ತಾಲೂಕು ಕೇಂದ್ರ ಕಮಲನಗರದಲ್ಲಿ ನಿರ್ಮಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಬಳಿಕ ಕರವೇ ಅಧ್ಯಕ್ಷ ಸುಭಾಷ ಗಾಯಕವಾಡ ನೇತೃತ್ವದ ನಿಯೋಗ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿಗೆ ಮನವಿ ಸಲ್ಲಿಸಿತು.
ಕನ್ನಡಪ್ರಭ ವಾರ್ತೆ ಕಮಲನಗರ
ಕಮಲನಗರ ತಾಲೂಕು ಕೇಂದ್ರವಾಗಿ ಹಲವಾರು ವರ್ಷಗಳು ಕಳೆದರೂ ಪಟ್ಟಣದಲ್ಲಿ ಅನೇಕ ಕಚೇರಿಗಳು ಇನ್ನೂ ಆರಂಭವಾಗಿಲ್ಲ ಹೀಗಾಗಿ ಶೀಘ್ರದಲ್ಲಿ ಎಲ್ಲಾ ಇಲಾಖೆಗಳ ಕಚೇರಿಗಳನ್ನು ಆರಂಭಿಸಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸುಭಾಷ ಗಾಯಕವಾಡ ನೇತೃತ್ವದ ನಿಯೋಗ ಸಿಎಂಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಅಮಿತಕುಮಾರ ಕುಲಕರ್ಣಿಗೆ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಮಾತನಾಡಿ, ಅನೇಕ ವರ್ಷಗಳಿಂದ ಮಿನಿ ವಿಧಾನಸೌಧದ ಕಟ್ಟಡ ಕಾಮಗಾರಿ ನೆನಗುದಿಗೆ ಬಿದ್ದಿದೆ. ಅದಲ್ಲದೇ ಸದ್ಯ ಇರುವ ಕೆಲ ಇಲಾಖೆಗಳ ಕಚೇರಿಗಳು ಸ್ವಂತ ಕಟ್ಟಡ ಇಲ್ಲದೆ ಸರ್ಕಾರಿ ಶಾಲೆಗಳ ಕೋಣೆಗಳಲ್ಲಿ ನಡೆಯುತ್ತಿವೆ ಎಂದು ವ್ಯವಸ್ಥೆಗೆ ಹಿಡಿಶಾಪ ಹಾಕಿದರು.
ಕಮಲನಗರ ತಾಲೂಕು ಕೇಂದ್ರವಾದರೂ ಔರಾದ್ ಪಟ್ಟಣಕ್ಕೆ ಜನರ ಅಲೆದಾಟ ತಪ್ಪಿಲ್ಲ. ಇನ್ನೂ ಅನೇಕ ಇಲಾಖೆಯ ಕಚೇರಿಗಳು ಪ್ರಾರಂಭವಾಗಿಲ್ಲ. ಇದರಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ರ‍್ಯಾಲಿ:
ಕಮಲನಗರ ಪಟ್ಟಣದ ಅಲ್ಲಮಪ್ರಭು ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸೇರಿ ಸೋನಾಳ ಮುಖ್ಯರಸ್ತೆ ಮಾರ್ಗವಾಗಿ ಪೊಲೀಸ್ ಠಾಣೆ, ಅತಿಥಿ ಗೃಹ, ಡಾ. ಚನ್ನಬಸವ ಪಟ್ಟದೇವರ ಸ್ಮಾರಕ ಭವನದಿಂದ ಪ್ರತಿಭಟನಾ ರ‍್ಯಾಲಿ ತಹಸೀಲ್ ಕಚೇರಿಗೆ ತಲುಪಿತು.
ಪ್ರತಿಭನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜೈಘೋಷಣೆಗಳನ್ನು ಕೂಗಿದರು. ಕರವೇ ಬೀದರ್ ದಕ್ಷಿಣ ಅದ್ಯಕ್ಷ ವೀರಶೆಟ್ಟಿ ಗೌಸಪೂರೆ, ಔರಾದ್ ತಾಲೂಕು ಅಧ್ಯಕ್ಷ ಅನೀಲ ಹೇಡೆ, ಸುಭಾಷ ಮಿರ್ಚೆ, ಕಮಲನಗರ ವಲಯ ಅಧ್ಯಕ್ಷ ಆನಂದ ಬಿರಾದಾರ, ಪ್ರಶಾಂತ ಖಾನಾಪೂರೆ, ರಾಮೇಶ್ವರ ಶಿವಣಕರ, ಆಯೂಬ ಖುರೇಶಿ, ಮೊಹಮ್ಮದ್ ಪಾಷಾ, ರಾಜಕುಮಾರ ಗಾಯಕವಾಡ, ಸಾಯಿನಾಥ ಕಾಂಬಳೆ, ಮಲ್ಲಪ್ಪ ಬಿರಾದಾರ, ಅಜಯ ಸೂರ್ಯವಂಶಿ, ಮಂಜುನಾಥ ಸ್ವಾಮಿ ಹಾಗೂ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.