ಕಂಪ್ಲಿ: ಅಂಗನವಾಡಿ ನೌಕರರನ್ನು ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ. 1ರಿಂದ 3ರ ವರೆಗೆ ದೆಹಲಿಯಲ್ಲಿ ಹೋರಾಟ ನಡೆಸಲಾಗುವುದು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ಹಂತದಲ್ಲಿ ಸಂಸದರು ಹಾಗೂ ಶಾಸಕರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಹಾಗೂ ಸಿಐಟಿಯು ರಾಜ್ಯ ಕಾರ್ಯದರ್ಶಿ ಎಸ್. ವರಲಕ್ಷ್ಮಿ ಎಚ್ಚರಿಸಿದರು.
ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಒ, ಜನಗಣತಿ, ಆರ್ಥಿಕ ಸಮೀಕ್ಷೆ ಹಾಗೂ ಎಸ್‌ಐಆರ್ ಸೇರಿದಂತೆ ವಿವಿಧ ಕಾರ್ಯಗಳಿಗೆ ನಿಯೋಜಿಸಲಾಗುತ್ತಿದೆ. ಇದರಿಂದ ಅಂಗನವಾಡಿ ಕೇಂದ್ರಗಳ ಮೂಲ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಸುಮಾರು 30 ಸಾವಿರ ಅಂಗನವಾಡಿ ನೌಕರರನ್ನು ವಿವಿಧ ಹೆಚ್ಚುವರಿ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಅನುದಾನ ಹೆಚ್ಚಳಕ್ಕೆ ಆಗ್ರಹ: ಅಂಗನವಾಡಿ ಯೋಜನೆ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದ್ದು, ಕೇಂದ್ರದ ಅನುದಾನದ ಪ್ರಮಾಣದಲ್ಲಿ ಕಡಿತವಾಗಿದೆ. ಆದರೆ ಬೆಲೆ ಏರಿಕೆಗೆ ಅನುಗುಣವಾಗಿ ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಹಾಗೂ ನಿರ್ವಹಣೆಗೆ ನೀಡುವ ಅನುದಾನ ಹೆಚ್ಚಳವಾಗಿಲ್ಲ. ಇದರಿಂದ ಅಂಗನವಾಡಿ ಕೇಂದ್ರಗಳ ಗುಣಮಟ್ಟದ ಸೇವೆ ಮೇಲೆ ಪರಿಣಾಮ ಬೀರುವಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಅಗತ್ಯ ಅನುದಾನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.2018ರಿಂದ ಕೇಂದ್ರ ಸರ್ಕಾರ ಅಂಗನವಾಡಿ ನೌಕರರ ಗೌರವಧನ ಹೆಚ್ಚಳ ಮಾಡಿಲ್ಲ. ನೌಕರರ ವೇತನ ಹಾಗೂ ಸೇವಾ ಸೌಲಭ್ಯಗಳನ್ನು ಸುಧಾರಿಸುವ ಅಗತ್ಯವಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ಗೌರವಧನ ನೀಡುವ ಭರವಸೆ ನೀಡಿತ್ತು. ಈ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಬೇಡಿಕೆ: ಸಮ್ಮೇಳನದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಬಿ.ಕೆ. ಉಮಾದೇವಿ, ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು. ಪೋಷಣ್ ಟ್ರ್ಯಾಕರ್‌ನಲ್ಲಿ ಎಫ್‌ಆರ್‌ಎಸ್ ವ್ಯವಸ್ಥೆ ಕೈಬಿಡಬೇಕು. ಕಂಪ್ಲಿಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಕಚೇರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.