ವಿವಿಧತೆಯಲ್ಲಿ ಏಕತೆ ಸಾಧಿಸಿ ಸಹಬಾಳ್ವೆ ನಡೆಸುತ್ತಿರುವ ಕನ್ನಡಿಗರು: ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್

KannadaprabhaNewsNetwork |  
Published : Nov 02, 2025, 02:45 AM IST
1ಸಿಎಚ್ಎನ್‌22ಚಾಮರಾಜನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್‌  | Kannada Prabha

ಸಾರಾಂಶ

ಕವಿಗಳು, ಕಲಾವಿದರು ಕನ್ನಡ ಭಾಷೆ, ಸಾಹಿತ್ಯ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ೮ ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಕನ್ನಡ ಭಾಷಾ ಸಾಹಿತ್ಯದ ಹೆಮ್ಮೆಯ ದ್ಯೋತಕ. ಸುಮಾರು ೨ ಸಾವಿರ ವರ್ಷ ಇತಿಹಾಸವಿರುವ ಕನ್ನಡ ಭಾಷೆ ಇನ್ನೂ ಗಟ್ಟಿಯಾಗಿ ಬೆಳೆಸುವ ಸದುದ್ದೇಶದಿಂದ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯಾಗಿ ಘೋಷಿಸಿದೆ. ಕನ್ನಡ ನಾಡು-ನುಡಿಗೆ ಚಾಮರಾಜನಗರ ಜಿಲ್ಲೆ ಕೊಡುಗೆ ಅಪಾರ. ಚಾಮರಾಜನಗರ ಕರ್ನಾಟಕಕ್ಕೆ ಭಾಷೆಯ ತೊಟ್ಟಿಲಾಗಿದೆ. ಪಶ್ಚಿಮದ ಮೂಲೆಹೊಳೆಯಿಂದ ಪೂರ್ವದ ಹೊಗೇನಕಲ್‌ವರೆಗಿನ ಪ್ರದೇಶಗಳಲ್ಲಿ ಗಟ್ಟಿಯಾದ ಕನ್ನಡ ಭಾಷೆಯನ್ನಾಡುವ ಜನಸಮೂಹವಿದೆ.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸ್ವಾಭಿಮಾನಿಗಳು, ಶಾಂತಿಪ್ರಿಯರಾದ ಕನ್ನಡಿಗರು ವೈವಿಧ್ಯಮಯ ಸಂಸ್ಕೃತಿ ಮೈಗೂಡಿಸಿಕೊಂಡು ವಿವಿಧತೆಯಲ್ಲಿ ಏಕತೆ ಸಾಧಿಸಿ ಸಹಬಾಳ್ವೆ ನಡೆಸುತ್ತಿರುವುದು ಹೆಮ್ಮಯ ವಿಚಾರ ಎಂದು ಪಶು ಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಸಂದೇಶ ನೀಡಿದ ಅವರು,

ಕನ್ನಡನಾಡು ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರ, ಶಿಲ್ಪಕಲೆಗೆ ದೇಶದ ಗಮನ ಸೆಳೆದಿದೆ. ಕನ್ನಡಿಗರು ಎಲ್ಲಾ ವರ್ಗದವರೊಂದಿಗೆ ಸಹಬಾಳ್ವೆ ನಡೆಸುವ ಮನೋಭಾವ ಹೊಂದಿದ್ದಾರೆ. ರಾಷ್ಟ್ರಕವಿ ಕುವೆಂಪು ಹೇಳಿರುವಂತೆ ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬಂತೆ ಕನ್ನಡನಾಡಿನಲ್ಲಿ ಹುಟ್ಟಿರುವ ನಾವೆಲ್ಲರೂ ಎಲ್ಲೇ ನೆಲೆಸಿದ್ದರೂ ನಾಡು-ನುಡಿ ಘನತೆ ಎತ್ತಿ ಹಿಡಿಯಬೇಕಾಗಿದೆ. ನಾಡು-ನುಡಿ ಉಳಿವಿಗಾಗಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗವಹಿಸಿದ ಹಲವು ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಸಚಿವರು ತಿಳಿಸಿದರು.

ಕವಿಗಳು, ಕಲಾವಿದರು ಕನ್ನಡ ಭಾಷೆ, ಸಾಹಿತ್ಯ ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ೮ ಜ್ಞಾನಪೀಠ ಪ್ರಶಸ್ತಿ ದೊರೆತಿರುವುದು ಕನ್ನಡ ಭಾಷಾ ಸಾಹಿತ್ಯದ ಹೆಮ್ಮೆಯ ದ್ಯೋತಕ. ಸುಮಾರು ೨ ಸಾವಿರ ವರ್ಷ ಇತಿಹಾಸವಿರುವ ಕನ್ನಡ ಭಾಷೆ ಇನ್ನೂ ಗಟ್ಟಿಯಾಗಿ ಬೆಳೆಸುವ ಸದುದ್ದೇಶದಿಂದ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯಾಗಿ ಘೋಷಿಸಿದೆ. ಕನ್ನಡ ನಾಡು-ನುಡಿಗೆ ಚಾಮರಾಜನಗರ ಜಿಲ್ಲೆ ಕೊಡುಗೆ ಅಪಾರ. ಚಾಮರಾಜನಗರ ಕರ್ನಾಟಕಕ್ಕೆ ಭಾಷೆಯ ತೊಟ್ಟಿಲಾಗಿದೆ. ಪಶ್ಚಿಮದ ಮೂಲೆಹೊಳೆಯಿಂದ ಪೂರ್ವದ ಹೊಗೇನಕಲ್‌ವರೆಗಿನ ಪ್ರದೇಶಗಳಲ್ಲಿ ಗಟ್ಟಿಯಾದ ಕನ್ನಡ ಭಾಷೆಯನ್ನಾಡುವ ಜನಸಮೂಹವಿದೆ ಎಂದರು.

ಪವಾಡಪುರುಷರು ನಡೆದಾಡಿದ ಪುಣ್ಯಭೂಮಿಯಾಗಿರುವ ಚಾಮರಾಜನಗರ ಜಾನಪದ ಕಲೆಗಳ ತವರೂರು. ಸರಿಸಾಟಿಯೇ ಇಲ್ಲದ ಜಿಲ್ಲೆಯ ಜಾನಪದ ಸಾಹಿತ್ಯಕ್ಕೆ ಮಲೆ ಮಹದೇಶ್ವರರು, ಮಂಟೇಸ್ವಾಮಿ, ಬಿಳಿಗಿರಿರಂಗ, ಸಿದ್ದಪ್ಪಾಜಿ ಮಹಾಕಾವ್ಯಗಳು ಜಿಲ್ಲೆಗೆ ಕೀರ್ತಿ ತಂದಿವೆ. ಕಂಸಾಳೆ. ಗೊರವರ ನೃತ್ಯ, ವೀರಭದ್ರ ನೃತ್ಯ, ತಂಬೂರಿ, ನೀಲಗಾರರು ಜಿಲ್ಲೆಯ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿ. ಜಿಲ್ಲೆ ಸಾಹಿತಿಗಳು ಕನ್ನಡ ಕಾವ್ಯ, ಕಾದಂಬರಿ, ನಾಟಕ ಕ್ಷೇತ್ರಗಳಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇಲ್ಲಿಯ ಬುಡಕಟ್ಟು ಜನರ ಜಾನಪದ ಸಾಹಿತ್ಯ, ಸಂಗೀತ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಹೆಸರುವಾಸಿ ಎಂದರು.

ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ, ಶಾಸಕ ಎ.ಆರ್. ಕೃಷ್ಣಮೂರ್ತಿ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷ ಎಸ್. ಸುರೇಶ್, ಉಪಾಧ್ಯಕ್ಷ ಮಮತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶೃತಿ ಉಪಸ್ಥಿತರಿದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ