ಕನ್ನಡಿಗರು ಸ್ವಾಭಿಮಾನಿಗಳಾಗಬೇಕು: ಸುಧೀರ್‌ಕುಮಾರ್

KannadaprabhaNewsNetwork | Published : Nov 14, 2023 1:15 AM

ಸಾರಾಂಶ

ಕನ್ನಡಿಗರು ಸ್ವಾಭಿಮಾನಿಗಳಾಗಬೇಕು: ಸುಧೀರ್‌ಕುಮಾರ್

ನಗರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿ ಉಳಿಯ ಬೇಕಾದರೆ ಕನ್ನಡಿಗರು ಸ್ವಾಭಿಮಾನಿಗಳಾಗಬೇಕು ಎಂದು ಸಾಹಿತಿ ಸುಧೀರ್‌ಕುಮಾರ್ ಮುರೊಳ್ಳಿ ಕರೆ ನೀಡಿದರು. ನಗರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಾವುದೇ ಸರ್ಕಾರ, ಸಂಘ ಸಂಸ್ಥೆಗಳು, ಕಾನೂನು ಅಥವಾ ಶಾಸನಗಳಿಂದ ಕನ್ನಡ ಭಾಷೆ ಉಳಿಯುವುದಿಲ್ಲ. ಕನ್ನಡಿಗರು ಸ್ವಾಭಿಮಾನಿಗಳಾಗಿ ತಮ್ಮ ದೈನಂದಿನ ವ್ಯವಹಾರಗಳಲ್ಲಿ ಮಾತೃ ಭಾಷೆ ಕಡ್ಡಾಯವಾಗಿ ಬಳಸಿದಾಗ ಮಾತ್ರ ಅದು ಮುಂದಿನ ತಲೆಮಾರಿಗೆ ಉಳಿಯುತ್ತದೆ ಎಂದು ಕಿವಿ ಮಾತು ಹೇಳಿದರು. ತಮಿಳರು, ತೆಲುಗರು, ಕೇರಳಿಗರು, ಉತ್ತರ ಭಾರತೀಯರು ಅತ್ಯಂತ ಸ್ವಾಭಿಮಾನಿಗಳು ಅವರು ಎಲ್ಲರಿಗೂ ತಮ್ಮ ಮಾತೃ ಭಾಷೆಯಲ್ಲೇ ಉತ್ತರಿಸುತ್ತಾರೆ ಎಂದ ಅವರು, ಕನ್ನಡಿಗರು ಅವರನ್ನು ಮಾದರಿಯಾಗಿ ತೆಗೆದುಕೊಂಡು ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಮನವಿ ಮಾಡಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಗಾಯಕ ಮಲ್ಲಿಗೆ ಸುಧೀರ್ ಮಾತನಾಡಿ, ಎಲ್ಲಿಯವರೆಗೆ ನಾವು ಮಾತೃ ಭಾಷೆಯಲ್ಲಿ ವ್ಯವಹರಿಸುವುದಿಲ್ಲವೋ ಅಲ್ಲಿಯವರೆಗೂ ರಾಜ್ಯದಲ್ಲಿ ಕನ್ನಡ ಬೆಳೆಯುವುದಿಲ್ಲ ಎಂದರು. ಕನ್ನಡಿಗರಾದ ನಾವೇ ಮಾತೃ ಭಾಷೆಯನ್ನು, ಈ ನೆಲದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಬೆಳೆಸದಿದ್ದರೆ ಅದು ಹೇಗೆ ಬೆಳೆಯುತ್ತದೆ ಮುಂದಿನ ಪೀಳಿಗೆಗೆ ಹೇಗೆ ಉಳಿಯುತ್ತದೆ ಎಂದು ಪ್ರಶ್ನಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜೆ.ಜಿ.ಸುರೇಂದ್ರ, ವಿದ್ಯಾರ್ಥಿಗಳಲ್ಲಿ ನಾಡು, ನುಡಿ ನೆಲ, ಜಲ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಹಾಗೂ ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಉಪನ್ಯಾಸಕ ರಂಗಸ್ವಾಮಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಾಯಕ ಮಲ್ಲಿಗೆ ಸುಧೀರ್ ಅವರಿಂದ ನಡೆದ ಕನ್ನಡ ಗೀತೆಗಳ ಗಾಯನ ಗಮನ ಸೆಳೆಯಿತು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿಗಳಾದ ವೈಷ್ಣವಿ ಮತ್ತು ಸುಧೀರ್ ಕಾರ್ಯಕ್ರಮ ನಿರೂಪಿಸಿದರು. ಯಶಸ್ವಿನಿ ಸ್ವಾಗತಿಸಿದರು. ಶಕ್ತಿಧರ ವಂದಿಸಿದರು. 12 ಕೆಸಿಕೆಎಂ 2ಚಿಕ್ಕಮಗಳೂರಿನ ಬಿಜಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಾಹಿತಿ ಸುಧೀರ್‌ಕುಮಾರ್ ಮುರೊಳ್ಳಿ ಉದ್ಘಾಟಿಸಿದರು. ಸುರೇಂದ್ರ, ಗಾಯಕ ಸುಧೀರ್ ಇದ್ದಾರೆ.

Share this article