ಕಾಂತರಾಜು ವರದಿ ಅಧ್ಯಯನ ಅಗತ್ಯ: ರಾಯರಡ್ಡಿ

KannadaprabhaNewsNetwork |  
Published : Apr 16, 2025, 12:34 AM IST
546456 | Kannada Prabha

ಸಾರಾಂಶ

ಕಾಂತರಾಜು ವರದಿಯನ್ನು ಈಗಷ್ಟೇ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದ್ದು ಸಚಿವರು ಅಧ್ಯಯನ ಮಾಡಿಕೊಂಡು ಬರುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ದೊಡ್ಡ ವರದಿ ತಕ್ಷಣ ನೋಡಿ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿಯೇ ಸಚಿವರಿಗೆ ಕಾಲಾವಕಾಶ ನೀಡಲಾಗಿದೆ.

ಕೊಪ್ಪಳ:

ಪ್ರತಿಯೊಂದು ಜಾತಿಯ ಸ್ಥಿತಿಗತಿ ತಿಳಿಯುವ ಕುರಿತು ಅಧ್ಯಯನ ನಡೆಸಿ ಸಲ್ಲಿಕೆ ಮಾಡಿರುವ ಕಾಂತರಾಜು ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ, ನಂತರ ಅದರ ಪರಿಣಾಮದ ಕುರಿತು ಮಾತನಾಡಬೇಕು. ಈಗಲೇ ಮಾತನಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂತರಾಜು ವರದಿಯನ್ನು ಈಗಷ್ಟೇ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದ್ದು ಸಚಿವರು ಅಧ್ಯಯನ ಮಾಡಿಕೊಂಡು ಬರುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ದೊಡ್ಡ ವರದಿ ತಕ್ಷಣ ನೋಡಿ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿಯೇ ಸಚಿವರಿಗೆ ಕಾಲಾವಕಾಶ ನೀಡಲಾಗಿದೆ. ಏ. 17ರಂದು ಪುನಃ ಅದರ ಸಾಧ್ಯತೆಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಹೀಗಾಗಿ ಈ ಕುರಿತು ಯಾರು ಸಹ ಆತುರದ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.

ನಾನು ಸಹ ಕಾಂತರಾಜು ವರದಿ ಅಧ್ಯಯನ ಮಾಡಿಲ್ಲ. ಆದರೆ, ಮಾಧ್ಯಮಗಳಲ್ಲಿ ಬಂದಿರುವ ವರದಿ ಗಮನಿಸಿದ್ದೇವೆ. ಅದು ಉಹಾಪೋಹಗಳು ಆಗಿರಬಹುದು ಅಥವಾ ಸತ್ಯವೂ ಆಗಿರಬಹುದು. ರಾಜ್ಯದಲ್ಲಿ ಬ್ರಾಹ್ಮಣ ಮತ್ತು ಜೈನರು ಮಾತ್ರ ಮುಂದುವರಿದ ಜಾತಿಗಳಾಗಿವೆ. ಉಳಿದೆಲ್ಲ ಜಾತಿಗಳು ಸಹ ಹಿಂದುಳಿದ ವರ್ಗದಲ್ಲಿಯೇ ಬರುತ್ತವೆ. ಲಿಂಗಾಯತರು ಸಹ 3ಬಿ ಅಡಿ ಬರುತ್ತಾರೆ. ಅವರಲ್ಲಿ ಸಹ ಕೆಲವರು ಹಿಂದುಳಿದ ಲಿಂಗಾಯತರು ಎಂದು ಬರೆಸುತ್ತಾರೆ. ಉಪಜಾತಿಗಳನ್ನು ನೋಂದಾಯಿಸಿರುವುದರಿಂದ ಸಮಸ್ಯೆಯಾಗಿರಬಹುದು ಎಂದ ರಾಯರಡ್ಡಿ, ಒಕ್ಕಲಿಗರು ಈ ಕುರಿತು ಪ್ರತ್ಯೇಕ ಸಭೆ ನಡೆಸಿದರೆ ನಡೆಸಲಿ. ಆದರೆ, ಲಿಂಗಾಯತರು ಸಭೆ ಮಾಡುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಶ್ರೀಶೈಲ ಜಗದ್ಗುರುಗಳು, ಶಂಕರ ಬೀದರಿ ಅವರ ಪ್ರತಿಕ್ರಿಯೆ ಕುರಿತು ನಾನೇನು ಹೇಳುವುದಿಲ್ಲ. ಆದರೆ, ಶಂಕರ ಬಿದರಿ ಅವರೊಂದಿಗೆ ಮಾತನಾಡಿದ್ದೇನೆ, ಕಾಂತರಾಜು ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡೋಣ, ಅದಾದ ನಂತರವೇ ಈ ಕುರಿತು ನಿರ್ಧಾರ ತೆಗೆದುಕೊಳ್ಳೋಣ ಎಂದಿದ್ದೇನೆ. ನನ್ನ ಪ್ರಕಾರ ಕಾಂತರಾಜ ವರದಿಯಿಂದ ಎಲ್ಲ ವರ್ಗಗಳಿಗೂ ಅನುಕೂಲವೇ ಆಗಲಿದೆ ಎಂದು ಹೇಳಿದರು.

ಸಚಿವ ಎಂ.ಬಿ. ಪಾಟೀಲ್ ಅವರು ಲಿಂಗಾಯತರು 1 ಕೋಟಿಗೂ ಅಧಿಕ ಇದ್ದಾರೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ ಎನಿಸುತ್ತದೆ ಎಂದ ಅವರು, ಯಾವುದೇ ಜಾತಿ ಮತ್ತು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಆದರೆ, ಅವರನ್ನು ವರ್ಗದಡಿ ಮೀಸಲಾತಿ ಸೌಲಭ್ಯ ನೀಡಲು ಅವಕಾಶವಿದೆ ಎಂದರು.

ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದನ್ನೇ ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದು ಏಕೆ ಎಂದು ತಿಳಿಯುತ್ತಿಲ್ಲ ಎಂದ ಅವರು, ಹಿಂದುಳಿದ ವರ್ಗಗಳ ಆಯೋಗವೂ ಸಹ ಈಗ ಮೀಸಲಾತಿ ಹೆಚ್ಚಿಸುವಂತೆ ಹೇಳಿದೆ. ಆದರೆ, ಬಿಜೆಪಿಗರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪೊಲೀಸ್ ಠಾಣೆಗಳಿಗೆ ಬಡಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂಬ ಹೇಳಿಕೆಗೆ ಕಿಡಿಕಾರಿದರು.

ಸಿದ್ದರಾಮಯ್ಯ ಮಾಸ್ಟರ್‌:

ಸಾಮಾಜಿಕ ನ್ಯಾಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಸ್ಟರ್ ಇದ್ದಂತೆ. ಅವರು ಸದಾ ಸಮಾಜಿಕ ನ್ಯಾಯದ ಪರವಾಗಿ ಚಿಂತಿಸುತ್ತಾರೆ. ಯಾವುದೇ ಜಾತಿ ಬಗ್ಗೆ ಮಾತನಾಡುವುದಿಲ್ಲ. ಬಸವಣ್ಣನ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಜಾರಿಗೆ ತರಲು ಸಿಎಂ ಪ್ರಯತ್ನಿಸುತ್ತಿದ್ದಾರೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ