ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಐಜೂರು ವೃತ್ತದಲ್ಲಿ ಕೇರಳ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದ ಕಾರ್ಯಕರ್ತರು, ಕಾಸರಗೋಡಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಜೊತೆಗೆ ಮಲೆಯಾಳಿ ಭಾಷೆಯನ್ನು ಹೇರುತ್ತಿರುವುದನ್ನು ಖಂಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ , ಕೇರಳದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಕನ್ನಡ ಶಾಲೆಗಳಲ್ಲಿ ಮಳೆಯಾಳಿ ಭಾಷೆ ಕಲಿಯುವುದನ್ನು ಕಡ್ಡಾಯಗೊಳಿಸಿರುವುದು ಖಂಡನೀಯ. ಕಾಸರಗೋಡು ಸಂಪೂರ್ಣ ಕನ್ನಡಿಗರು ಇರುವ ಜಿಲ್ಲೆ. ಕನ್ನಡಿಗರಿಗೆ ಆಗ್ತಿರುವ ಅನ್ಯಾಯದ ಬಗ್ಗೆ ಸರ್ಕಾರ ಗಮನಹರಿಸಬೇಕು. ಕೂಡಲೇ ಕನ್ನಡಿಗರ ಹಕ್ಕುಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿರೋದು ಸ್ವಾಗತಾರ್ಹ ಎಂದರು.ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು. ಕೂಡಲೇ ಸಿಎಂ ವಿಶೇಷ ಅಧಿವೇಶನ ಕರೆದು ಚರ್ಚೆ ಮಾಡಬೇಕು.
ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು. ಸರ್ವ ಪಕ್ಷ ನಿಯೋಗ ರಾಷ್ಟ್ರಪತಿಗಳ ಭೇಟಿ ಮಾಡಿ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕು. ಇಲ್ಲವಾದಲ್ಲಿ ನಾವೇ ಕಾಸರಗೋಡಿಗೆ ಮುತ್ತಿಗೆ ಹಾಕುತ್ತೇವೆ. ಜೊತೆಗೆ ರಾಜಭವನಕ್ಕೂ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ , ಮುಖಂಡರಾದ ಸಿ.ಎಸ್.ಜಯಕುಮಾರ್, ಗಂಗಾಧರ್, ಭಾಗ್ಯ ,ಸುದಾಮ, ವೆಂಕಟಲಕ್ಷ್ಮೀ, ಕೆ.ಜಯರಾಮು, ವಿಜಯಕುಮಾರ್, ಕುಮಾರ್, ಪ್ರಸನ್ನ, ಶಿವಮೂರ್ತಿ, ಕೆಂಪರಾಜು, ಹೇಮಂತ್, ಪಿ.ಸುರೇಶ್, ಗಿರೀಶ್, ನಾರಾಯಣಸ್ವಾಮಿ, ಮಹದೇವ್ ಮತ್ತಿತರರು ಭಾಗವಹಿಸಿದ್ದರು.