ಕೊಪ್ಪಳ: ಕರಾಟೆ ಕಲಿಯುವುದು ಇಂದಿನ ದಿನಮಾನಗಳಲ್ಲಿ ಅತ್ಯಂತ ಅಗತ್ಯವಾಗಿದ್ದು, ದೇಹ ಹಾಗೂ ಮನಸ್ಸನ್ನು ಗಟ್ಟಿಗೊಳಿಸುವುದರ ಜತೆಗೆ ಸ್ವಯಂರಕ್ಷಣೆಗೆ ಸಹಕಾರಿ. ವಿಶೇಷವಾಗಿ ಹೆಣ್ಣು ಮಕ್ಕಳು ಕರಾಟೆ ಕಲಿಯಬೇಕು ಎಂದು ಜೆಸ್ಕಾಂ ಕೊಪ್ಪಳದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಮೋಟ್ಲಾ ನಾಯಕ ಹೇಳಿದರು.
ಕಲ್ಯಾಣ ಕರ್ನಾಟಕ ಸ್ಪೋರ್ಟ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ದಶರತ್ ಡಿ. ಮಾತನಾಡಿ, 13 ವರ್ಷಗಳ ಬಳಿಕ ಕರಾಟೆಯನ್ನು ದಸರಾ ಕ್ರೀಡಾಕೂಟಕ್ಕೆ ಮರು ಸೇರ್ಪಡೆಗೊಳಿಸಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಉತ್ತಮ ತರಬೇತಿಯೊಂದಿಗೆ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಲ್ಯಾಣ ಕರ್ನಾಟಕಕ್ಕೆ ಕೀರ್ತಿ ತರಬೇಕು ಎಂದು ಹಾರೈಸಿದರು.
ಕಲಬುರಗಿ ವಿಭಾಗದ ಏಳು ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಕೆ.ಪಿ. ಜೋಶ್, ಕೃಷ್ಣ ಗೌಳಿ, ಶಾಹೀದ್ ಹುಸೇನ್, ಹನುಮೇಶ ಬಾರಕೇರ, ಡಿ. ಬಾಷಾ ಸಾಹೇಬ್, ಲಕ್ಷ್ಮೀಕಾಂತ, ಮನೋಹರ ಬಿರನೂರು, ಅನಿರುದ್ದೀನ್ ಪಾತ್ರೆ, ಮರಿಸ್ವಾಮಿ, ಪ್ರಸಾದ, ಭೀಮಾಶಂಕರ ಭಾಗವಹಿಸಿದ್ದರು.ರಾಜಾಬಕ್ಷಿ ಎಚ್.ವಿ. ಪ್ರಾಸ್ತಾವಿಕ ಮಾತನಾಡಿದರು. ರಾಕೇಶ್ ಕುಂಬಾರ ಹಾಗೂ ದೇವಪ್ಪ ಕಲ್ಲನವರ ಸ್ವಾಗತಿಸಿದರು. ಮಹಾಂತೇಶ ಮಂಗಳೂರು ನಿರೂಪಿಸಿದರು. ಚಾಂದಪಾಷಾ ವಂದಿಸಿದರು.