ಕಂಪ್ಲಿ: ಪಟ್ಟಣದ ಭಾರತ್ ಚಿತ್ರಮಂದಿರ ಬಳಿಯ ದೇವಾಂಗ ಸಮುದಾಯದ ರಾಮಲಿಂಗ ದೇವಸ್ಥಾನದ ಕಂಬವೊಂದರಲ್ಲಿ ನಾಲ್ಕು ಸಾಲಿನ ಕನ್ನಡ ಲಿಪಿಯ, ತೆಲುಗು ಭಾಷೆಯ ಶಾಸನವನ್ನು ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ತಳವಾರ ನರಸಿಂಹ, ಸಾಹಿತಿ ಬಂಗಿ ದೊಡ್ಡ ಮಂಜುನಾಥ ಪತ್ತೆ ಮಾಡಿದ್ದಾರೆ.
ಕಂಪ್ಲಿ ತಾಲೂಕಿನಲ್ಲಿ ಈವರೆಗೆ 22 ಶಾಸನಗಳು ಪತ್ತೆಯಾಗಿವೆ. ಇವುಗಳಲ್ಲಿ ಎರಡು ತೆಲುಗು ಶಾಸನಗಳಿವೆ. ಕಣವಿ ತಿಮ್ಮಲಾಪುರ ಗ್ರಾಮದಲ್ಲಿ ದೊರೆತ ಕೃಷ್ಣದೇವರಾಯನ ತೆಲುಗು ಶಾಸನ ಬಿಟ್ಟರೆ, ಕಂಪ್ಲಿ ರಾಮಲಿಂಗನ ಗುಡಿಯ ಕಂಬದ ನಾಲ್ಕು ಸಾಲಿನ ಶಾಸನವಾಗಿದೆ.
ರಾಮಲಿಂಗ ದೇವಸ್ಥಾನದಲ್ಲಿನ ಗರ್ಭಗುಡಿಯಲ್ಲಿನ ಲಿಂಗವು ಕಲ್ಯಾಣ ಚಾಲುಕ್ಯರ ಕಾಲದ್ದಾಗಿದೆ. ದೇವಸ್ಥಾನ ಕಾಲಕಾಲಕ್ಕೆ ಜೀರ್ಣೋದ್ಧಾರಗೊಂಡಿದೆ. ನಾಲ್ಕು ಕಂಬಗಳು ನಾಲ್ಕು ರೀತಿಯ ಶೈಲಿಯಲ್ಲಿವೆ. ಶಿವನ ದೇವಸ್ಥಾನದಲ್ಲಿ ಶಂಕು, ಚಕ್ರ ವೈಷ್ಣವ ಲಾಂಛನ ಇರುವ ಕಂಬವೊಂದಿದೆ. ಬಹುಶಃ ಎಲ್ಲಿಯೋ ಇದ್ದ ಕಂಬಗಳನ್ನು ತಂದು ದೇವಸ್ಥಾನ ನಿರ್ಮಾಣಕ್ಕೆ ಬಳಸಿರುವ ಸಾಧ್ಯತೆಯಿದೆ. ನಾಲ್ಕರ ಪೈಕಿ ಒಂದು ಕಂಬದಲ್ಲಿ ನಾಲ್ಕು ಸಾಲಿನ ಶಾಸನ ಇರುವುದನ್ನು ಕಾಣಬಹುದು. ಹಿಟ್ನಾಳ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಇತಿಹಾಸ ಉಪನ್ಯಾಸಕ ಕೆ.ಅಂಜಿನಯ್ಯ, ದೇವಾಂಗ ಸಮಾಜದ ಅಧ್ಯಕ್ಷ ಸಪ್ಪರದ ರಾಘವೇಂದ್ರ, ಮಾಜಿ ಕಾರ್ಯದರ್ಶಿ ಬಂಗಿ ದೊಡ್ಡ ಮಂಜುನಾಥ ಇದ್ದರು.