಣ್ಮುಂದೆ ನಡೆಯುತ್ತಿದ್ದರೂ ಯಾವ ಕ್ರಮ ಕೈಗೊಳ್ಳುತ್ತಿಲ್ಲ, ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದೆ ಎಂದು ಕಿಡಿಕಾರಿದರು.12 ಅಂಕ ಪಡೆದ ಮಕ್ಕಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಂಟರ್ನಲ್ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಸಲ ಎಸ್‌ಎಸ್‌ಎಲ್‌ಸಿ ಶೇ. 94ರಷ್ಟು ಫಲಿತಾಂಶ ಬಂದಿದೆ. ಈ ರಾಜ್ಯದಲ್ಲಿ ಯಾವತ್ತೂ ಇಂಥ ಫಲಿತಾಂಶ ಬಂದಿಲ್ಲ, ಸರಿಯಾಗಿ ಪರಿಶೀಲನೆ ಮಾಡಿದರೆ ಶೇ. 55ರಷ್ಟೂ ಫಲಿತಾಂಶ ಬರೋದಿಲ್ಲ, ಶೇ. 35ರಷ್ಟು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಏನು ನಿರೀಕ್ಷೆ ಮಾಡಲು ಸಾಧ್ಯವಿದೆ ಎಂದರು.