ಹೊಸಪೇಟೆ: ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಿಗಿಂತ ಕನ್ನಡ ವಿಶ್ವವಿದ್ಯಾಲಯವು ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಹೇಳಿದರು.
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಹಾಗೂ ಅವುಗಳ ಪ್ರಕಟಣೆ ಪ್ರಸಾರ ಕಾರ್ಯದಲ್ಲಿ ಕನ್ನಡ ವಿಶ್ವವಿದ್ಯಾಲಯವು ನಾಡಿನಲ್ಲಿ ಮುಂಚೂಣಿಯಲ್ಲಿದೆ. ಕನ್ನಡ ವಿಶ್ವವಿದ್ಯಾಲಯವು ಕಳೆದ 33 ವರ್ಷಗಳಿಂದ ಅತ್ಯುತ್ತಮವಾದ ಪುಸ್ತಕಗಳನ್ನು ಪ್ರಕಟಿಸುವುದಷ್ಟೇ ಅಲ್ಲ, ಅದನ್ನು ವ್ಯವಸ್ಥಿತವಾಗಿ ಓದುಗರ ಮನೆ ಮನಗಳಿಗೆ ತಲುಪಿಸುವಲ್ಲಿ ಪ್ರಸಾರಾಂಗವು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸಾವಿರದ ಆರುನೂರಕ್ಕೂ ಹೆಚ್ಚು ಮೌಲಿಕ ಪುಸ್ತಕಗಳನ್ನು ಪ್ರಸಾರಾಂಗವೂ ಪ್ರಕಟಿಸಿದೆ. ಈ ಪುಸ್ತಕಗಳನ್ನು ಓದುಗರಿಗೆ, ಮಾರಾಟಗಾರರಿಗೆ ತಲುಪಿಸುವಲ್ಲಿ ಸಹಕಾರಿಯಾಗಲು ಈ ಹಿಂದೆ ಇದ್ದ ವಾಹನವನ್ನು ಪುನರ್‌ನವೀಕರಿಸಿ ಶಾಲೆ, ಕಾಲೇಜು ವಿಶ್ವವಿದ್ಯಾಲಯಗಳು, ಸಾಹಿತ್ಯ ಸಮ್ಮೇಳನಗಳಲ್ಲಿ ಈ ವಾಹನದ ಮೂಲಕ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.ಕರ್ನಾಟಕದ ಪ್ರಮುಖ ಬೌದ್ಧಿಕ, ಸಾಂಸ್ಥಿಕ ಕೇಂದ್ರವಾದ ಕನ್ನಡ ವಿಶ್ವವಿದ್ಯಾಲಯವು ಪುಸ್ತಕ ಪ್ರಕಟಣೆಗಳ ಮೂಲಕ ಕನ್ನಡ ಸರಸ್ವತ ಲೋಕದಲ್ಲಿ ತನ್ನದೇ ಆದ ಜನಮನ್ನಣೆ ಮತ್ತು ಅಧಿಕೃತತೆ ಪ್ರಾಪ್ತವಾಗಿರುವ ಈ ಹೊತ್ತಿನಲ್ಲಿ ಕನ್ನಡದ ಓದುಗರು ನಮ್ಮ ಪ್ರಸಾರಾಂಗದ ಪುಸ್ತಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಂಡು ಓದುವ ಮೂಲಕ ಕನ್ನಡ ವಿಶ್ವವಿದ್ಯಾಲಯದ ಕಾಯಕನಿಷ್ಠೆ ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದರು.
ಪ್ರಸಾರಾಂಗದ ಸಂಚಾರಿ ಪುಸ್ತಕಾಲಯದ ಕೊಡುಗೆಯಾಗಿ ನೀಡಿರುವ ಬಲ್ಡೋಟ ಕಂಪನಿಗಳ ಸಮೂಹದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಆಗಿರುವ ಡಾ. ನರೇಂದ್ರ ಕುಮಾರ್ ಎ. ಬಲ್ದೋಟ ಪ್ರಸಾರಾಂಗದ ನವೀಕೃತ ಸಂಚಾರಿ ಪುಸ್ತಕ ಉದ್ಘಾಟಿಸಿ, ಬಲ್ಡೋಟ ಕಂಪನಿಯು ಸಮಾಜದ ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಈ ಯೋಜನೆಯಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಈ ಸಂಚಾರಿ ಪುಸ್ತಕಾಲಯವನ್ನು ಕೊಡುಗೆಯಾಗಿ ನೀಡಿದೆ. ಇದನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳಲಿ ಎಂದು ಆಶಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿರೂಪಾಕ್ಷಿ ಪೂಜಾರಹಳ್ಳಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನಾಗರಾಜ ಹವಾಲ್ದಾರ್, ಉಪ ಪ್ರಾಚಾರ್ಯ ಪಿ. ಶ್ರೀಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.