ನಾಡಹಬ್ಬದಂತೆ ಕರಗ ಮಹೋತ್ಸವ ಆಚರಣೆ: ಶಾಸಕ

KannadaprabhaNewsNetwork |  
Published : Jul 11, 2025, 11:48 PM IST
11ಕೆಆರ್ ಎಂಎನ್ 5.ಜೆಪಿಜಿರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದ ಪೋಸ್ಟರ್ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಪ್ರತಿವರ್ಷ ರಾಮನಗರದಲ್ಲಿ ಸರ್ವ ಧರ್ಮ‌ ಸಂದೇಶ ಸಾರುವ ಐತಿಹಾಸಿಕ ಕರಗವನ್ನು ಹಬ್ಬವಾಗಿ ಆಚರಿಸಲ್ಪಡುವ ಮೂಲಕ ರಾಮನಗರದ ಹಿರಿಮೆಯನ್ನು ಎಲ್ಲೆಡೆ ಪಸರಿಸಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವವನ್ನು ಈ ಬಾರಿ ನಗರದಲ್ಲಿ ಜು. 15ರಂದು ನಾಡಹಬ್ಬದಂತೆ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದರು.ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸುವ ಚಾಮುಂಡಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ ಭೂಮಿ‌ ಪೂಜೆ ನೆರವೇರಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರತಿವರ್ಷ ರಾಮನಗರದಲ್ಲಿ ಸರ್ವ ಧರ್ಮ‌ ಸಂದೇಶ ಸಾರುವ ಐತಿಹಾಸಿಕ ಕರಗವನ್ನು ಹಬ್ಬವಾಗಿ ಆಚರಿಸಲ್ಪಡುವ ಮೂಲಕ ರಾಮನಗರದ ಹಿರಿಮೆಯನ್ನು ಎಲ್ಲೆಡೆ ಪಸರಿಸಿದೆ. ಮೈಸೂರಿಗೆ ದಸರಾ ಹಬ್ಬವಿದ್ದಂತೆ, ರಾಮನಗರಕ್ಕೆ ಚಾಮುಂಡೇಶ್ವರಿ ಅಮ್ಮನವರ ಕರಗ ಹೆಚ್ಚು ಪ್ರಸಿದ್ಧಿಯಾಗಿದೆ. ಭಕ್ತರ ಸಂರಕ್ಷಣಾರ್ಥವಾಗಿ ನಗರದಲ್ಲಿ ನೆಲೆಸಿರುವ ಶಕ್ತಿದೇವತೆ ಚಾಮುಂಡೇಶ್ವರಿ ಅಮ್ಮನವರ ಕರಗ ಸೇರಿದಂತೆ ಅಷ್ಟ ನಾಡದೇವತೆಗಳ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿದೆ ಎಂದರು.ಈ ನಾಡ ಹಬ್ಬಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರಿಗೆ ಸಾಂಸ್ಕೃತಿಕ ರಸದೌತಣ ಉಣಬಡಿಸುವ ಉದ್ದೇಶದಿಂದ ಪ್ರತಿವರ್ಷದಂತೆ ಈ ಬಾರಿಯೂ ನಟ ರವಿಚಂದ್ರನ್, ಶ್ರೀಮುರುಳಿ, ರಾಗಿಣಿ, ಸಂಜನಾ, ಗಾಯಕರಾದ ರಾಜೇಶ್ ಕೃಷ್ಣನ್, ರಘು ದೀಕ್ಷಿತ್ ಸೇರಿದಂತೆ ಖ್ಯಾತನಾಮರು, ಹಾಸ್ಯ ಕಲಾವಿದರಿಂದ ಸಾಂಸ್ಕೃತಿಕ ಹಾಗೂ ಹಾಸ್ಯ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕಾಗಿ ಬೃಹತ್ ವೇದಿಕೆ ಈಗಾಗಲೇ ಸಿದ್ದವಾಗುತ್ತಿದೆ. ಸಾವಿರಾರು ಮಂದಿ ಪ್ರೇಕ್ಷಕರು ಆಗಮಿಸುವ ನಿರೀಕ್ಷೆ ಇದ್ದು, ಎಲ್ಲರಿಗೂ ಆಸನದ ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷವಾಗಿ ಮಹಿಳಾ ಪ್ರೇಕ್ಷಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುವುದು ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.ಸಂಗೀತ ಸಂಜೆ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಚನ್ನಪಟ್ಟಣ ಕ್ಷೇತ್ರ ಶಾಸಕ ಸಿ.ಪಿ.ಯೋಗೇಶ್ವರ್, ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಜೂನಿಯರ್ ಕಾಲೇಜು ಮೈದಾನದಲ್ಲಿ ವ್ಯವಸ್ಥೆಯಾಗುತ್ತಿರುವ ಆಟೋಟಗಳಿಗೆ ಈ ಬಾರಿ ಉಚಿತ ಪಾಸ್ ಕೊಡುವ ವ್ಯವಸ್ಥೆ ಇಲ್ಲ. ದರಗಳನ್ನು ಕಡಿಮೆ ಇಟ್ಟು, ಎಲ್ಲಾ ವರ್ಗದ ಕುಟುಂಬಗಳ ಮಕ್ಕಳು ಈ ಆಟೋಟಗಳಲ್ಲಿ ಭಾಗವಹಿಸಲಿ ಎಂಬ ಉದ್ದೇಶಕ್ಕೆ ಈ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಉಚಿತ ಪಾಸ್‌ಗಳನ್ನು ಕೊಡುವುದಿಲ್ಲ ಎಂದು ಇಕ್ಬಾಲ್ ಹುಸೇನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ನಿಜಾಮುದ್ದೀನ್ ಷರೀಫ್, ಆರೀಫ್, ಗಿರಿಜಮ್ಮ, ಬೈರೇಗೌಡ, ಪಾರ್ವತಮ್ಮ, ಸಮದ್, ಅಣ್ಣು, ನಾಗಮ್ಮ, ಜಿಪಂ ಮಾಜಿ ಸದಸ್ಯ ಬೋಜಂಗಯ್ಯ ಇದ್ದರು.

...ಕೋಟ್ ...

ಮಡಲಕ್ಕಿ ತುಂಬುವ ಕಾರ್ಯ

ಶ್ರೀ ಚಾಮುಂಡೇಶ್ವರಿ ಅಮ್ಮನವರು ಇತರ 7 ಶಕ್ತಿ ದೇವತೆಗಳ ಕರಗ ಮಹೋತ್ಸವದ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ವಿಶೇಷವಾಗಿದೆ. ತಾವು ಎಂದಿನಂತೆ ನಗರದಲ್ಲಿ ಭಕ್ತ ಸಂರಕ್ಷಣಾರ್ಥ ನೆಲೆಸಿರುವ 12 ಶಕ್ತಿ ದೇವತೆಗಳಿಗೆ ಜುಲೈ 14ರ ಸಂಜೆ ಮಡಲಕ್ಕಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

- ಇಕ್ಬಾಲ್ ಹುಸೇನ್ ,ಶಾಸಕರು, ರಾಮನಗರ ಕ್ಷೇತ್ರ.

---

11ಕೆಆರ್ ಎಂಎನ್ 5.ಜೆಪಿಜಿ

ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದ ಪೋಸ್ಟರ್ ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿವೈಆರ್‌
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ಡಾ.ನೂರಲ್ ಹುದಾ ಕರೆ