ಕಾಂತಾವರ ಉತ್ಸವ 2024: ಏಳು ಸಾಧಕರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Nov 5, 2024 12:30 AM

ಸಾರಾಂಶ

ಕರ್ನಾಟಕ ರಾಜ್ಯೋತ್ಸವ ದಿನದಂದು ಕಾಂತಾವರ ಕನ್ನಡ ಸಂಘದಲ್ಲಿ ‘ಕಾಂತಾವರ ಉತ್ಸವ – ೨೦೨೪’ ನಡೆಯಿತು. ಕಾಸರಗೋಡಿನ ಹಿರಿಯ ಸಾಹಿತಿ ಹಾಗೂ ಸಂಘಟಕ ಪ್ರೊ. ಪಿ.ಎನ್.ಮೂಡಿತ್ತಾಯ ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಎಂಟು ಕೃತಿಗಳು ಮತ್ತು ಸಂಸ್ಕೃತಿ ಸಂವರ್ಧನ ಮಾಲೆಯ ಒಂದು ಕೃತಿಯೂ ಸೇರಿದಂತೆ ಒಟ್ಟು ಒಂಬತ್ತು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಳೆದ ೪೮ ವರ್ಷಗಳಿಂದ ಕನ್ನಡ ನಾಡು ಹೆಮ್ಮೆಪಡುವಂತಹ ಕನ್ನಡದ ಚಟುವಟಿಕೆಗಳು ಕಾಂತಾವರ ಕನ್ನಡ ಸಂಘದಲ್ಲಿ ಅರ್ಥಪೂರ್ಣವಾಗಿ ನಡೆಯುತ್ತಿರುವುದು ಅಭಿನಂದನೀಯ. ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣಗೊಂಡು ೫೦ ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ಸಂದರ್ಭ ಕಾಸರಗೋಡು ಕನ್ನಡಿಗರಿಗೆ ಇದು ಸಂಭ್ರಮಿಸುವ ದಿನವಲ್ಲವಾದರೂ ಇಂದಿಗೂ ಕಾಸರಗೋಡಿನ ಕನ್ನಡಿಗರು ಕನ್ನಡ ನಾಡು ನುಡಿಗೆ ಸಲ್ಲಿಸುತ್ತಿರುವ ಸೇವೆ ಅನನ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡು ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಹೇಳಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ದಿನದಂದು ಕಾಂತಾವರ ಕನ್ನಡ ಸಂಘದಲ್ಲಿ ನಡೆದ ‘ಕಾಂತಾವರ ಉತ್ಸವ – ೨೦೨೪’ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಏಳು ಜನ ಸಾಧಕರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಿದರು.

ಹಿರಿಯ ಲೇಖಕಿ ಹಾಗೂ ಸಂಘಟಕಿ ಪ್ರೊ. ಪ್ರಮೀಳಾ ಮಾಧವ್ ಕಾಸರಗೋಡು ಅವರು ಪ್ರಶಸ್ತಿ ಪುರಸ್ಕೃತರಿಗೆ ಶುಭಾಶಂಸನೆ ಸಲ್ಲಿಸಿದರು.

‘ನಾಡಿಗೆ ನಮಸ್ಕಾರ ಗ್ರಂಥಮಾಲೆ’ಯ ಸಂಪಾದಕ ಡಾ. ಬಿ.ಜನಾರ್ದನ ಭಟ್ ಅವರು ಮಾಲೆಯಲ್ಲಿ ಮೂಡಿಬರುತ್ತಿರುವ ಕೃತಿಗಳ ಮಹತ್ವವನ್ನು ತಿಳಿಸಿದರು.

ಕಾಸರಗೋಡಿನ ಹಿರಿಯ ಸಾಹಿತಿ ಹಾಗೂ ಸಂಘಟಕ ಪ್ರೊ. ಪಿ.ಎನ್.ಮೂಡಿತ್ತಾಯ ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಎಂಟು ಕೃತಿಗಳು ಮತ್ತು ಸಂಸ್ಕೃತಿ ಸಂವರ್ಧನ ಮಾಲೆಯ ಒಂದು ಕೃತಿಯೂ ಸೇರಿದಂತೆ ಒಟ್ಟು ಒಂಬತ್ತು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಬಂದ ಸಾಧಕರು, ಕೃತಿಯ ಲೇಖಕರು ಮತ್ತು ಪ್ರಾಯೋಜಕರು ಹಾಗೂ ದತ್ತಿನಿಧಿಗಳ ಪ್ರಾಯೋಜಕರನ್ನೂ ಗೌರವಿಸಲಾಯಿತು.

ಕನ್ನಡ ಸಂಘದ ಉಪಾಧ್ಯಕ್ಷ ಸತೀಶ ಕುಮಾರ್ ಕೆಮ್ಮಣ್ಣು ಕನ್ನಡ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಸ್ವಾಗತಿಸಿದರು. ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು. ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ನಿರೂಪಿಸಿದರು.

ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಮಕ ವಾಚನ, ವ್ಯಾಖ್ಯಾನ ಕಾರ್ಯಕ್ರಮ ನೆರವೇರಿತು. ಚಾಟುಕವಿ ವಿರಚಿತ ಕರ್ನಾಟಕ ಭಾಗವತದ ‘ಮಹಾಬಲಿ’ ಪ್ರಸಂಗದ ವಾಚನವನ್ನು ಯಜ್ಞೇಶ್ ಆಚಾರ್ಯ ಹೊಸಬೆಟ್ಟು ನಿರ್ವಹಿಸಿದರೆ ಸರ್ಪಂಗಳ ಈಶ್ವರ ಭಟ್ ವ್ಯಾಖ್ಯಾನಿಸಿದರು.

ಪ್ರಶಸ್ತಿ ಪುರಸ್ಕೃತರು: ‘ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ’ಯನ್ನು ಬಂಟ್ವಾಳದ ಪ್ರೊ. ತುಕಾರಾಮ ಪೂಜಾರಿ, ‘ಮಹೋಪಾಧ್ಯಾಯ ಪ್ರಶಸ್ತಿ‘ಯನ್ನು ಡಾ. ವರದರಾಜ ಚಂದ್ರಗಿರಿ, ‘ಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ’ಯನ್ನು ಪ್ರೊ. ಯು.ಮಹೇಶ್ವರಿ, ‘ಮಂಜನಬೈಲ್ ರಂಗಸನ್ಮಾನ್ ಪ್ರಶಸ್ತಿ’ಯನ್ನು ಬೆಳಗಾವಿಯ ಡಾ. ಅರವಿಂದ ಕುಲಕರ್ಣಿ, ‘ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ’ಯನ್ನು ಶಿಕ್ಷಕ ವಿಠಲ ಬೇಲಾಡಿ, ‘ಕಾಂತಾವರ ಸಾಹಿತ್ಯ ಪ್ರಶಸ್ತಿ’ಯನ್ನು ಡಾ. ಪ್ರಭಾಕರ ಶಿಶಿಲ, ‘ಕಾಂತಾವರ ಅನುವಾದ ಸಾಹಿತ್ಯ ಪ್ರಶಸ್ತಿ’ಯನ್ನು ಡಾ. ಪಾರ್ವತಿ ಜಿ.ಐತಾಳ್ ಅವರಿಗೆ ಪ್ರದಾನಿಸಿ ಗೌರವಿಸಲಾಯಿತು. ಪ್ರಶಸ್ತಿ ತಲಾ ಹತ್ತು ಸಾವಿರ ರು. ಗೌರವ ಸಂಭಾವನೆ, ತಾಮ್ರಪತ್ರ ಹಾಗೂ ಸನ್ಮಾನವನ್ನೊಳಗೊಂಡಿದೆ

ಲೋಕಾರ್ಪಣೆಗೊಂಡ ಕೃತಿಗಳು:

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತುಸಂಗ್ರಹಾಲಯ (ಲೇ: ಡಾ. ನವೀನ್ ಕುಮಾರ್ ಮರಿಕೆ), ಮಕ್ಕಳ ಸಾಹಿತ್ಯ ಸಂಗಮದ ಜಂಗಮ ಶ್ರೀನಿವಾಸ ರಾವ್ (ಲೇ : ವಿರಾಜ್ ಅಡೂರು), ಹಿರಿಯ ಮಕ್ಕಳ ಕವಿ, ಸಮಾಜ ಮಿತ್ರ, ಶಿಕ್ಷಕ ಸೂಡ ಸದಾನಂದ ಶೆಣೈ (ಲೇ : ಸಚ್ಚಿದಾನಂದ ಶೆಣೈ), ಪಂಡಿತ ಪರಂಪರೆಯ ಗುರು, ಸಾಹಿತಿ ವಿದ್ವಾನ್ ಜೇಂಕಳ ಶ್ರೀನಿವಾಸ ಭಟ್ (ಲೇ : ಶ್ರೀಮತಿ ಜ್ಯೋತಿ ಮಹಾದೇವ್), ಸಾಹಿತ್ಯ ಶಿಕ್ಷಣ ಸಂಪನ್ನೆ ಶ್ರೀಮತಿ ಸಾವಿತ್ರಿ ಎಸ್. ರಾವ್ (ಲೇ : ಶ್ರೀಮತಿ ಆಶಾ ದಿಲೀಪ್ ಸುಳ್ಯಮೆ), ಕಲಾ ತಪಸ್ವಿ ಬಿ. ಗಣೇಶ ಸೋಮಯಾಜಿ (ಲೇ : ಪ್ರೊ. ಅನಂತ ಪದ್ಮನಾಭ ರಾವ್), ಪ್ರಸಿದ್ಧ ವಿಮರ್ಶಕಿ ಮತ್ತು ಅನುವಾದಕಿ ಪ್ರೊ. ಪಾರ್ವತಿ ಜಿ. ಐತಾಳ್ (ಲೇ: ನರೇಂದ್ರ ಎಸ್. ಗಂಗೊಳ್ಳಿ, ಕಾಸರಗೋಡಿನ ಕನ್ನಡ ಹೋರಾಟಗಾರ ಅಡೂರು ಉಮೇಶ್ ನಾಯಕ್ (ಲೇ: ರಾಧಾಕೃಷ್ಣ ಉಳಿಯತ್ತಡ್ಕ), ಹಾಸ್ಯ ಸಾಹಿತ್ಯದ (ನಿ)ರೂಪಕ ವೈ ಸತ್ಯನಾರಾಯಣ ಕಾಸರಗೋಡು (ಲೇ: ರಾಧಾಕೃಷ್ಣ ಉಳಿಯತ್ತಡ್ಕ) (ಸಂಸ್ಕೃತಿ ಸಂವರ್ಧನ ಮಾಲೆಯಲ್ಲಿ ಪ್ರಕಟಗೊಂಡ ಕೃತಿ).

Share this article