ಬಾಕಿ ವೇತನಕ್ಕೆ ಒತ್ತಾಯಿಸಿ ಕನ್ನಡ ವಿಶ್ವವಿದ್ಯಾಲಯ ಸಿಬ್ಬಂದಿ ಪ್ರತಿಭಟನೆ

KannadaprabhaNewsNetwork |  
Published : Sep 22, 2026, 02:30 AM IST
ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹಾಗೂ ಕುಲಸಚಿವ ಡಾ. ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. | Kannada Prabha

ಸಾರಾಂಶ

ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು.

ಹೊಸಪೇಟೆ: ಹಲವು ತಿಂಗಳಿನಿಂದ ಬಾಕಿ ಉಳಿದಿರುವ ವೇತನವನ್ನು ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿ ಕನ್ನಡ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರು ಹಾಗೂ ತಾತ್ಕಾಲಿಕ ಆಡಳಿತ ಸಿಬ್ಬಂದಿ ಸೋಮವಾರ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿ, ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹಾಗೂ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಕಳೆದ 10ರಿಂದ 20 ವರ್ಷಗಳಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಮತ್ತು ತಾತ್ಕಾಲಿಕ ಆಡಳಿತ ಸಿಬ್ಬಂದಿಗೆ ಹಲವು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಸಿಬ್ಬಂದಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅತಿಥಿ ಉಪನ್ಯಾಸಕರಿಗೆ ಹಿಂದಿನ 11 ತಿಂಗಳು ಹಾಗೂ ಪ್ರಸಕ್ತ ಸಾಲಿನ 5 ತಿಂಗಳು ಸೇರಿದಂತೆ ಒಟ್ಟು 16 ತಿಂಗಳ ವೇತನ ಬಾಕಿ ಉಳಿದಿದೆ. ಅದೇ ರೀತಿ ತಾತ್ಕಾಲಿಕ ಆಡಳಿತ ಸಿಬ್ಬಂದಿಗೆ ಹಿಂದಿನ 7 ತಿಂಗಳು ಹಾಗೂ ಪ್ರಸಕ್ತ ಸಾಲಿನ 5 ತಿಂಗಳು ಸೇರಿದಂತೆ ಒಟ್ಟು 12 ತಿಂಗಳ ವೇತನ ಬಾಕಿ ಇದೆ.

ವೇತನ ಪಾವತಿಯಾಗದ ಕಾರಣ ಮನೆ ಬಾಡಿಗೆ, ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ ಸೇರಿದಂತೆ ದಿನನಿತ್ಯದ ಜೀವನ ನಿರ್ವಹಣೆಯಲ್ಲಿಯೂ ತೊಂದರೆ ಎದುರಿಸುತ್ತಿದ್ದೇವೆ. ಈ ಕುರಿತು ಕುಲಪತಿಗಳು, ಕುಲಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಮುಂದಿನ ಎರಡು ವಾರದೊಳಗೆ ಸಂಪೂರ್ಣ ಬಾಕಿ ವೇತನವನ್ನು ಬಿಡುಗಡೆ ಮಾಡದಿದ್ದರೆ, ಮುಂದಿನ ಹಂತದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅತಿಥಿ ಉಪನ್ಯಾಸಕರಾದ ಡಾ. ತಿಮ್ಮಣ್ಣ ಭೀಮರಾಯ, ಡಾ. ಕೃಷ್ಣೆಗೌಡ, ಕೃಷ್ಣನಾಯಕ್‌, ವಿರೂಪಾಕ್ಷಪ್ಪ ಇಟಗಿ, ತಾತ್ಕಾಲಿ ಆಡಳಿತ ಸಿಬ್ಬಂದಿಗಳಾದ ಡಾ. ಎ. ನಾಗವೇಣಿ, ಶ್ರೀನಿವಾಸ ಕೆ.ಜೆ. ಬಸವರಾಜ, ಜೆ. ಶಿವಕುಮಾರ್, ಬಿ. ಗಂಗಾಧರ, ಮಹ್ಮದ್‌ ಶಫಿ, ಮಲ್ಲಿಕಾರ್ಜುನ ಮಹಾಮನಿ, ಸುನೀಲ್‌, ಭೀಮಣ್ಣ, ಗುಂಡಪ್ಪ, ಅಶ್ವನಿ, ಸುಮಾ, ನಂದಿನಿ, ಕೆ. ಪಂಪಾಪತಿ, ಕೆ. ವೀರೇಶ್‌, ಸಂತೋಷ, ರವಿಕುಮಾರ, ಕೆ. ಗಿರಿರಾಜ್‌, ಶ್ರೀಕಾಂತ ಚೌಟಗಿ, ಡಾ. ರೇವಣ್ಣಸಿದ್ದಪ್ಪ, ದೊಡ್ಡ ಬಸಪ್ಪ, ಹನುಮಂತಪ್ಪ, ರಾಮಮೂರ್ತಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೌಲ್ಯಯುತ ಶಿಕ್ಷಣದ ಅನುಷ್ಠಾನ ಬಹಳ ಮುಖ್ಯ: ಮುಪ್ಪಿನ ಬಸವಲಿಂಗ ಶ್ರೀ
ದಲಿತ ಕುಟುಂಬದ ಮನೆ ಧ್ವಂಸಗೊಳಿಸಿದ ಆರೋಪಿಗಳ ಬಂಧಿಸಲು ಆಗ್ರಹ