ಶಾಂತಿಯುತ ಹೋರಾಟ ನಡೆಸುತ್ತಿರುವವರನ್ನು ಬಂಧಿಸಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಬಗೆದ ದ್ರೋಹವಾಗಿದೆ. ಸರ್ಕಾರ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡುವ ಬದಲು ಉದ್ಯೋಗ ಕೇಳಿದ ಯುವಜನರನ್ನು ಬಂಧಿಸುವ ಮೂಲಕ ಜೈಲು ಭರ್ತಿ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಖಾಲಿ ಇರುವ ಸರ್ಕಾರಿ ಹುದ್ದೆಗಳಿಗೆ ಶೀಘ್ರ ನೇಮಕಾತಿ ಮಾಡುವಂತೆ ಒತ್ತಾಯಿಸಿ ಧಾರವಾಡದಲ್ಲಿ ಶಾಂತಿಯುತ ಮೆರವಣಿಗೆ ನಡೆಸುತ್ತಿದ್ದ ಜನ ಸಾಮಾನ್ಯರ ವೇದಿಕೆ ಹಾಗೂ ದ್ರಾವಿಡ ಕನ್ನಡಿಗರು ಚಳವಳಿ ಮುಂದಾಳುಗಳನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವೇದಿಕೆ ಕಾರ್ಯಕರ್ತರು, ಬಂಧಿತ ಹೋರಾಟಗಾರರು ಹಾಗೂ ಯುವಜನರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಶಾಂತಿಯುತ ಹೋರಾಟ ನಡೆಸುತ್ತಿರುವವರನ್ನು ಬಂಧಿಸಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಬಗೆದ ದ್ರೋಹವಾಗಿದೆ. ಸರ್ಕಾರ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡುವ ಬದಲು ಉದ್ಯೋಗ ಕೇಳಿದ ಯುವಜನರನ್ನು ಬಂಧಿಸುವ ಮೂಲಕ ಜೈಲು ಭರ್ತಿ ಮಾಡುತ್ತಿದೆ. ಕೂಡಲೇ ಎಲ್ಲ ಹೋರಾಟಗಾರರ ಬಿಡುಗಡೆ ಮಾಡದಿದ್ದರೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಜನರ ಪರ ಇಂದು ಮಾತನಾಡುವುದೇ ಕಷ್ಟವಾಗಿದೆ. ಜನರ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಡುವ ಚಳವಳಿಗಾರರ ಮನವಿಯನ್ನು ಪೊಲೀಸರು ಕೇಳಿಸಿಕೊಳ್ಳುವ ಕೆಲಸ ಮಾಡದೆ ಬಂಧಿಸಿರುವುದನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಕರುನಾಡ ಸೇವಕರು ಸಂಘಟನೆ ಎಂ.ಬಿ.ನಾಗಣ್ಣಗೌಡ, ನೆಲದನಿ ಬಳಗದ ಮಂಗಲ ಲಂಕೇಶ್, ಉಪನ್ಯಾಸಕ ರಾಜೇಂದ್ರ ಸಿಂಗ್ ಬಾಬು, ವೇದಿಕೆ ಸದಸ್ಯರು, ಹೋರಾಟಗಾರ ಷಣ್ಮುಖೇಗೌಡ, ತಿಮ್ಮೇಗೌಡ.ಶ್ರೀಕಾಂತ್ ಯಲಿಯೂರು ಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.