ನೀರಿಗಾಗಿ ಕಾರಟಗಿ ಬಂದ್‌, ರೈತರ ಆಕ್ರೋಶ

KannadaprabhaNewsNetwork |  
Published : Nov 20, 2026, 01:45 AM IST
ಕಾರಟಗಿಯಲ್ಲಿ ತುಂಗಭದ್ರ ಎಡದಂಡೆ ನಾಲೆ ಡಿ.೧೦ರ ವರೆಗೆ ನೀರು ಹರಿಸಲು ಆಗ್ರಹಿಸಿ ಶುಕ್ರವಾರ ರೈತ ಸಂಘ ಮತ್ತು ಬಿಜೆಪಿಯಿಂದ ಕಾರಟಗಿ ಬಂದ್ ಕರೆ ನೀಡಿ ಕನಕದಾಸ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಅಚ್ಚುಕಟ್ಟು ಪ್ರದೇಶದ ಸಾವಿರಾರು ರೈತರ ಲಕ್ಷಾಂತರ ಎಕರೆ ಪ್ರದೇಶದಲ್ಲಿ ರೈತರ ಬೆಳೆದ ಬೆಳೆ ಉಳಿಸಲು ತುಂಗಭದ್ರಾ ಎಡದಂಡೆ ನಾಲೆಗೆ ಕನಿಷ್ಠ ಡಿ. ೧೦ರ ವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೀಡಿದ್ದ ಕರೆಗೆ ಜನರು ಉತ್ತಮವಾಗಿ ಸ್ಪಂದಿಸಿದ್ದು, ಕಾರಟಗಿ ಬಂದ್‌ ಶುಕ್ರವಾರ ಸಂಪೂರ್ಣ ಯಶಸ್ವಿಯಾಯಿತು.

ಕಾರಟಗಿ: ಅಚ್ಚುಕಟ್ಟು ಪ್ರದೇಶದ ಸಾವಿರಾರು ರೈತರ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಉಳಿಸಲು ತುಂಗಭದ್ರಾ ಎಡದಂಡೆ ನಾಲೆಗೆ ಕನಿಷ್ಠ ಡಿ. ೧೦ರ ವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೀಡಿದ್ದ ಕರೆಗೆ ಜನರು ಉತ್ತಮವಾಗಿ ಸ್ಪಂದಿಸಿದ್ದು, ಕಾರಟಗಿ ಬಂದ್‌ ಶುಕ್ರವಾರ ಸಂಪೂರ್ಣ ಯಶಸ್ವಿಯಾಯಿತು.

ಬಂದ್ ಬೆಂಬಲಿಸಿ ಇಲ್ಲಿನ ಹಳೇ ಬಜಾರ್, ಆರ್.ಜಿ. ರಸ್ತೆಯ ಮುಖ್ಯ ಮಾರುಕಟ್ಟೆ, ವಿಶೇಷ ಎಪಿಎಂಸಿ ಯಾರ್ಡ್, ನವಲಿ ವೃತ್ತದಲ್ಲಿ ಎಲ್ಲ ಅಂಗಡಿಗಳು, ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು.

ಶಾಲಾ-ಕಾಲೇಜುಗಳು, ಬ್ಯಾಂಕ್, ಪೆಟ್ರೋಲ್ ಬಂಕ್, ಆಸ್ಪತ್ರೆ, ಔಷಧಿ ಅಂಗಡಿ ಎಂದಿನಂತೆ ಕಾರ್ಯನಿರ್ವಹಿಸಿದವು. ಪ್ರತಿಭಟನಾಕಾರರು ನಾಲ್ಕೈದು ಗಂಟೆಗಳ ಕಾಲ ಪಟ್ಟಣದಿಂದ ಹಾದು ಹೋಗುವ ಬಸ್, ಬೃಹತ್ ಸರಕು ಸಾಗಾಟ ವಾಹನಗಳಿಗೆ ಬಂದ್ ಬಿಸಿ ತಟ್ಟಿತು. ನವಲಿ ವೃತ್ತದಲ್ಲಿ ರಸ್ತೆ ಬಂದ್ ಹಿನ್ನೆಲೆಯಲ್ಲಿ ದೂರದ ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು, ಹೈದರಾಬಾದ್ ಮತ್ತು ಮಂತ್ರಾಲಯಕ್ಕೆ ಹೋಗುವ ಮಾರ್ಗದ ಬಸ್‌ಗಳು ಪ್ರಯಾಸ ಪಡಬೇಕಾಯಿತು.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಬಳ್ಳಾರಿ, ವಿಜಯನಗರ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ರೈತರೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟವಾಡುತ್ತಿದೆ. ಅಣೆಕಟ್ಟೆಯಲ್ಲಿ ನೀರು ಇದೆ. ರೈತರ ಬೆಳೆಗೆ ನೀರು ಬಿಡದೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಳೆದ ವರ್ಷ ಅಣೆಕಟ್ಟೆಯ ಕ್ರಸ್ಟ್ ಗೇಟ್ ರಿಪೇರಿ ನೆಪದಲ್ಲಿ ಮತ್ತು ಈ ಬಾರಿಯೂ ನೀರಿನ ಕೊರತೆ ಎಂದು ಅಧಿಕಾರಿಗಳ ದಾರಿ ತಪ್ಪಿಸುವ ಕೆಲಸದಿಂದ ನೀರಿನ ಸಮಸ್ಯೆ ಎದುರಾಗಿದೆ ಎಂದು ರೈತರು ರಾಜ್ಯ ಸರ್ಕಾರ ಮತ್ತು ನೀರಾವರಿ ಸಲಹಾ ಸಮಿತಿಯ ವಿರುದ್ಧ ವಾಗ್ದಾಳಿ ನಡೆಸಿದರು.

ರೈತ ಸಂಘದ ಕಾರ್ಯಕರ್ತರು ನಾಡಕಚೇರಿಯಿಂದ, ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಬಿಜೆಪಿ ಕಚೇರಿಯಿಂದ ಮೆರವಣಿಗೆ ಮೂಲಕ ಕನಕದಾಸ ವೃತ್ತಕ್ಕೆ ಆಗಮಿಸಿ ಸಮಾವೇಶಗೊಂಡರು. ಅಲ್ಲಿ ರಸ್ತೆಗಳನ್ನು ಬಂದ್ ಮಾಡಿ ರೈತರು ರಾಜ್ಯ ಸರ್ಕಾರ, ತುಂಗಭದ್ರಾ ನೀರಾವರಿ ಸಲಹಾ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜಪ್ಪ ಚೆಳ್ಳೂರು, ಗುರುಸಿದ್ದಪ್ಪ ಯರಕಲ್, ದೊಡ್ಡಬಸವ ಮರಳಿ, ತಿಪ್ಪಣ್ಣ ಜೋಗಳದಿನ್ನಿ, ಜಡಿಯಪ್ಪ ಮುಕ್ಕುಂದಿ, ನಾಗರಾಜ ಬಿಲ್ಗಾರ್, ನಿಂಗಪ್ಪ ನಾಯಕ, ಜೆ. ರಾಮರಾವ್, ಹಸಿರು ಸೇನೆಯ ಪಂಪಣ್ಣ ನಾಯಕ, ಶರಣಪ್ಪ ಕೊತ್ವಾಲ್ ಮತ್ತು ಶರಣೇಗೌಡ ಕೆಸರಟ್ಟಿ ಇತರರು ಮಾತನಾಡಿದರು.

ಮಾಜಿ ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ಸರ್ಕಾರಕ್ಕೆ ರೈತರ ಕೂಗು ಕೇಳುತ್ತಿಲ್ಲ. ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ಡಿ. ೧೦ರ ವರೆಗೆ ಕಾಲುವೆಗಳಿಗೆ ನೀರು ಬಿಡದಿದ್ದರೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಇವರ ನಿವಾಸದ ಮುಂದೆ ಆಹೋರಾತ್ರಿ ಹೋರಾಟ ನಡೆಸಲಾಗುವುದು. ಜಿಂದಾಲ್, ಕಿರ್ಲೋಸ್ಕರ್, ಕಲ್ಯಾಣಿ ಮತ್ತು ಮುಕ್ಕುಂದ ಕಾರ್ಖಾನೆಗಳಿಗೆ ನೀರು ಮಾರಾಟ ಮಾಡುವುದನ್ನು ನಿಲ್ಲಿಸಲಿ ಎಂದು ಒತ್ತಾಯಿಸಿದರು.

ರೈತರ ಮನವಿ ಸ್ವೀಕರಿಸಲು ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ ಆಗಮಿಸಿದರು. ಆದರೆ ಡಿಸಿ ಅಥವಾ ತಹಸೀಲ್ದಾರ್‌ ಸ್ಥಳಕ್ಕೆ ಬರಬೇಕು ಎಂದು ಹೋರಾಟಗಾರರು ಪಟ್ಟು ಹಿಡಿದರು. ಪರಿಸ್ಥಿತಿ ತೀವ್ರತೆ ಅರಿತ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ತಹಸೀಲ್ದಾರರನ್ನು ಸಂಪರ್ಕಿಸಿ ಸ್ಥಳಕ್ಕೆ ಆಗಮಿಸುವಂತೆ ಮನವಿ ಮಾಡಿದರು. ಆಗ ತಹಸೀಲ್ದಾರ್‌ ಕುಮಾರಸ್ವಾಮಿ ಆಗಮಿಸಿದರು. ಮಾಜಿ ಶಾಸಕ ಬಸವರಾಜ ದಢೇಸ್ಗೂರು ಅವರು ತಹಸೀಲ್ದಾರ್ ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ, ನಾವು ಇಲ್ಲಿ ರಸ್ತೆ ಮೇಲೆ ಕುಳಿತು ನೀರಿಗಾಗಿ ಪ್ರತಿಭಟನೆ ನಡೆಸಿದ್ದೇವೆ. ನೀವು ನೆಲದ ಮೇಲೆ ಕುಳಿತರೆ ನಮ್ಮ ಕಷ್ಟ ತಿಳಿಯುತ್ತದೆ ಎಂದರು. ಇದಕ್ಕೆ ರೈತರು ಧ್ವನಿಗೂಡಿಸಿದರು. ಆಗ ತಹಸೀಲ್ದಾರು ರಸ್ತೆ ಮೇಲೆಯೇ ಕುಳಿತು ರೈತರ ಮಾತುಗಳನ್ನು ಆಲಿಸಿದರು. ರೈತ ಸಂಘದ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠಗೆ ಮನವಿ ಸಲ್ಲಿಸಿದರೆ, ಬಿಜೆಪಿ ಮಾಜಿ ಶಾಸಕ ಬಸವರಾಜ ದಢೇಸ್ಗೂರು ತಹಸೀಲ್ದಾರ್ ಕುಮಾರಸ್ವಾಮಿ ಇವರಿಗೆ ಮನವಿ ಸಲ್ಲಿಸಿದರು. ಪಿಐ ಸುಧೀರ್ ಬೆಂಕಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಟ್ಟಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟ್ರ್ಯಾಕ್ಟರ್‌ಗಳಲ್ಲಿ ಹಾಡುಗಳ ಅಬ್ಬರ, ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಾಲಾ ಶಿಕ್ಷಕರ ಪ್ರತಿಭಟನೆ