ವಿಶ್ವವಿದ್ಯಾಲಯದ 33ನೇ ನುಡಿಹಬ್ಬ ಪ್ರಯುಕ್ತ 60 ಪುಸ್ತಕಗಳ ಲೋಕಾರ್ಪಣೆ ಸಮಾರಂಭಕನ್ನಡಪ್ರಭ ವಾರ್ತೆ ಹೊಸಪೇಟೆ
ಕನ್ನಡ ವಿಶ್ವವಿದ್ಯಾಲಯ ಪುಸ್ತಕಗಳನ್ನು ಪ್ರಕಟಿಸಿದರಷ್ಟೇ ಸಾಲದು ಅವುಗಳನ್ನು ಬೆಳಕಿಗೆ ತರುವ ಕೆಲಸವು ಆಗಬೇಕು. ವಿಶ್ವವಿದ್ಯಾಲಯವು ಇದುವರೆಗೂ ಪ್ರಕಟಿಸಿರುವ ಪುಸ್ತಕಗಳನ್ನು ಡಿಜಟಲೀಕರಣ ಮಾಡಬೇಕಿದೆ. ಇದರಿಂದ ಕನ್ನಡದ ಜ್ಞಾನವನ್ನು ಪಸರಿಸಲು ಸಾಧ್ಯವಾಗಲಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಅಭಿಪ್ರಾಯಪಟ್ಟರು.ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ 33ನೇ ನುಡಿಹಬ್ಬ ಪ್ರಯುಕ್ತ ಮಂಗಳವಾರ ಪ್ರಸಾರಾಂಗ ಹಮ್ಮಿಕೊಂಡಿದ್ದ 60 ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ, ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕನ್ನಡ ವಿಶ್ವವಿದ್ಯಾಲಯ ಒಂದು ಐಕಾನಿಕ್ ವಿಶ್ವವಿದ್ಯಾಲಯ ಆಗಿದೆ. ಇಂತಹ ವಿಶಿಷ್ಟವಾದ ವಿಶ್ವವಿದ್ಯಾಲಯ ನಮ್ಮಲ್ಲಿರುವುದು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಹೆಮ್ಮೆಯ ವಿಷಯ. ವಿಶ್ವವಿದ್ಯಾಲಯಕ್ಕೆ ಬೇಕಾದ ಸಹಕಾರವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೊಡುಸುವೆ. ವಿಜಯನಗರ ಜಿಲ್ಲೆಗೆ ಇಂದು ಆದಾಯದ ಮೂಲ ಪ್ರವಾಸೋದ್ಯಮವಾಗಿದೆ. ಆದ್ದರಿಂದ ವಿಶ್ವವಿದ್ಯಾಲಯದಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಆರಂಭಿಸುವುದರ ಮೂಲಕ ದೇಶ, ವಿದೇಶಿ ಪ್ರವಾಸಿಗರಿಗೆ ಕನ್ನಡದ ದೇಶೀ ಆಹಾರ, ಕಲೆ, ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಆಗಬೇಕು ಎಂದರು.ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಮೂಲಕ ಹಂಪಿಯ ಪ್ರವಾಸಿಗರಿಗೆ 25 ರೆಸ್ಟೋರೆಂಟ್‌ಗಳನ್ನು ತೆರೆಯುವ ಕೆಲಸವಾಗುತ್ತಿದೆ. ಹಂಪಿಯ ಸ್ಮಾರಕಗಳು ಮತ್ತು ಪರಿಸರವನ್ನು ನೋಡಲು ಬರುವ ಪ್ರವಾಸಿಗರು ಕನ್ನಡ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಇಲ್ಲಿನ ಪುಸ್ತಕಗಳನ್ನು ಓದುವ ವಾತಾವರಣ ಸೃಷ್ಟಿಸಬೇಕು. ಹಂಪಿ ಉತ್ಸವದ ರೂವಾರಿ ಎಂ.ಪಿ. ಪ್ರಕಾಶ ಅವರು ಹಂಪಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದರು.
ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯ ಬೇರೆ ಹಳೆಯ ವಿಶ್ವವಿದ್ಯಾಲಯಗಳಿಗೆ ಸರಿಸಾಟಿಯಾಗಿ 1650ಕ್ಕೂ ಹೆಚ್ಚು ಶೀರ್ಷಿಕೆಯ ಪುಸ್ತಕಗಳನ್ನು ಪ್ರಕಟಿಸಿದೆ. ಇಲ್ಲಿನ ಪುಸ್ತಕಗಳ ಗುಣಮಟ್ಟ ಉತ್ಕೃಷ್ಟವಾದುದು. ವಿಶ್ವವಿದ್ಯಾಲಯದ ಪ್ರಸಾರಾಂಗವು ಲಾಭವನ್ನು ನಗಣ್ಯವಾಗಿ ಪರಿಗಣಿಸಿ ಇಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಅನೇಕ ವಿಷಯಗಳನ್ನು ತಳಮಟ್ಟದಿಂದ ಸಂಶೋಧನೆಯನ್ನು ಮಾಡಿ, ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಿದೆ. ಸರ್ಕಾರದ ಅನುದಾನದ ಕೊರತೆಯ ನಡುವೆ ಸಂಶೋಧನೆ ನಿರಂತರವಾಗಿ ನಡೆಯುತ್ತಿದೆ. ರಾಜ್ಯದ ಸಚಿವರ ಹಾಗೂ ಶಾಸಕರ ಕುರಿತು ಮುಂದೊಂದು ದಿನ ಪುಸ್ತಕ ಕೂಡ ಪ್ರಕಟಿಸಬಹುದು. ಶಾಸಕ ಎಚ್.ಆರ್. ಗವಿಯಪ್ಪನವರು ಕನ್ನಡ ವಿವಿ ಬೆಳವಣಿಗೆಗೆ ಸಹಕಾರ ನೀಡುತ್ತಿದ್ದಾರೆ ಎಂದರು.ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣ್ಣಚ್ಚ ತಂಬಂಡವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿವಿ ಪ್ರಸಾರಾಂಗದ ನಿರ್ದೇಶಕ ಡಾ. ಮಾಧವ ಪೆರಾಜೆ, ವಿವಿ ಸಹಾಯಕ ಕುಲಸಚಿವ ಎಂ.ಎಂ. ಶಿವಪ್ರಕಾಶ ಮತ್ತಿತರರಿದ್ದರು.