ರಂಗಭೂಮಿ, ಬಯಲಾಟ ಕ್ಷೇತ್ರದಲ್ಲಿ ಕಪ್ಪಗಲ್ಲು ಸೇವೆ ಅನನ್ಯ

KannadaprabhaNewsNetwork |  
Published : Sep 13, 2024, 01:35 AM IST
ಬಳ್ಳಾರಿ ತಾಲೂಕು ಕಪ್ಪಗಲ್ಲು ಗ್ರಾಮದಲ್ಲಿ ರಂಗತೋರಣ ಸಂಸ್ಥೆ ಹಮ್ಮಿಕೊಂಡಿದ್ದ ಕಪ್ಪಗಲ್ಲು ನಾಟಕೋತ್ಸವದಲ್ಲಿ ನಾಟಕ ವೀಕ್ಷಿಸಲು ಆಗಮಿಸಿದ್ದ ಜನಸ್ತೋಮ.  | Kannada Prabha

ಸಾರಾಂಶ

ಕಪ್ಪಗಲ್ಲು ಗ್ರಾಮದಲ್ಲಿ ರಂಗತೋರಣ ಸಂಸ್ಥೆ ಹಮ್ಮಿಕೊಂಡಿದ್ದ ಕಪ್ಪಗಲ್ಲುನಾಟಕೋತ್ಸವಕ್ಕೆ ಸಂಭ್ರಮದ ತೆರೆಬಿತ್ತು.

ಬಳ್ಳಾರಿ: ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ರಂಗತೋರಣ ಸಂಸ್ಥೆ ಹಮ್ಮಿಕೊಂಡಿದ್ದ ಕಪ್ಪಗಲ್ಲುನಾಟಕೋತ್ಸವಕ್ಕೆ ಸಂಭ್ರಮದ ತೆರೆಬಿತ್ತು.

ಸಮಾರೋಪ ಸಮಾರಂಭ ಹಾಗೂ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ತಾಪಂ ಮಾಜಿ ಸದಸ್ಯ ಮೂಲೆಮನೆ ಶಿವರುದ್ರಪ್ಪ ಅವರು, ಕಪ್ಪಗಲ್ಲು ಹಾಗೂ ಸಿರಿವಾರ ಅವಳಿ ಗ್ರಾಮಗಳು ರಂಗಭೂಮಿ ಹಾಗೂ ಬಯಲಾಟ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಮೆಲುಕು ಹಾಕಿದರು.

ಕನ್ನಡ ಕೆಲಸಗಳಿಗೆ ಈ ಹಿಂದಿನಿಂದಲೂ ಕಪ್ಪಗಲ್ಲು ಗ್ರಾಮ ಹೆಸರಾಗಿದೆ. ಈ ಗ್ರಾಮದ ಯುವಕರು ಸದಾ ಒಂದಿಲ್ಲೊಂದು ಕನ್ನಡದ ಕೆಲಸಗಳನ್ನು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ. ಕನ್ನಡ ಭಾಷೆ ಹಾಗೂ ಸಂಸ್ಕೃತಿ ಉಳಿವಿಗೆ ಈ ಊರು ಸದಾ ಸ್ಪಂದಿಸುತ್ತಲೇ ಬಂದಿದೆ ಎಂದು ಸ್ಮರಿಸಿದರು.

ನಾಲ್ಕು ದಿನಗಳ ಕಪ್ಪಗಲ್ಲು ನಾಟಕೋತ್ಸವವನ್ನು ಹಬ್ಬದಂತೆ ಆಚರಿಸಲಾಗಿದೆ. ಕಪ್ಪಗಲ್ಲು ಹಾಗೂ ಸಿರಿವಾರ ಗ್ರಾಮಸ್ಥರು ನಿತ್ಯ ನಾಟಕಗಳನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ. ಈ ರೀತಿಯ ನಾಟಕೋತ್ಸವಗಳು ನಗರ ಪ್ರದೇಶಗಳಿಗೆ ಸೀಮಿತವಾಗದೇ ಗ್ರಾಮೀಣ ಭಾಗದಲ್ಲಿ ನಡೆಯುವಂತಾಗಬೇಕು. ಹಳ್ಳಿ ಜನರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಪ್ರೊ.ಆರ್.ಭೀಮಸೇನ ಮಾತನಾಡಿ, ನಾಟಕೋತ್ಸವದ ಮೊದಲದಿನ ‘ಕೃಷ್ಣ ಸಂಧಾನ’ ಕಂಡು ನಕ್ಕು ನಲಿದು ನೀವು ಎರಡನೇ ದಿನ ‘ತಂಗಿ ಗಡಗಿ ಜ್ವಾಕಿ’ ಮಾಡಿದ್ದೀರಿ. ನಿನ್ನೆ ಗಣೇಶ ಚೌತಿಯಂದು ‘ಹೇಮರೆಡ್ಡಿ ಮಲ್ಲಮ್ಮ’ನ ಸಂಪೂರ್ಣ ಭಕ್ತಿಯಿಂದ ಪರಮೇಶ್ವರನನ್ನು ಕಂಡು ಪುನೀತರಾಗಿದ್ದೀರಿ ಇಂದು ‘ಮುದುಕನ ಮದುವೆ’ ಮಾಡಿಯೇ ಆನಂದಿಸಬೇಕೆಂದು ಮಾರ್ಮಿಕವಾಗಿ ನುಡಿದರು.

ಗ್ರಾಮದ ಮಧ್ಯದಲ್ಲೇ ಇರುವ ಚಿಕ್ಕ ರಂಗಮಂದಿರವನ್ನು ಬಳಸಿಕೊಂಡು ಬಿಜಾಪುರದ ಶ್ರೀ ಹಾನಗಲ್ ಕುಮಾರೇಶ್ವರ ನಾಟ್ಯ ಸಂಘದ ಎಲ್ಲ ಪರಿಕರಗಳನ್ನು ತಂದು ರಂಗ ಸಜ್ಜಿಕೆ ನಿರ್ಮಾಣ ಮಾಡಿ ನಾಲ್ಕು ದಿನ ಜೊತೆಗಿದ್ದ ಸಂಘದ ಮಾಲಿಕ ಶ್ರೀಧರ ಹೆಗಡೆ ಅವರನ್ನು ರಂಗತೋರಣ ಪರವಾಗಿ ಮತ್ತು ಕಪ್ಪಗಲ್ಲು ಗ್ರಾಮಸ್ಥರು ಶಾಲು ಹೊದಿಸಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮೂರು ದಿನ ಮಳೆ ಸುರಿದರೂ ನಾಟಕಕ್ಕೆ ತೊಂದರೆ ಆಗದಂತೆ ನೋಡಿ ಪ್ರೋತ್ಸಾಹಿಸಿದ ಗ್ರಾಮಸ್ಥರ ಕಲಾಭಿರುಚಿಯನ್ನು ಪ್ರಸಂಶಿಸಿದರು.

ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹಾಗೂ ನಾಟಕೋತ್ಸವ ಸಂಚಾಲಕ ಅನಿಲಕುಮಾರ ಅಂಗಡಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ವಿದ್ಯಾರ್ಥಿನಿ ಬಿಂದು, ಶಿಕ್ಷಕ ಶಂಭುಲಿಂಗ ಹಾಗೂ ಅನಿಲ ಕುಮಾರ ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ