ಆಡಳಿತದಲ್ಲಿ ಪ್ರತಿ ಹಂತದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು: ನಿತೇಶ್‌ ಪಾಟೀಲ್‌

KannadaprabhaNewsNetwork |  
Published : Nov 27, 2025, 01:02 AM IST
15 | Kannada Prabha

ಸಾರಾಂಶ

ದೇಶದ ಬೇರೆ ಬೇರೆ ರಾಜ್ಯಗಳ ಹಾಗೂ ದೇಶಗಳ ಜನರು ಕರ್ನಾಟಕಕ್ಕೆ ಬರುತ್ತಾರೆ. ಅದರಲ್ಲೂ ಬೆಂಗಳೂರು, ಮೈಸೂರಿಗೆ ಬರುತ್ತಾರೆ. ಅವರಿಗೆಲ್ಲಾ ಕನ್ನಡ ಕಲಿಸಬೇಕು. ಆ ಮೂಲಕ ಕನ್ನಡವನ್ನು ಪಸರಿಸುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಆಡಳಿತದಲ್ಲಿ ಪ್ರತಿಹಂತದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ನಗರಪಾಲಿಕೆ ಆಡಳಿತಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ಮಿತೇಶ್‌ ಪಾಟೀಲ್‌ ಹೇಳಿದರು.

ವಾಣಿವಿಲಾಸ ನೀರು ಸರಬರಾಜು ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಶ್ರೀಮಂತ ಭಾಷೆ. ಇದನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದರು.

ದೇಶದ ಬೇರೆ ಬೇರೆ ರಾಜ್ಯಗಳ ಹಾಗೂ ದೇಶಗಳ ಜನರು ಕರ್ನಾಟಕಕ್ಕೆ ಬರುತ್ತಾರೆ. ಅದರಲ್ಲೂ ಬೆಂಗಳೂರು, ಮೈಸೂರಿಗೆ ಬರುತ್ತಾರೆ. ಅವರಿಗೆಲ್ಲಾ ಕನ್ನಡ ಕಲಿಸಬೇಕು. ಆ ಮೂಲಕ ಕನ್ನಡವನ್ನು ಪಸರಿಸುವ ಕೆಲಸ ಮಾಡಬೇಕು ಎಂದರು.

ನಾನು ಐಎಎಸ್‌ ಪರೀಕ್ಷೆಯಲ್ಲಿ ಮೊದಲು ಭೂಗೋಳಶಾಸ್ತ್ರ ತೆಗೆದುಕೊಳ್ಳಲು ಬಯಸಿದೆ. ಆದರೆ ನಂತರ ಕನ್ನಡ ಸಾಹಿತ್ಯ ಆಯ್ಕೆ ಮಾಡಿಕೊಂಡೆ. ಇದರಿಂದಾಗಿ ನನಗೆ ಹೆಚ್ಚು ಅಂಕಗಳು ಬಂದು ಐಎಎಸ್‌ಗೆ ಎರಡನೇ ಪ್ರಯತ್ನದಲ್ಲಿ ಆಯ್ಕೆಯಾಗಲು ಸಾಧ್ಯವಾಯಿತು. ಕನ್ನಡಕ್ಕೆ ಆ ಶಕ್ತಿ ಇದೆ ಎಂಬುದನ್ನು ಅರಿತುಕೊಳ್ಳಿ ಎಂದರು.

ನಗರಪಾಲಿಕೆ ಆಯುಕ್ತ ಶೇಖ್‌ ತನ್ವೀರ್‌ ಆಸಿಫ್‌ ಮಾತನಾಡಿ, ಕನ್ನಡ ಭಾಷೆ ನಮ್ಮೆಲ್ಲರ ಉಸಿರು. ಅದನ್ನು ಮಾತನಾಡುವ ಮೂಲಕವೇ ಅನುಭವಿಸಬೇಕು. ಕನ್ನಡದ ವಿಷಯದಲ್ಲಿ ಇನ್ನೊಬ್ಬರನ್ನು ದೂರುವ ಬದಲು ನಾನೇನು ಮಾಡಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಡಳಿತದಲ್ಲಿ ಕನ್ನಡ ಸಂಪೂರ್ಣವಾಗಿ ಅನುಷ್ಠಾನ ಆಗಬೇಕು ಎಂದರು.

ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮಾತನಾಡಿ, ಪ್ರತಿಯೊಬ್ಬರಿಗೂ ಸಾಂಸ್ಕೃತಿಕ ಮನಸ್ಥಿತಿ ಮುಖ್ಯ ಎಂದ ಅವರು, ಕನ್ನಡಕ್ಕೆ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ ಎಂದರೇ ಅದು ಎಷ್ಟು ಮೌಲ್ಯಯುತವಾದುದು ಎಂದು ತಿಳಿಯಬೇಕು ಎಂದು ಹೇಳಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನಪೀಠಿಕೆ ಬೋಧಿಸಿದ ಹಾಗೂ ರಾಜ್ಯೋತ್ಸವ ಬಗ್ಗೆ ಪ್ರಧಾನ ಭಾಷಣ ಮಾಡಿದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಕನ್ನಡ ಮಾತನಾಡುವ ಜನರನ್ನು ಒಂದು ಮಾಡಲು ಆಲೂರು ವೆಂಕಟರಾಯರು, ದೇಶಪಾಂಡೆ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಕುವೆಂಪು, ಅನಕೃ, ತರಾಸು ಸೇರಿದಂತೆ ಹಲಪಾರು ಮಂದಿ ಹೋರಾಟ ಮಾಡಿದ್ದಾರೆ ಎಂದು ಸ್ಮರಿಸಿದರು.

ಕನ್ನಡಕ್ಕೂ ನಮಗೂ ಇರುವುದು ಕರುಳು ಬಳ್ಳಿಯ ಸಂಬಂಧ. ಏಕೆಂದರೆ ಕನ್ನಡ ಎಂಬುದು ತಾಯಿಯಿಂದ ಮಗುವಿಗೆ ವರ್ಗಾವಣೆಯಾಗುವಂಥದ್ದು. ಕನ್ನಡ ಸಾಫ್ಟ್‌ವೇರ್‌ ನಮ್ಮೊಳಗೆ ಇದೆ. ಅದನ್ನು ಆನ್‌ ಮಾಡಬೇಕು. ಬೇರೆ ಸಾಫ್ಟ್‌ವೇರ್‌ಗಳಾದರೆ ಇನ್‌ಸ್ಟಾಲ್‌ ಮಾಡಬೇಕು. ಹೀಗಾಗಿ ಕನ್ನಡವನ್ನು ಪ್ರೀತಿಯಿಂದ ಕಲಿಸಿ, ಬಳಸಿ, ಬೆಳೆಸಿ ಎಂದು ಅವರು ಕರೆ ನೀಡಿದರು.

ಪಾಲಿಕೆ ಉಪ ಆಯುಕ್ತ ದಾಸೇಗೌಡ ಮಾತನಾಡಿ, ಕನ್ನಡದ ಬಗ್ಗೆ ಕೀಳರಿಮೆ ಬೇಡ. ಜೊತೆಗೆ ಮಡಿವಂತಿಕೆಯೂ ಬೇಡ. ಇತರೆ ಭಾಷೆಗಳ ಪದಗಳನ್ನು ಸೇರಿಸಿಕೊಂಡೆ ಕನ್ನಡವನ್ನು ಬೆಳೆಸಬೇಕು ಎಂದರು.

ಮತ್ತೊರ್ವ ಉಪ ಆಯುಕ್ತ ಜಿ.ಎಸ್‌. ಸೋಮಶೇಖರ್‌ ಮಾತನಾಡಿ, ಕಣಕಣವೂ ಕನ್ನಡಮಯವಾಗಬೇಕು ಎಂದು ಆಶಿಸಿದರು.

ಈ ಬಾರಿಯ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಈ ಮಾಸಾಂತ್ಯ ನಿವೃತ್ತರಾಗುತ್ತಿರುವ ವಲಯ ಆಯುಕ್ತ ವೆಂಕಟರಾಮ್‌ ಅವರನ್ನು ಸನ್ಮಾನಿಸಲಾಯಿತು. ಶಿಲ್ಪಾ, ಮಂಜು ಸೇರಿದಂತೆ ಎಲ್ಲಾ ಅಧಿಕಾರಿಗಳು, ನೌಕರರು ಇದ್ದರು. ಎಇಇ ಟಿ.ಜಿ. ನಾಗರಾಜೇಗೌಡ ಕಾರ್ಯಕ್ರಮ ನಿರೂಪಿಸಿದರು. ಎಇಇ ಎಸ್.ಎಲ್‌. ರವಿಕುಮಾರ್‌ ಸ್ವಾಗತಿಸಿದರು. ಎಇ ಬಿ.ಎಲ್. ಗಿರೀಶ್‌ ವಂದಿಸಿದರು. ರಾಜ್ಯೋತ್ಸವ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ