ಲಕ್ಷ್ಮೇಶ್ವರ: ಪಟ್ಟಣದ ಬಾಲಕನೊಬ್ಬನನ್ನು ಸುಹೇಲ್ ಅಬ್ದುಲ್ ಅಜೀಜ್ ರಿತ್ತಿ ಎಂಬಾತನು ಮತಾಂತರಕ್ಕೆ ಯತ್ನಿಸಿ ಜೀತಕ್ಕಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ಶ್ರೀರಾಮಸೇನೆಯ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ಈರಣ್ಣ ಪೂಜಾರ ಹಾಗೂ ಸಂಗಡಿಗರು ತಹಸೀಲ್ದಾರ್ ಧನಂಜಯ ಮಾಲಗಿತ್ತಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ವೇಳೆ ಶ್ರೀರಾಮಸೇನೆಯ ಈರಣ್ಣ ಪೂಜಾರ ಹಾಗೂ ಗಂಗಾಧರ ಮೆಣಸಿನಕಾಯಿ ಮಾತನಾಡಿ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದಿಂದ ಹಿಂದೂಗಳನ್ನು ಬಲವಂತದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸುವ ಕಾರ್ಯ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ.ಪಟ್ಟಣದಲ್ಲಿ 17 ವರ್ಷದ ಬಾಲಕನನ್ನು ಚಹಾದ ಅಂಗಡಿಯಲ್ಲಿ ಕೆಲಸಕ್ಕೆ ಇಟ್ಟುಕೊಂಡಿದ್ದಲ್ಲದೆ ಮತಾಂತರಕ್ಕೆ ಪ್ರಯತ್ನಿಸಿರುವುದು ನೋವಿನ ಸಂಗತಿ. ಆದ್ದರಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿರುವ ಸುಹೇಲ್ ರಿತ್ತಿ ಅವರ ವಿರುದ್ಧ ಶೀಘ್ರ ಕ್ರಮ ಕೈಗೊಂಡು ಆ ಬಾಲಕನ ತಂದೆ ತಾಯಿಗಳ ಕಣ್ಣೀರು ಒರೆಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಶರಣಪ್ಪ ಗಣದಿನ್ನಿ, ರೂಪಾ ಗಣದಿನ್ನಿ, ಮಂಜುನಾಥ ಹೊಗೆಸೊಪ್ಪಿನ, ವಿಜಯ ಕುಂಬಾರ, ಪ್ರವೀಣ ಬೋಮಲೆ, ಹರೀಶ್ ಗೋಸಾವಿ, ಬಸವರಾಜ ಕಲ್ಲೂರ, ಕುಮಾರ ಕಣವಿ, ಆದೇಶ ಸವಣೂರ, ಪ್ರಾಣೇಶ ವ್ಯಾಪಾರಿ, ಸೋಮು ಗೌರಿ, ವಿನಾಯಕ ಸಪ್ಲಡ, ಕಿರಣ ಮಹಾಂತಶೆಟ್ಟರ, ವಿಶಾಲ ಬಟಗುರ್ಕಿ, ಯಶವಂತ ಬಳ್ಳಾರಿ, ಸಂತೋಷ ಬೊಮಲೆ ಸೇರಿದಂತೆ ಅನೇಕರು ಇದ್ದರು.ಬಂಗಾರ ಕದ್ದ ಕಳ್ಳನ ಬಂಧನ
ಲಕ್ಷೇಶ್ವರ: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀ ನಗರದಲ್ಲಿನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಮನೆ ಬಾಗಿಲ ಚಿಲಕ ಮುರಿದು ಲಕ್ಷಾಂತರ ಮೌಲ್ಯದ ಬಂಗಾರದ ಆಭರಣ ಕದ್ದು ಪರಾರಿಯಾಗಿದ್ದರು.ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ ಹಾಗೂ ಡಿವೈಎಸ್‌ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಿ.ವಿ. ನ್ಯಾಮಗೌಡ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿತರ ಪತ್ತೆಗಾಗಿ ಶೋಧ ನಡೆಸಿತ್ತು.ಆರೋಪಿ ದ್ಯಾಮಣ್ಣ (ಉರ್ಫ್ ಚಂದ್ರು) ಗಂಗಪ್ಪ ಕಂಬಳಿ ಎಂಬಾತನನ್ನು ಬಂಧಿಸಿ ಕಳ್ಳತನ ಮಾಡಿದ್ದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿತನಿಂದ ಒಟ್ಟು 17 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 55 ಗ್ರಾಂ ಬೆಳ್ಳಿಯ ಆಭರಣಗಳು ಒಟ್ಟು ₹125.000 ಕಿಮ್ಮತ್ತಿನ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಜಪ್ತ ಮಾಡಲಾಗಿದೆ ಎಂದು ಸಿಪಿಐ ಬಿ.ವಿ. ನ್ಯಾಮಗೌಡ ತಿಳಿಸಿದರು.ಆರೋಪಿ ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ನಾಗರಾಜ ಗಡದ, ಕ್ರೈಂ ಪಿಎಸ್‌ಐ ಟಿ.ಕೆ. ರಾಠೋಡ, ಠಾಣೆಯ ಎಂ.ಎ. ಶೇಖ, ಆರ್.ಎಸ್. ಯರಗಟ್ಟಿ, ಎಂ.ಎಸ್. ಬಳ್ಳಾರಿ, ಎ.ಆರ್. ಕಮ್ಮಾರ, ಎಚ್.ಬಿ. ಗುಡ್ಡಣ್ಣವರ, ಎಚ್.ಐ. ಕಲ್ಲಣ್ಣವರ, ಎನ್.ಎಚ್. ಮಠಪತಿ, ಎಎಸ್‌ಐ ಗುರು ಬೂದಿಹಾಳ, ಸಂಜೀವ ಕೊರಡೂರ, ಕೃಷ್ಣ ಹುಲಗೂರ ಎಎಚ್‌ಸಿ, ಅಪ್ಪಣ್ಣ ರಾಠೋಡ ಕಾರ್ಯವನ್ನು ಎಸ್.ಪಿ. ಪ್ರಶಂಸಿದ್ದಾರೆ.