ಕನ್ನಡಪ್ರಭ ವಾರ್ತೆ ಹಾಸನ ಕರವೇ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸುವಲ್ಲಿ ವಿಫಲ ಹಾಗೂ ಹೇಮಾವತಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುವುದನ್ನು ತಡೆಯುವಲ್ಲಿ ವೈಫಲ್ಯ ಖಂಡಿಸಿ ಕರವೇ ಕಾರ್ಯಕರ್ತರು ಬುಧವಾರ ಜಿಲ್ಲಾ ಪಂಚಾಯತ್ ಮುಂಭಾಗ ಜಿಲ್ಲಾ ಉಸ್ತುವಾರಿ ಸಚಿವರ ಕಾರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾಗ ಸಚಿವರು ಬರುವ ಕೆಲವೇ ನಿಮಿಷ ಇರುವಾಗಲೇ ಪೊಲೀಸರು ಮುಂಜಾಗ್ರತ ಕ್ರಮವಾಗಿ ಪೊಲೀಸರು ಎಲ್ಲರನ್ನು ಬಂಧಿಸಿ ವಾಹನದಲ್ಲಿ ಕರೆದೊಯ್ದರು. ಹಾಸನಾಂಬ ಉತ್ಸವದ ಪೂರ್ವ ಸಿದ್ಧತಾ ಸಭೆ ನಡೆಸಲು ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಆಗಮಿಸಿದ್ದರು. ಆಗಸ್ಟ್ ೧೫ರ ನಂತರ ಜಿಲ್ಲೆಗೆ ಆಗಮಿಸದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳು ಪೂರ್ಣ ಬರಪೀಡಿತ ತಾಲೂಕುಗಳ ಘೋಷಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದ ಕರವೇ ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಮರಪಟ್ಟಿಗೆ ಸೇರಿಸಲೇಬೇಕು. ಇಲ್ಲವಾದರೇ ಯಾರಾದರೂ ಸಚಿವರು ಹಾಸನಕ್ಕೆ ಬಂದರೇ ಘೇರಾವ್ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುತ್ತಿಗೆ ಹಾಕಲು ಕಾದು ನಿಂತಿದ್ದ ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಮನುಕುಮಾರ್ ಸೇರಿ ಮುಂಜಾಗ್ರತಾ ಕ್ರಮವಾಗಿ ೨೦ಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಸಿ.ಡಿ. ಮನುಕುಮಾರ್ ಮಾತನಾಡಿ, ಬರ ಪರಿಸ್ಥಿತಿ ಇದ್ದರೂ ಮತ್ತು ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಇದುವರೆಗೂ ಒಂದು ದಿನವು ಬಂದಿರಲಿಲ್ಲ. ಅನೇಕ ಬಾರಿ ಪ್ರತಿಭಟನೆ ಮಾಡಲಾಗಿದ್ದರೂ ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದರು. ಅಧಿಕಾರಿಗಳ ಬಳಿ ಕೇವಲವಾಗಿ ನಡೆದುಕೊಳ್ಳುವ, ಪ್ರವೃತ್ತಿಯಲ್ಲಿ ಸರಕಾರಿ ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡುವುದನ್ನೆಲ್ಲಾ ಖಂಡಿಸಿ ನಾವು ಘೇರಾವ್ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರು ಬರುತ್ತಿದ್ದರು. ಆದರೇ ಮುಂಚಿತವಾಗಿ ನಮ್ಮನ್ನು ಪೊಲೀಸರು ಬಂಧಿಸಿದ್ದಾರೆ. ಸಚಿವರು ಹಲವಾರು ತಿಂಗಳ ನಂತರ ಹಾಸನಕ್ಕೆ ಆಗಮಿಸಿದ್ದು, ಈ ವೇಳೆ ಕಪ್ಪು ಬಾವುಟ ಪ್ರದರ್ಶಿಸಿ ಘೇರಾವ್ ಮಾಡುವ ಉದ್ದೇಶವಿತ್ತು. ಎರಡು ತಿಂಗಳಾದರೂ ಕೂಡ ಹಾಸನ ಜಿಲ್ಲೆಯನ್ನು ಬರಪೀಡಿತ ಪಟ್ಟಿಗೆ ಸೇರಿಸಿಲ್ಲ. ಸಮಸ್ಯೆ ಬಗೆಹರಿಸಬೇಕು ಎನ್ನುವ ವಿಚಾರದಲ್ಲಿ ಕಾಲಿಟ್ಟಿರಲಿಲ್ಲ. ಇವತ್ತು ಆಗಮಿಸಿದ್ದು ಈ ನಿಟ್ಟಿನಲ್ಲಿ ಘೇರಾವ್ ಕಾರ್ಯಕ್ರಮ ಹಮ್ಮಿಕೊಂಡಿದ್ದ ವೇಳೆ ಮೊದಲೆ ನಮ್ಮನ್ನು ಪೊಲೀಸರು ಬಂಧಿಸಿರುವುದಾಗಿ ಹೇಳಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಸೀತಾರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತನುಗೌಡ, ತಾಲೂಕು ಅಧ್ಯಕ್ಷ ಶಿವಣ್ಣಗೌಡ, ತೋಫಿಕ್, ಸಮೀರ್ ಅಹಮದ್, ಕುಮಾರ್, ಧರ್ಮರಾಜು, ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಮಂಜುನಾಥ್, ಯುವ ಮಹಿಳಾ ಘಟಕದ ಅಧ್ಯಕ್ಷೆ ದೇವಿಕಾ ಮಧು ಸೇರಿದಂತೆ ಇತರರನ್ನು ಬಂಧಿಸಲಾಗಿದೆ.