ರಾಜ್ಯಪಾಲರ ಕರ್ನಾಟಕ ವಿರೋಧಿ ಧೋರಣೆ ಖಂಡಿಸಿ ಕರವೇ ಪ್ರತಿಭಟನೆ

KannadaprabhaNewsNetwork |  
Published : Apr 08, 2026, 03:15 AM IST
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲರ ನಡೆ ಖಂಡಿಸಿ ಕರವೇ ಜಿಲ್ಲಾ ಘಟಕದ ಮುಖಂಡರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತಾ, ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ್ರ ಬಣ) ಜಿಲ್ಲಾ ಘಟಕದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.

ಹಾವೇರಿ: ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತಾ, ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ್ರ ಬಣ) ಜಿಲ್ಲಾ ಘಟಕದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಹಿಂದೆ ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ರಾಜ್ಯಪಾಲರು ತಮ್ಮ ಕಾರ್ಯವ್ಯಾಪ್ತಿ ಮೀರಿ ಕನ್ನಡಿಗರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರು ಕರ್ನಾಟಕದಲ್ಲಿ ಒಂದೇ ಒಂದು ನಿಮಿಷವೂ ರಾಜ್ಯಪಾಲರಾಗಿ ಉಳಿಯುವ ನೈತಿಕತೆ ಕಳೆದುಕೊಂಡಿದ್ದಾರೆ.ರಾಜ್ಯಪಾಲರು ರಾಜ್ಯದ ದಿನನಿತ್ಯದ ಆಡಳಿತದಲ್ಲಿ ಮೂಗು ತೂರಿಸುವುದು ಅತ್ಯಂತ ಆಕ್ಷೇಪಾರ್ಹವಾದ ಬೆಳವಣಿಗೆಯಾಗಿದೆ. ರಾಜ್ಯ ಸರ್ಕಾರವನ್ನು ಕರ್ನಾಟಕದ ಜನತೆ ಆಯ್ಕೆ ಮಾಡಿದ್ದಾರೆ. ನಾಡಿನ ಜನರ ಬೇಕು, ಬೇಡಗಳನ್ನು ಸರ್ಕಾರ ತೀರ್ಮಾನಿಸುತ್ತದೆ. ಹೀಗಿರುವಾಗ ಸರ್ಕಾರದ ಮುಖ್ಯಸ್ಥರಾಗಿ ನಾಡಪರ ಕಾಳಜಿಯ ನಿರ್ಧಾರಗಳನ್ನು ಬೆಂಬಲಿಸುವುದು ಅವರ ಕರ್ತವ್ಯವಾಗಿರುತ್ತದೆ. ಆದರೆ ಅವರು ಹಿಂದಿ ಮಾಫಿಯಾ ಪರವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ತೋರುತ್ತದೆ. ಹೀಗಾಗಿ ಅವರನ್ನು ಕೇಂದ್ರ ಸರ್ಕಾರ ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿದರು.ರಾಜ್ಯ ಕಾರ್ಯದರ್ಶಿ ಕರಬಸಯ್ಯ ಬಸರಿಹಳ್ಳಿಮಠ ಮಾತನಾಡಿ, ಕರ್ನಾಟಕದ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ತೀರ್ಮಾನಿಸುತ್ತದೆ. ಇದಕ್ಕಾಗಿಯೇ ನಾವು ಸರ್ಕಾರವನ್ನು ಆಯ್ಕೆ ಮಾಡಿ ಕಳಿಸಿದ್ದೇವೆ. ಇದನ್ನು ಪ್ರಶ್ನಿಸಲು ರಾಜ್ಯಪಾಲರು ಯಾರು? ಅವರಿಗೆ ಸಂವಿಧಾನ ಈ ಅವಕಾಶ ನೀಡಿಲ್ಲ. ತೃತೀಯ ಭಾಷೆ ಗ್ರೇಡಿಂಗ್ ವ್ಯವಸ್ಥೆಯ ನಿರ್ಧಾರ ಸರ್ಕಾರ ಕೈಗೊಂಡಿದೆ. ಇದನ್ನು ಬದಲಿಸುವ ಪ್ರಯತ್ನ ಯಾರೇ ಮಾಡಿದರೂ ರಕ್ತಕ್ರಾಂತಿಯಾಗುತ್ತದೆ. ರಾಜ್ಯಪಾಲ ಗೆಹಲೋತ್ ಹಿಂದಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಲ್ಲೆಲ್ಲಾ ತೃತೀಯ ಭಾಷೆಯಾಗಿ ಕನ್ನಡ ಕಲಿಸಲು ತಾಕೀತು ಮಾಡಲಿ. ಅಷ್ಟೇ ಯಾಕೆ ಅವರ ಸ್ವಂತ ರಾಜ್ಯವಾದ ಮಧ್ಯಪ್ರದೇಶದಲ್ಲಿ ಈಗಲೂ ಎರಡೇ ಭಾಷೆಗಳನ್ನು ಕಲಿಸಲಾಗುತ್ತಿದೆ. ಮೂರನೇ ಭಾಷೆಯನ್ನಾಗಿ ಕಡ್ಡಾಯವಾಗಿ ಕನ್ನಡ ಕಲಿಸುವಂತೆ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಆಗ್ರಹಿಸಿ ಅಪರ ಡಿಸಿ ಎಲ್.ನಾಗರಾಜ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸತೀಶಗೌಡ ಮುದಿಗೌಡ್ರ, ಜಿಲ್ಲಾ ಉಪಾಧ್ಯಕ್ಷ ನಂದೀಶ್ ಗೊಡ್ಡೆಮ್ಮಿ, ತಾಲೂಕಾಧ್ಯಕ್ಷ ಹಾಲೇಶ ಹಾಲಣ್ಣನವರ, ನಾಗರಾಜ ಪೂಜಾರ, ರಮೇಶ ಅರಗೊಳ, ಮಾರುತಿ ಪೂಜಾರ, ಹಸನಸಾಬ ಹತ್ತಿಮತ್ತೂರ, ಕೊಟ್ರೇಶ್ ಗುತ್ತೂರ, ಚನ್ನಪ್ಪ ಹೊನ್ನಮ್ಮನವರ, ಶಿವಾನಂದ ಪೂಜಾರ, ರಾಮಣ್ಣ ಅಗಸರ, ಸತ್ಯವತಿ ಕಡೇರ, ಈರಮ್ಮ ಕಾಡಸಾಲಿ, ಗೌಸಪಾಕ್ ಬಾಲೆಬಾಯಿ, ಫಕ್ರುದ್ಧೀನ ಅಂಗಡಿಕಾರ, ಕರಬಸ್ಸು ಕುರಬಗೇರಿ, ಕುಮಾರ ಕುಪ್ಪೆಲೂರು, ಯಲ್ಲಪ್ಪ ಪೊಟೇರ್, ಪ್ರವೀಣ ಗೌಡ್ರ, ಹರೀಶ ಕೋಳೆಪ್ಪನವರ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಗಡಿಯಲ್ಲಿ ಸಂಭ್ರಮದ ಶೇಷಾಚಲ ಸದ್ಗುರುಗಳ ರಥೋತ್ಸವ
ದುರಸ್ತಿಯಾಗದ ರಸ್ತೆ ಬಂದ್ ಮಾಡಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ