ನರಗುಂದ: ಕನ್ನಡ ನಾಡು, ನುಡಿ ಪ್ರಾಚೀನ ಕಾಲದಿಂದಲೂ ವಿಶೇಷತೆ ಹೊಂದಿದೆ. ಆದರೆ ಇತ್ತೀಚೆಗೆ ಕನ್ನಡಕ್ಕೆ ಸಂಕಷ್ಟ ಎದುರಾಗುತ್ತಿದೆ. ಆದ್ದರಿಂದ ಕನ್ನಡಿಗರು ಸ್ವಾಭಿಮಾನಿಗಳಾಗಿ ಹೆಚ್ಚೆಚ್ಚು ಕನ್ನಡ ಬಳಸಿ ಬೆಳೆಸಬೇಕು ಎಂದು ಧಾರವಾಡ ಜೆಎಸ್ಎಸ್ ಡಿ. ವೀರೇಂದ್ರ ಹೆಗ್ಗಡೆ ಸಂಶೋಧನಾ ಕೇಂದ್ರದ ಸಂಯೋಜಕ, ಸಾಹಿತಿ ಜಿನದತ್ತ ಹಡಗಲಿ ತಿಳಿಸಿದರು.
ಕನ್ನಡಿಗರೇ ಕನ್ನಡ ಬಳಕೆ ಮಾಡಲು ಹಿಂದೇಟು ಹಾಕುವುದು ಸಲ್ಲದು. ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ಇದೊಂದು ಶ್ರೀಮಂತ ಭಾಷೆಯಾಗಿದೆ. ತನ್ನದೇ ಆದ ಸಾಹಿತ್ಯ, ಸಂಸ್ಕೃತಿ ಹೊಂದಿ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ಕನ್ನಡ ಸಂಸ್ಕೃತಿ ವಿದೇಶದಲ್ಲಿ ಪಸರಿಸುವಾಗ ನಾವು ಕನ್ನಡ ನೆಲದಲ್ಲಿ ಹೆಚ್ಚು ಬೆಳೆಸಬೇಕು. ವಿದ್ಯಾರ್ಥಿಗಳು ಅನ್ಯ ಭಾಷೆಗಳಿಗೆ ಮಾರುಹೋಗದೇ ಮಾತೃ ಭಾಷೆಯನ್ನು ಪ್ರೀತಿಸಬೇಕು. ಕನ್ನಡವನ್ನು ಬೆಳೆಸಬೇಕು. ಕನ್ನಡ ಸಾಹಿತ್ಯದ ಅಧ್ಯಯನ ಮಾಡಬೇಕು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಕನ್ನಡಕ್ಕೆ ಕುತ್ತು ಬಂದಾಗ ಕನ್ನಡಿಗರು ಜಾಗೃತಿ ಹೊಂದಿ ಅದನ್ನು ಎದುರಿಸಲು ಮುಂದಾಗಬೇಕು. ಆ ಕೆಲಸವನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ಕಳೆದ 136 ವರ್ಷಗಳಿಂದ ಮಾಡುತ್ತಿದೆ. ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಇದರ ಕೊಡುಗೆ ಅಪಾರ ಎಂದರು.ಕರ್ನಾಟಕ ವಿದ್ಯಾವರ್ಧಕ ಸಂಘ ನವೆಂಬರ ತಿಂಗಳಾದ್ಯಂತ ನಾಡಿನೆಲ್ಲೆಡೆ ಕನ್ನಡ ಕಾರ್ಯಕ್ರಮ ನಡೆಸುತ್ತಿದೆ. ಗದಗ ಜಿಲ್ಲೆಯಲ್ಲಿ 7 ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಥಮ ಕಾರ್ಯಕ್ರಮಲನ್ನು ನರಗುಂದದಲ್ಲಿ ನಡೆಸುವ ಮೂಲಕ ಚಾಲನೆ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ ನೇತೃತ್ವದ ಕಲಾ ತಂಡದಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯ ಆನಂದಕುಮಾರ ಲಾಳಸಂಗಿ, ಕನ್ನಡ ವಿಭಾಗದ ಮುಖ್ಯಸ್ಥ ಎಸ್.ವಿ. ಮನಗುಂಡಿ, ಯಶೋದಾ ಅಂಗಡಿ ಹಾಗೂ ಕಾಲೇಜು ಸಿಬ್ಬಂದಿ ಇದ್ದರು. ಪ್ರೊ. ಆರ್.ಎಚ್. ತಿಗಡಿ ಸ್ವಾಗತಿಸಿದರು. ಪವಿತ್ರ ನಿರೂಪಿಸಿದರು. ನಾಗಪ್ಪ ಸೂಳಿಕೇರಿ ವಂದಿಸಿದರು.