ಸಂವಹನದಿಂದಲೇ ಕನ್ನಡ ಉಳಿವು: ಭಾಸ್ಕರಾನಂದ ಕುಮಾರ್

KannadaprabhaNewsNetwork |  
Published : May 04, 2026, 02:45 AM IST
ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಾ. ಮೋಹನ್ ಆಳ್ವಾ ಉದ್ಘಾಟಿಸಿದರು | Kannada Prabha

ಸಾರಾಂಶ

ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಇರುವ ಏಕೈಕ ಮತ್ತು ಅತ್ಯಂತ ಸರಳ ಮಾರ್ಗವೆಂದರೆ ನಮ್ಮ ನಿತ್ಯದ ಸಂವಹನದಲ್ಲಿ ಅದನ್ನು ಬಳಸುವುದು ಎಂದು ಖ್ಯಾತ ವೈದ್ಯ, ಸಂಘಟಕ ಡಾ. ಭಾಸ್ಕರಾನಂದ ಕುಮಾರ್ ಹೇಳಿದರು.

ಉಡುಪಿ: ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಇರುವ ಏಕೈಕ ಮತ್ತು ಅತ್ಯಂತ ಸರಳ ಮಾರ್ಗವೆಂದರೆ ನಮ್ಮ ನಿತ್ಯದ ಸಂವಹನದಲ್ಲಿ ಅದನ್ನು ಬಳಸುವುದು ಎಂದು ಖ್ಯಾತ ವೈದ್ಯ, ಸಂಘಟಕ ಡಾ. ಭಾಸ್ಕರಾನಂದ ಕುಮಾರ್ ಹೇಳಿದರು.

ಭಾನುವಾರ ​ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಇಲ್ಲಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಉಡುಪಿ ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನ “ಭೀಷ್ಮೋತ್ಸವ”ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.​

ಕರಾವಳಿ ಭಾಗದಲ್ಲಿ ಕನ್ನಡ ಭಾಷೆ ಬೆಳೆಯಲು ಯಕ್ಷಗಾನವೇ ಪ್ರಮುಖ ಕಾರಣ. ಈ ಮಣ್ಣಿನ ಜನರಿಗೆ ರಾಮಾಯಣ, ಮಹಾಭಾರತದಂತಹ ಪುರಾಣ ಕಥೆಗಳು ಹಾಗೂ ಶುದ್ಧ ಕನ್ನಡದ ಪರಿಚಯವಾಗಿದ್ದು ಯಕ್ಷಗಾನದಿಂದ. ಪಠ್ಯಪುಸ್ತಕದ ಕನ್ನಡ ಮತ್ತು ಆಡುಭಾಷೆಯ ನಡುವಿನ ಸೇತುವೆಯಾಗಿ ಯಕ್ಷಗಾನ ಅಪೂರ್ವ ಕೊಡುಗೆ ನೀಡಿದೆ ಎಂದರು.​ಉದ್ಯೋಗಕ್ಕಾಗಿ ಹೊರ ಜಿಲ್ಲೆಗಳಿಂದ ಬಂದವರ ಜೊತೆ ನಾವು ಅವರ ಭಾಷೆಯಲ್ಲಿ ಮಾತನಾಡುವುದನ್ನು ಬಿಡಬೇಕು. ನಾವು ಅವರೊಂದಿಗೆ ಕನ್ನಡದಲ್ಲೇ ವ್ಯವಹರಿಸಿದಾಗ ಮಾತ್ರ ಅವರಿಗೆ ಕನ್ನಡ ಕಲಿಯುವುದು ಅನಿವಾರ್ಯವಾಗುತ್ತದೆ. ಆಗ ಸ್ಥಳೀಯ ಸಾಹಿತ್ಯವೂ ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.ಯುವಕರನ್ನು ಸಾಹಿತ್ಯದತ್ತ ಸೆಳೆಯಲು ಮಕ್ಕಳ ಸಮ್ಮೇಳನ ಹಾಗೂ ಸಾಹಿತ್ಯ ಸ್ಪರ್ಧೆಗಳನ್ನು ನಿರಂತರ ನಡೆಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಮ್ಮೇಳನವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ. ಮೋಹನ್ ಆಳ್ವ ಉದ್ಘಾಟಿಸಿದರು.ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಶುಭ ನುಡಿಗಳನ್ನಾಡಿದರು. ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ, ಜಿಲ್ಲಾ ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ, ಕರ್ಣಾಟಕ ಬ್ಯಾಂಕಿನ ರಮೇಶ್‌ ವೈದ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಮ್ಮೇಳನದ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಾದ ತಿಲಕನಾಥ್ ಮಂಜೇಶ್ವರ, ಗೋಪಾಲ್ ಭಟ್‌ ಎಂ., ವಿಮಲಾ ಚಂದ್ರಶೇಖ‌ರ್, ಮರವಂತೆ ನಾಗರಾಜ್ ಹೆಬ್ಬಾರ್, ಲಕ್ಷ್ಮಿ ಹರಿಶ್ಚಂದ್ರ, ವಿಶ್ವೇಶ್ವರ ಅಡಿಗ, ಪಿ.ಎಂ. ವೇಣು ಗೋಪಾಲ್ ಹೆಬ್ಬಾರ್ ಮತ್ತು ವಿದ್ಯಾಲತಾ ಯು.ಶೆಟ್ಟಿ ಅವರಿಗೆ ಕಸಾಪ ಉಡುಪಿ ತಾಲೂಕು ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.​

ಸ್ವಾಗತ ಸಮಿತಿ ಕಾರ್‍ಯಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ., ಗೌರವ ಕಾರ್‍ಯದರ್ಶಿ ರಂಜಿನಿ ವಸಂತ್, ಗೌರವ ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ, ಸಲಹೆಗಾರ ಭುವನಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.ಸ್ವಾಗತ ಸಮಿತಿ ಪ್ರಧಾನ ಕಾರ್‍ಯದರ್ಶಿ ಸತೀಶ್‌ ಕೊಡವೂರು ಸ್ವಾಗತಿಸಿ, ತಾಲೂಕು ಗೌರವ ಕಾರ್‍ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು. ಪೂರ್ಣಿಮಾ ಜನಾರ್ದನ ನಿರೂಪಿಸಿದರು.​ ಸಮ್ಮೇಳನಕ್ಕೂ ಮುನ್ನ ಕುಂಜಿಬೆಟ್ಟು ಶಾರದಾ ಕಲ್ಯಾಣಮಂಟಪದಿಂದ ಭವ್ಯ ಮೆರವಣಿಗೆ ನಡೆಯಿತು. ಆಸ್ಟ್ರೋ ಮೋಹನ್‌ ಹಾಗೂ ಜನಾರ್ದನ ಕೊಡವೂರು ಸಂಪಾದಿತ “ಚಿತ್ರ ಮಯ ಉಡುಪಿ” ಪ್ರದರ್ಶನ ಮತ್ತು ನಿತ್ಯಾನಂದ ನಾಯಕ್ ಅವರ ಮುರಲ್ ಕಲಾಕೃತಿಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಸರ್ಕಾರ ಸೋತಿದೆ: ಮೋಹನ್ ಆಳ್ವ: ಡಾ. ಎಂ. ಮೋಹನ್‌ ಆಳ್ವ​ಮಾತನಾಡಿ, ರಾಜ್ಯ ಸರ್ಕಾರವು ಕನ್ನಡ ಮಾಧ್ಯಮ ಶಾಲೆಗಳನ್ನು ಗಟ್ಟಿಯಾಗಿ ಕಟ್ಟುವಲ್ಲಿ ಸಂಪೂರ್ಣ ಸೋತು ಹೋಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಕನ್ನಡ ಶಾಲೆಗಳು ಶಿಕ್ಷಕರಿಲ್ಲದೆ ಸೊರಗುತ್ತಿದ್ದು, ಪ್ರತಿ ವರ್ಷ ಶಾಲೆಗಳು ಮುಚ್ಚುತ್ತಿರುವುದು ಆತಂಕಕಾರಿ. ಕನ್ನಡವನ್ನು ಉಳಿಸಲು ಕೇವಲ ಸರಕಾರವನ್ನೇ ನಂಬಿ ಕುಳಿತುಕೊಳ್ಳಬಾರದು. ಕೈಗಾರಿಕೋದ್ಯಮಿಗಳು ತಮ್ಮ ಲಾಭಾಂಶದ ಒಂದು ಭಾಗವನ್ನು ಕನ್ನಡ ಶಾಲೆಗಳ ಉನ್ನತೀಕರಣಕ್ಕೆ ಮೀಸಲಿಟ್ಟು, ಆಂಗ್ಲ ಮಾಧ್ಯಮ ಶಾಲೆಗಳ ಮಾದರಿಯಲ್ಲಿ ಕನ್ನಡ ಶಾಲೆಗಳನ್ನು ಕಟ್ಟಬೇಕು ಎಂದು ಕರೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗಾಲದ ಮೊದಲು ಸೇತುವೆ ಕಾಮಗಾರಿ ಪೂರ್ಣವಾಗದಿದ್ದರೆ ಸಂಚಾರಕ್ಕೆ ಸಂಚಕಾರ
ಉದ್ಯಮ- ತಂತ್ರಜ್ಞಾನ ಬೆಳವಣಿಗೆಯ ಕೇಂದ್ರವಾಗಿ ಮಂಗಳೂರು