ಕನ್ನಡ ಸ್ವಾಭಿಮಾನಿ ಬದುಕಿನ ಅಸ್ಮಿತೆ: ಡಾ.ಹಂಸಲೇಖ

KannadaprabhaNewsNetwork |  
Published : Nov 12, 2026, 01:15 AM IST
ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ಹಬ್ಬಕ್ಕೆ ಡಾ.ಹಂಸಲೇಖ ಚಾಲನೆ ನೀಡಿದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಕನ್ನಡ ಎಂಬುದು ಸ್ವಾಭಿಮಾನಿ ಬದುಕಿನ ಅಸ್ಮಿತೆಯಾಗಿದ್ದು, ಕರ್ನಾಟಕದಲ್ಲಿರುವ ಪ್ರತಿಯೊಬ್ಬರೂ ಕನ್ನಡವನ್ನು ಬಳಸುವುದು ಆದ್ಯ ಕರ್ತವ್ಯ ಎಂದು ಹಿರಿಯ ಸಂಗೀತ ನಿರ್ದೇಶಕ ಡಾ.ಹಂಸಲೇಖ ಹೇಳಿದರು

ದೊಡ್ಡಬಳ್ಳಾಪುರ: ಕನ್ನಡ ಎಂಬುದು ಸ್ವಾಭಿಮಾನಿ ಬದುಕಿನ ಅಸ್ಮಿತೆಯಾಗಿದ್ದು, ಕರ್ನಾಟಕದಲ್ಲಿರುವ ಪ್ರತಿಯೊಬ್ಬರೂ ಕನ್ನಡವನ್ನು ಬಳಸುವುದು ಆದ್ಯ ಕರ್ತವ್ಯ ಎಂದು ಹಿರಿಯ ಸಂಗೀತ ನಿರ್ದೇಶಕ ಡಾ.ಹಂಸಲೇಖ ಹೇಳಿದರು.

ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಮತ್ತು ಆರ್‌ಎಲ್‌ಜೆಐಟಿ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡದ ಮೇಲಿನ ಅಭಿಮಾನ ಕೇವಲ ಭಾಷೆಗೆ ಸೀಮಿತವಾಗದೆ ಬದುಕಿನ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿಬಿಂಬಿಸಬೇಕು. ಕಳೆದ 40 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾ ಬಂದಿದ್ದೇನೆ. ಕನ್ನಡವೇ ನನ್ನ ಬದುಕು, ನನ್ನ ಅನ್ನದ ಭಾಷೆ ಕನ್ನಡ ಎಂದರು.

ನಗರಗಳಲ್ಲಿ ಕನ್ನಡದ ಬಗ್ಗೆ ಅಭಿಮಾನವಿದ್ದರೆ, ದೊಡ್ಡಬಳ್ಳಾಪುರದಲ್ಲಿ ಕನ್ನಡದ ಬಗ್ಗೆ ಭಕ್ತಿಯೇ ಇದೆ. ಕನ್ನಡಿಗರ ಹೃದಯ ಬಹಳ ಮೃದು. ದೇಶದಲ್ಲಿ ಅನೇಕ ರಾಜ್ಯಗಳಿದ್ದರೂ, ಕರ್ನಾಟಕ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿದೆ.

ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಿಸಿ ನಮಗೆ ಕೊಡುಗೆಯಾಗಿ ನೀಡಿದ್ದಾರೆ. ಅವರ ದೂರದೃಷ್ಟಿಯ ಫಲವಾಗಿ ಇಂದು ಬೆಂಗಳೂರು ವಿವಿಧ ಕ್ಷೇತ್ರಗಳಲ್ಲಿ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಅದರಲ್ಲೂ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಬೆಂಗಳೂರು ಜಾಗತಿಕವಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಜಾಲಪ್ಪ ಅವರು ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. ಸಮಾಜದ ಕೆಳವರ್ಗದ ಜನರಿಗೂ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಅವರು ಶ್ರಮಿಸಿದ್ದಾರೆ. ವಿದ್ಯೆಯ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂಬ ಕನಸನ್ನು ಅವರು ಕಂಡಿದ್ದರು. ಪ್ರತಿನಿತ್ಯ ದೇಶ ಬೆಳವಣಿಗೆಯತ್ತ ಸಾಗುತ್ತಿದ್ದು, ಶಿಕ್ಷಣವೇ ಅದರ ಪ್ರಮುಖ ಶಕ್ತಿಯಾಗಿದೆ. ಜಾಲಪ್ಪ ಅವರ ವಿಶ್ವವಿದ್ಯಾಲಯಕ್ಕೆ ಥೀಮ್ ಮ್ಯೂಸಿಕ್ ರೆಕಾರ್ಡ್ ಮಾಡಿಕೊಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಕನ್ನಡದ ಅನ್ನ ತಿಂದವರು ಕನ್ನಡಕ್ಕೆ ನಿಷ್ಠರಾಗಿರಿ:

ನಾನು ಕನ್ನಡಿಗ, ನನ್ನ ಅನ್ನ ಕನ್ನಡ. ಕನ್ನಡದ ಕೂಳಿನಲ್ಲಿ ಒಂದು ವಿಶಿಷ್ಟ ಸೊಗಡಿದೆ, ಸ್ವಾಭಿಮಾನದ ರುಚಿಯಿದೆ. ಆ ರುಚಿಯನ್ನು ಸವಿಯುವವರು ಯಾರೇ ಆಗಿರಲಿ, ಕನ್ನಡ ನಾಡು ಮತ್ತು ಭಾಷೆಗೆ ನಿಷ್ಠರಾಗಿರಬೇಕು. ಕನ್ನಡವೆಂದರೆ ಕೇವಲ ಒಂದು ಭಾಷೆಯಲ್ಲ; ಅದು ನಮ್ಮ ಸಂಸ್ಕೃತಿ, ಸ್ವಾಭಿಮಾನ, ಬದುಕು ಮತ್ತು ಅಸ್ಮಿತೆಯಾಗಿದೆ ಎಂದು ಹಂಸಲೇಖ ಹೇಳಿದರು.

ದೇವರಾಜ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ಜಿ ಹನುಮಂತರಾಜು, ಸಂಗೀತ ನಿರ್ದೇಶಕ ಪ್ರಣವ್ ಸತೀಶ್, ಎಸ್‌ಡಿಯುಇಟಿ ಗೌರ್ನಿಂಗ್ ಕೌನ್ಸಿಲ್ ಅಧ್ಯಕ್ಷೆ ತೇಜಸ್ವಿನಿ‌ ಎನ್, ಸದಸ್ಯರಾದ ಜೆ.ಆರ್ ರಾಕೇಶ್, ಸಂಜಯ್ ರಾಜ್, ಎನ್.ಉತ್ತಮ್ ಕುಮಾರ್, ವಿದ್ವತ್‌, ಸಂಜಯ್‌ರಾಜ್‌, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ಮುರಳಿ, ಉಪಪ್ರಾಂಶುಪಾಲ ಡಾ.ಸುನಿಲ್‌ಕುಮಾರ್, ಕಾರ್ಯಕ್ರಮ ಆಯೋಜನಾ ಸಮಿತಿಯ ಡಾ.ಶಂಕರ್, ಪ್ರೊ.ರವಿಕಿರಣ್, ವಿದ್ಯಾನಿಧಿ ಪಿಯು ಕಾಲೇಜು ಪ್ರಾಂಶುಪಾಲ ಟಿ.ಕೆ ಬಾಲಕೃಷ್ಣ ಸೇರಿದಂತೆ ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

ಸಾಂಸ್ಕೃತಿಕ ಹಬ್ಬ:

ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಗ ರಂಜಿನಿ ಸಂಗೀತ ಸಂಜೆ ಕಾರ್ಯಕ್ರಮ ಗಮನ ಸೆಳೆಯಿತು. ನಗರ ದೇವತೆ ಮುತ್ಯಾಲಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಮುತ್ಯಾಲಮ್ಮ ದೇವಾಲಯದಿಂದ ಕಾಲೇಜು ಕ್ಯಾಂಪಸ್‌ವರೆಗೆ 71 ಮೀಟರ್‌ ಉದ್ದದ ನಾಡಧ್ವಜ, ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು.

11ಕೆಡಿಬಿಪಿ1-

ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಹಬ್ಬಕ್ಕೆ ಡಾ.ಹಂಸಲೇಖ ಚಾಲನೆ ನೀಡಿದರು. ದೇವರಾಜ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ ಕೆ.ಜಿ ಹನುಮಂತರಾಜು, ಸಂಗೀತ ನಿರ್ದೇಶಕ ಪ್ರಣವ್ ಸತೀಶ್ ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌